ADVERTISEMENT

ಕಬ್ಬು ದರ ಪುನರ್ ಪರಿಶೀಲನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2011, 10:00 IST
Last Updated 11 ಆಗಸ್ಟ್ 2011, 10:00 IST
ಕಬ್ಬು ದರ ಪುನರ್ ಪರಿಶೀಲನೆಗೆ ಆಗ್ರಹ
ಕಬ್ಬು ದರ ಪುನರ್ ಪರಿಶೀಲನೆಗೆ ಆಗ್ರಹ   

ಭದ್ರಾವತಿ: ರಾಜ್ಯ ಸರ್ಕಾರ ನಿಗದಿ ಮಾಡಿರುವ ಕಬ್ಬು ದರವು ಅಸಮರ್ಪಕವಾಗಿದೆ. ಕೂಡಲೇ ದರ ಪರಿಶೀಲನೆ ನಡೆಸಿ ನ್ಯಾಯಯುತ ದರ ಘೋಷಿಸಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರು ಬುಧವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಶಾಖೆ ನೇತೃತ್ವದಲ್ಲಿ ಇಲ್ಲಿನ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಗುಂಪುಗೂಡಿದ ನೂರಾರು ರೈತರು, ಸರ್ಕಾರದ ಬೆಲೆ ನೀತಿ ಖಂಡಿಸಿ ಘೋಷಣೆ ಕೂಗಿದರು.ಈ ಹಂತದಲ್ಲಿ ರಸ್ತೆ ಸಂಚಾರಕ್ಕೆ ತಡೆ ಮಾಡಿದ ಬೆಳೆಗಾರರು, ಸರ್ಕಾರ ಕಬ್ಬು ದರ ನಿಗದಿ ಮಾಡುವಲ್ಲಿ ಅನುಕರಣೆ ಮಾಡಿರುವ ಕ್ರಮ ಸರಿಯಲ್ಲ.

ರಾಷ್ಟ್ರದ ಇತರ ರಾಜ್ಯದಲ್ಲಿ ನಿಗದಿ ಮಾಡಿರುವ ದರಕ್ಕೆ ಹೋಲಿಸಿದಲ್ಲಿ ಇಲ್ಲಿನ ದರ ನಿಗದಿ ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ಅರ್ಧಗಂಟೆ ಕಾಲ ಸಂಚಾರಕ್ಕೆ ತಡೆ ಮಾಡಿದ ರೈತರು, ನಂತರ ಸರ್ಕಾರದ ಧೋರಣೆ ವಿರುದ್ಧ ಘೋಷಣೆ ಕೂಗುತ್ತಾ ತಹಶೀಲ್ದಾರ್ ಕಚೇರಿ ವರೆಗೆ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.
ಅಲ್ಲಿ ಜರುಗಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮುಖಂಡರು, ಹಾಲಿ ನಿಗದಿ ಮಾಡಿರುವ ದರವನ್ನು ಸರ್ಕಾರ ಪುನರ್ ಪರಿಶೀಲಿಸಬೇಕು.

ಎಸ್‌ಎಪಿ ಕಾಯ್ದೆಯನ್ನು ಜಾರಿ ಮಾಡಬೇಕು. ಇಲ್ಲಿನ ಎಂಪಿಎಂ ಕಾರ್ಖಾನೆ ಕಳೆದ ಸಾಲಿನ ಬಾಕಿ ಹಣ ರೂ 450 ಅನ್ನು ಪಾವತಿಸುವಲ್ಲಿ ಶೀಘ್ರ ಮುಂದಾಗಬೇಕು ಎಂದು ಆಗ್ರಹಿಸಿದರು.ತಹಶೀಲ್ದಾರ್ ಬಿ. ಅಭಿಜಿನ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ನೇತೃತ್ವವನ್ನು ಸಂಘದ ಅಧ್ಯಕ್ಷ ಕೆ. ಈರಣ್ಣ, ಬಿ. ನಿಂಗಪ್ಪ, ಮಂಜಪ್ಪ ಗೌಡ, ರಮೇಶ್, ಎಚ್.ಪಿ. ರುದ್ರಪ್ಪ, ಶಫೀವುಲ್ಲಾ, ಕೃಷ್ಣೇಗೌಡ ಸೇರಿದಂತೆ ಇತರರು ವಹಿಸಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.