ADVERTISEMENT

ಕನ್ನಡದ ಮೊದಲ ರಾಜ್ಯ ಕಟ್ಟಿದ ಮಯೂರ ಬೆಳೆದ ಗ್ರಾಮವಿದು...

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2012, 11:45 IST
Last Updated 1 ನವೆಂಬರ್ 2012, 11:45 IST

ಶಿರಾಕೊಪ್ಪ: ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಕದಂಬ ಸಾಮ್ರಾಜ್ಯದ ಸ್ಥಾಪಕ ಮಯೂರ ಹಾಗೂ ಆತನಿಗೆ ಪ್ರೇರಕ ಶಕ್ತಿ ಆದ ತಾಳಗುಂದ  ಗ್ರಾಮವನ್ನು  ಪ್ರತಿಯೊಬ್ಬರು ನೆನೆಯಲೆಬೇಕು. ಕಾರಣ, ಕನ್ನಡದ ಮೊಟ್ಟಮೊದಲ ರಾಜ್ಯವಾಗಿ ಕದಂಬ ಸಾಮ್ರಾಜ್ಯ ಕಟ್ಟಿದ ವೀರ ಯುವಕ ಮಯೂರ ಬೆಳೆದ ಗ್ರಾಮವಿದು. ಇದು ಶಿಕಾರಿಪುರ ತಾಲ್ಲೂಕಿನಲ್ಲಿ ಇದ್ದು, ಹಲವಾರು ವಿಶೇಷತೆಗಳನ್ನು ಹೊಂದಿದೆ.

ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕ ಮುಂದೆ  ತನ್ನ ಸ್ವಾಭಿಮಾನಕ್ಕೆ ದಕ್ಕೆ ಬಂದಾಗ ಲೇಖನಿ ಹಿಡಿದಿದ್ದ ಕೈಯಲ್ಲಿ ಖಡ್ಗ ಹಿಡಿದು, ಪಲ್ಲವರ ಸೊಲ್ಲಡಗಿಸಿ, ಕದಂಬ  ಸಾಮ್ರಾಜ್ಯ ಕಟ್ಟಿದ ಎಂದು ಜಾರ್ಜ್ ಎಂ. ಮೊರಾಸ್ ಅವರು ತಮ್ಮ ಕದಂಬ ಕುಲ ಎಂಬ ಆಂಗ್ಲ ಪುಸ್ತಕದಲ್ಲಿ ವಿವರಿಸಿದ್ದಾರೆ.

ತಾಳಗುಂದದ ಪ್ರಣವೇಶ್ವರ ದೇವಾಲಯದ ಆವರಣದಲ್ಲಿರುವ ಕಾಕುತ್ಸ ವರ್ಮನ ಕಾಲದಲ್ಲಿ ನಿರ್ಮಿಸಲಾಗಿರುವ ಶಾಸನದ ಪ್ರಕಾರ ತಾಳಗುಂದ ಕದಂಬರ ಮೂಲ ಸ್ಥಾನ ವಾಗಿತ್ತು. ಅವರು ಇಲ್ಲಿ ಆಡಳಿತ ನಡೆಸುತ್ತಿದ್ದ ಚುಟು ವಂಶದಿಂದ ಈ ಸ್ಥಳ ಆಕ್ರಮಿಸಿ ನಂತರ ಬನವಾಸಿ ರಾಜಧಾನಿ ಮಾಡಿ ಕದಂಬ ಸಾಮ್ರಾಜ್ಯ ಸ್ಥಾಪನೆ ಮಾಡಿದ ಬಗ್ಗೆ ಮಾಹಿತಿ ನೀಡುತ್ತದೆ.

ಅಂದು ಸ್ಥಾಪನೆಯಾದ ಕದಂಬ ರಾಜ್ಯ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿತ್ತು. ಅಂಥ ರಾಜ್ಯ ಕಟ್ಟಿದ ಮಯೂರ ಎಂಬ ರಾಜ ಕನ್ನಡಿಗರ ಮನಸ್ಸಿನ ಆಳದಿಂದ ದೂರ ಸರಿಯುತ್ತಿದ್ದಾನೆ. ಅಂಥ ಮಹಾನ್ ಚೇತನವನ್ನು ನೆನಪಿಸಿಕೊಳ್ಳುವ ಕಾರ್ಯ ನವೆಂಬರ್ ತಿಂಗಳಲ್ಲಿಯಾದರೂ ಮಾಡಬೇಕಾಗಿದೆ ಎಂದು ಜನರು ಅಪೇಕ್ಷಿಸುತ್ತಿದ್ದಾರೆ.

