ADVERTISEMENT

ಕಲೆ, ಸಾಹಿತ್ಯದಿಂದ ಸಂಸ್ಕಾರ: ತಾರಾ ಶಿವಾನಂದಪ್ಪ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 11:32 IST
Last Updated 12 ಅಕ್ಟೋಬರ್ 2017, 11:32 IST

ಸೊರಬ: ಕಲೆ, ಸಾಹಿತ್ಯ, ಸಂಸ್ಕೃತಿ ಮೈಗೂಡಿಸಿಕೊಳ್ಳುವುದರಿಂದ ಜೀವನದಲ್ಲಿ ಸಂಸ್ಕಾರ ಪಡೆಯಲು ಸಾಧ್ಯ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ತಾರಾ ಶಿವಾನಂದಪ್ಪ ಹೇಳಿದರು.

ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಈಚೆಗೆ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನತೆ ಮನುಷ್ಯ ಸಂಬಂಧ ಮರೆತು ಯಾಂತ್ರಿಕತೆಗೆ ಜೋತು ಬಿದ್ದಿದ್ದಾರೆ. ಸುತ್ತಲಿನ ಮನುಷ್ಯರು ಹಾಗೂ ಜೀವರಾಶಿಗಳ ಜೊತೆಗೆ ಮಾನವೀಯ ಸಂಬಂಧ ಹೊಂದಬೇಕಿದೆ ಎಂದು ಕಿವಿ ಮಾತು ಹೇಳಿದರು.

ADVERTISEMENT

ಪಠ್ಯೇತರ ಚಟುವಟಿಗೆಗಳು ಜೀವನ ಮೌಲ್ಯ ವೃದ್ಧಿಸುವಲ್ಲಿ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಓದಿನ ಜೊತಗೆ ಸಮಾಜಮುಖಿ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ನಾಯಕತ್ವ, ಸೃಜನಶೀಲತೆ, ಪ್ರಾಮಾಣಿಕತೆ, ಬ್ರಾತೃತ್ವ ಬೆಳೆಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನ ಶಿಬಿರಗಳು ಸಹಾಯಕವಾಗಿವೆ ಎಂದ ಅವರು, ದೇಶದ ಅಭಿವೃದ್ಧಿಯಲ್ಲಿ ಯುವ ಜನತೆಯ ಪಾತ್ರ ಹೆಚ್ಚಿದೆ. ಗ್ರಾಮಗಳ ಸ್ವಚ್ಛತೆಯಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿ ಹೊಂದಿದ್ದಲ್ಲಿ ಆರೋಗ್ಯವಂತ ಗ್ರಾಮಗಳನ್ನು ನಿರ್ಮಾಣ ಮಾಡಬಹುದು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುನಾಥ್ ಮಾತನಾಡಿ, ಗ್ರಾಮೀಣ ಜನರು ವೈಜ್ಞಾನಿಕತೆಯನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ಮಕ್ಕಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಕೊಡಿಸಿ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಸ್ವಚ್ಛತೆಯನ್ನು ಸ್ವಯಂಪ್ರೇರಿತ ಕಾರ್ಯವಾಗಿ ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಕೆ.ಆರ್.ಶಿವಾನಂದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಕೆ.ವಿಶ್ವನಾಥ್ ಪ್ರಾಸ್ತಾವಿಕ ಮಾತನಾಡಿದರು. ಶಿಬಿರಾರ್ಥಿಗಳು ಎನ್‌ಎಸ್‌ಎಸ್ ಗೀತೆ ಹಾಡಿದರು, ಶಿಬಿರಾಧಿಕಾರಿ ಎಂ.ಬಂಗಾರಪ್ಪ ಸ್ವಾಗತಿಸಿ, ಉಪನ್ಯಾಸಕ ಜಿ.ಬಂಗಾರಪ್ಪ ನಿರೂಪಿಸಿದರು.

ಮಾವಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಕುಮಾರ್ ಕಾಸ್ವಾಡಿಕೊಪ್ಪ, ಉಪಾಧ್ಯಕ್ಷೆ ಬೂದೇವಮ್ಮ, ಸದಸ್ಯರಾದ ದೇವೇಂದ್ರಪ್ಪ ಚೆನ್ನಾಪುರ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಮೀನಾಕ್ಷಿ ನಿರಂಜನಮೂರ್ತಿ, ಶಿಗ್ಗಾ ಗ್ರಾ.ಪಂ ಉಪಾಧ್ಯಕ್ಷ ಪ್ರಭಾಕರ್, ಕಸಾಪ ಅಧ್ಯಕ್ಷ ಹಾಲೇಶ್ ನವುಲೆ, ಗ್ರಾಮ ಸಮಿತಿ ಅಧ್ಯಕ್ಷ ಬಂಗಾರಪ್ಪ, ಮುಖಂಡರಾದ ಜೀವಣ್ಣ, ಹನುಮಂತಪ್ಪ, ನಾಗರಾಜ್, ಶೇಖರ್ ನಾಯ್ಕ್, ನಾಗಪ್ಪ ಉಪನ್ಯಾಸಕರಾದ ಪ್ರಿಯಕುಮಾರ್, ಎಚ್.ಕೆ.ಚಂದ್ರಶೇಖರ್, ಪ್ರವೀಣ್, ರೇವಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.