ADVERTISEMENT

ಕರ್ನಾಟಕವೂ ಕಾಂಗ್ರೆಸ್ ಮುಕ್ತ: ಈಶ್ವರಪ್ಪ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 11:20 IST
Last Updated 10 ಏಪ್ರಿಲ್ 2018, 11:20 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಶಿವಮೊಗ್ಗ: ದೇಶದ 21 ರಾಜ್ಯಗಳ ಕಾಂಗ್ರೆಸ್ ನಿರ್ನಾಮವಾಗಿದೆ. ಮುಂದಿನದು ಕರ್ನಾಟಕದ ಸರದಿ. ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ಮುಕ್ತವಾಗಲಿದೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು.

ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಇರುವ ಎಲ್ಲ ಅಕ್ರಮ ಕಸಾಯಿಖಾನೆಗಳಿಗೂ ಬೀಗ ಹಾಕಲಾಗುವುದು. ಗೋಹತ್ಯೆ ನಿಷೇಧಿಸುವ ಪ್ರಬಲ ಕಾನೂನು, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ತಡೆಯಲು ಸೂಕ್ತ ಕಾನೂನು ರೂಪಿಸಲಾಗುವುದು ಎಂದು ಸೋಮವಾರ ಪತ್ರಿಕಾ
ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಜ್ಯದಲ್ಲಿ ಗೋಹತ್ಯೆ ಮಿತಿ ಮೀರಿ ನಡೆಯುತ್ತಿದೆ. ಗೋಹತ್ಯೆ ಸಂಪೂರ್ಣ ನಿಲ್ಲಬೇಕು. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಗೋಹತ್ಯೆ ನಿಷೇಧಕ್ಕೆ ಮಸೂದೆ ಮಂಡಿಸಲಾಗಿತ್ತು. ಆದರೆ, ಅಂದು ಕಾಂಗ್ರೆಸ್‌ ಏಜೆಂಟ್ ರೀತಿ ಇದ್ದ ರಾಜ್ಯಪಾಲ ಭಾರದ್ವಾಜ್‌ ಅವರು ರಾಷ್ಟ್ರಪತಿ ಅಂಕಿತಕ್ಕೆ ಕಳುಹಿಸಿದ್ದರು. ಇದರಿಂದಾಗಿ ಕಾನೂನು ಜಾರಿಗೆ ಅಡ್ಡಿಯಾಯಿತು ಎಂದು ಟೀಕಿಸಿದರು.

ADVERTISEMENT

ದೇಶದ ಹಲವು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಮಾಡಲಾಗಿದೆ. ಆ ರಾಜ್ಯಗಳಲ್ಲಿನ ಕಾನೂನು ಅಧ್ಯಯನ ಮಾಡಿ, ತಜ್ಞರ ಜತೆ ಚರ್ಚಿಸಿ ರಾಜ್ಯದಲ್ಲೂ ಬಲಿಷ್ಠ ಕಾನೂನು ಜಾರಿಗೆ ತರಲಾಗುವುದು ಎಂದರು.

ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ತಡೆಗಟ್ಟಲು ಹಲವು ರಾಜ್ಯಗಳಲ್ಲಿ ಕಠಿಣ ಕಾನೂನು ಜಾರಿಯಲ್ಲಿದೆ. ಆದರೂ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮಾಡಿದ ಅಭಿವೃದ್ಧಿ ಕಾರ್ಯ, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳು, ಗೋಹತ್ಯೆ ನಿಷೇಧ, ಮಹಿಳೆಯ ರಕ್ಷಣೆಗೆ ಆದ್ಯತೆ ವಿಷಯಗಳನ್ನು ಇಟ್ಟುಕೊಂಡು ಈ ಬಾರಿಯ ಚುನಾವಣೆ ಎದುರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ, ಮುಖಂಡರಾದ ಡಿ.ಎಸ್. ಅರುಣ್, ಎಸ್.ಎನ್. ಚನ್ನಬಸಪ್ಪ, ಎನ್.ಜೆ. ರಾಜಶೇಖರ್, ಎಸ್. ಜ್ಞಾನೇಶ್ವರ್, ಎಸ್. ದತ್ತಾತ್ರಿ, ಮೋಹನ್ ರೆಡ್ಡಿ, ರಾಘವೇಂದ್ರ, ಅರುಣ್‌ಮಾರ್, ಕೆ.ವಿ. ಅಣ್ಣಪ್ಪ, ಹಿರಣ್ಣಯ್ಯ ಉಪಸ್ಥಿತರಿದ್ದರು.

19ಕ್ಕೆ ಈಶ್ವರಪ್ಪ ನಾಮಪತ್ರ

ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು ಏ.19ರಂದು ಬೆಳಗ್ಗೆ 11.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.ನಾಮಪತ್ರ ಸಲ್ಲಿಕೆಗೂ ಮೊದಲು ಬೆಳಿಗ್ಗೆ 10ಕ್ಕೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬರಲಿದ್ದಾರೆ.ಏ.17 ಮತ್ತು 18ರಂದು ನಗರದ ಎಲ್ಲಾ ವಾರ್ಡ್‌ಗಳ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಲಾಗುವುದು. ಪ್ರಮುಖ ಮಠಾಧೀಶರ ಭೇಟಿ ಮಾಡಿ ಆಶೀರ್ವಾದ ಪಡೆಯಲಾಗುವುದು. ಈ ಸಮಯದಲ್ಲಿ ಆಯಾ ವಾರ್ಡ್‌ಗಳ ಪಕ್ಷದ ಮುಖಂಡರು, ಕಾರ್ಯಕರ್ತರು, ಮಹಿಳೆಯರು, ಹಿತೈಷಿಗಳು ಭಾಗವಹಿಸುತ್ತಾರೆ ಎಂದು ಈಶ್ವರಪ್ಪ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.