ADVERTISEMENT

ಕನ್ನಡ ತೇರಿಗೆ ಕೈ ಜೋಡಿಸಿದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 4:30 IST
Last Updated 12 ಮಾರ್ಚ್ 2011, 4:30 IST

ಶಿವಮೊಗ್ಗ: ಬೆಳಗಾವಿಯಲ್ಲಿ ನಡೆಯುತ್ತಿರುವ ಎರಡನೇ ವಿಶ್ವ ಕನ್ನಡ ಸಮ್ಮೇಳನಕ್ಕೆ ಪೂರಕವಾಗಿ ಶುಕ್ರವಾರ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು, ಸಾರ್ವಜನಿಕರಲ್ಲಿ ಕನ್ನಡದ ಕಂಪು ಪಸರಿಸಲು ‘ಕನ್ನಡ ಜಾಗೃತಿ’ ರ್ಯಾಲಿ ನಡೆಸಿದರು.‘ಬನ್ನಿ ನುಡಿ ಜಾತ್ರೆಗೆ’, ‘ಎಲ್ಲರೂ ಸೇರಿ ಎಳೆಯೋಣ ಕನ್ನಡದ ತೇರು’, ‘ಕನ್ನಡವೇ

ಸತ್ಯ; ಕನ್ನಡವೇ ನಿತ್ಯ’, ‘ಕನ್ನಡದ ಅಭಿವೃದ್ಧಿಗೆ ಕೈಜೋಡಿಸಿ’... ಹೀಗೆ ಹತ್ತುಹಲವು ಘೋಷಣೆಗಳೊಂದಿಗೆ ಶಾಲಾ ಮಕ್ಕಳು ಜನರನ್ನು ಆದರದಿಂದ ಸಮ್ಮೇಳನಕ್ಕೆ ಸ್ವಾಗತಿಸಿದರು.

ನಗರದಲ್ಲಿರುವ ವಿವಿಧ ಸರ್ಕಾರಿ ಶಾಲೆಗಳಿಗೆ ಮಕ್ಕಳು ಆಗಮಿಸುತ್ತಿದ್ದಂತೆ ಎಂದಿನಂತೆ ನಾಡಗೀತೆ ಹಾಡಿದರು. ನಂತರ, ಆಯಾ ಶಾಲೆಯ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಕನ್ನಡದ ಕಂಪನ್ನು ಪಸರಿಸುವ ಕೆಲಸ ಮಕ್ಕಳಿಂದ ನಡೆಯಿತು. ಕನ್ನಡ ಪರವಾದ ಉಕ್ತಿಗಳನ್ನು ಫಲಕಗಳಲ್ಲಿ ಪ್ರದರ್ಶಿಸುವುದರ ಜತೆಗೆ ಕನ್ನಡದ ಬಗ್ಗೆ ಅಭಿಮಾನ ಮೂಡುವಂತೆ ಮಾಡಿದರು.

ಎಲ್ಲ ಶಾಲೆಗಳ ಮಕ್ಕಳು ಡೋಲು ಬಾರಿಸುತ್ತ ಮೆರವಣಿಗೆಯಲ್ಲಿ ಬಂದರು. ‘ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಆಗಲಿ’, ‘ನಿಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಿ’, ‘ಕನ್ನಡದ ಬಗ್ಗೆ ನಿರ್ಲಕ್ಷ್ಯಭಾವ ಬೇಡ’ ಎಂಬ ಮಕ್ಕಳ ಘೋಷಣೆಗಳು ಪೋಷಕರನ್ನು ಜಾಗೃತಗೊಳಿಸುವಂತೆ ಮಾಡಿದವು.ನಗರದ ದುರ್ಗಿಗುಡಿ ಆಂಗ್ಲ ಮಾಧ್ಯಮ ಶಾಲೆ, ವೆಂಕಟೇಶನಗರದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಸೇರಿದಂತೆ ಬಹುತೇಕ ಶಾಲೆಗಳ ಮಕ್ಕಳಿಂದ ಬಡಾವಣೆಗಳಲ್ಲಿನ ಮನ ಮನೆಗಳಲ್ಲಿ ಕನ್ನಡ ಡಿಂಡಿಮ ಬಾರಿಸಿತು. ಮೆರವಣಿಗೆಯಲ್ಲಿ ಶಿಕ್ಷಕರೂ ಪಾಲ್ಗೊಂಡಿದ್ದರು.

ವಿಶ್ವ ಕನ್ನಡ ಸಮ್ಮೇಳನದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದ ಮೇರೆಗೆ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಂದ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಮಾರ್ಚ್ 12ರಂದು ಕೂಡ ರ್ಯಾಲಿ ನಡೆಯಲಿದೆ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಕಮಲಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.