ಎಲ್ಲಾದರೂ ಇರು ಎಂಥಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದೂ ನವೆಂಬರ್ ತಿಂಗಳು ಕಳೆಯುವ ವರೆಗೂ ದೇಶ-ವಿದೇಶಗಳಲ್ಲಿ ಕನ್ನಡದ ಡಿಂಡಿಮ ಬಾರಿಸುವ ಕನ್ನಡಿಗರು ಕನ್ನಡದ ಮೂಲ ನೆಲೆಯಾದ ತಾಳಗುಂದದ ಗತ ವೈಭವ ಮರೆತಿರುವುದು ವಿಸ್ಮಯದ ಸಂಗತಿ. ಹತ್ತು ಹಲವಾರು ಪ್ರಥಮಗಳಿಗೆ ಕಾರಣವಾದ ತಾಳಗುಂದ ಈಗ ಕೊನೆಯ ಸಾಲಿನಲ್ಲಿ ನಿಂತಿರುವುದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ಇಂದೂ ಕನ್ನಡ ಭಾಷೆ ಉಚ್ಛ್ರಾಯ ಸ್ಥಿತಿಯಲ್ಲಿರಲು ಮೂಲ ಕಾರಣ ಕದಂಬ ಸಾಮ್ರಾಜ್ಯದ ಸ್ಥಾಪಕ  ತಾಳಗುಂದದ ಮಯೂರ ವರ್ಮ ಅಂಥ ವ್ಯಕ್ತಿಯನ್ನು ರಾಜ್ಯ ಸರ್ಕಾರ ಖಂಡಿತವಾಗಲೂ ಕಡೆಗಣಿಸುತ್ತಾ ಬಂದಿದೆ. ವರ್ಷಕ್ಕೆ ಒಮ್ಮೆ ಬನವಾಸಿ ಉತ್ಸವ ನಡೆಸುವ ಸರ್ಕಾರ ಮತ್ತೆ ಆ ಬಗ್ಗೆ ಚಕಾರ ಎತ್ತುವುದಿಲ್ಲ ಎಂಬ ದೂರುಗಳಿವೆ.

ರಾಜಧಾನಿಯ ಗಲ್ಲಿಗಳಲ್ಲಿ ಕೆಂಪು, ಹಳದಿ ಶಾಲು ಹೊದ್ದು ತಿರುಗುವ ನಾಯಕರಿಗಳಿಗೆ ತಾಳಗುಂದ, ತಾಳಗುಂದ ಶಾಸನದ ಬಗ್ಗೆ ಎಷ್ಟು ತಿಳಿದಿದೆ ಎನ್ನುವುದೇ ಸೋಜಿಗದ ಸಂಗತಿ. ಇಂದೂ ನಾವು ಕರ್ನಾಟಕ ರಾಜ್ಯದಲ್ಲಿ ಜೀವಿಸುತ್ತಿದ್ದು, ಇಲ್ಲಿಯ ಆಡಳಿತ ಭಾಷೆ ಕನ್ನಡವಾಗಿ ಇಂದಿಗೂ ಉಳಿದುಕೊಳ್ಳಲು ಮೂಲ ಕಾರಣವಾದ ಮಯೂರ ವರ್ಮ ಹಾಗೂ ಅದಕ್ಕೆ ಪ್ರೇರಕ ಶಕ್ತಿಯಾದ ತಾಳಗುಂದ ಭಾಗದ ಜನರ ಬಗ್ಗೆ ಸರ್ಕಾರ ಹಾಗೂ ಕನ್ನಡ ಪರ ಸಂಘಟನೆಗಳು ತಾತ್ಸಾರ ಮನೋಭಾವ ಕೈ ಬಿಟ್ಟು. ಇನ್ನಾದರೂ ಇತ್ತ ಗಮನಹರಿಸಲಿ ಎಂದು  ಆಗ್ರಹಿಸುತ್ತಾರೆ ಸಾರ್ವಜನಿಕರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.