ADVERTISEMENT

ಕಲೆ, ಸಾಹಿತ್ಯ ಬಿಂಬಿಸುವ ಬಿದನೂರು ಉತ್ಸವ ನಡೆಸಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2011, 7:05 IST
Last Updated 15 ಆಗಸ್ಟ್ 2011, 7:05 IST
ಕಲೆ, ಸಾಹಿತ್ಯ ಬಿಂಬಿಸುವ ಬಿದನೂರು ಉತ್ಸವ ನಡೆಸಿ
ಕಲೆ, ಸಾಹಿತ್ಯ ಬಿಂಬಿಸುವ ಬಿದನೂರು ಉತ್ಸವ ನಡೆಸಿ   

ಹೊಸನಗರ: ನಮ್ಮ ಸಂಸ್ಕೃತಿ, ಕಲೆ, ಸಾಹಿತ್ಯ ಬಿಂಬಿಸುವ ನಿಟ್ಟಿನಲ್ಲಿ ಪ್ರತಿ ವರ್ಷ `ಬಿದನೂರು ಉತ್ಸವ~ ಸರ್ಕಾರ ನಡೆಸಬೇಕು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹೊ.ನಾ. ರಾಘಣ್ಣ ಮನವಿ ಮಾಡಿದರು.

ಶಾಂತವೇರಿ ಗೋಪಾಲಗೌಡ ರಂಗಮಂದಿರದ ಕೊಡಚಾದ್ರಿ ಮಹಾಮಂಟಪದ ಬಿದನೂರು ಶಿವಪ್ಪ ನಾಯಕ ಮಹಾವೇದಿಕೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ನುಡಿಯಲ್ಲಿ ಅವರು ಭಾನುವಾರ ಈ ವಿಷಯ ಪ್ರಸ್ತಾಪಿಸಿದರು.

ಒಬ್ಬ ಹಾರ್ಮೋನಿಯಂ ವಾದಕ, ಗಾಯಕ, ನಾಟಕದ ಗೀಳಿನ ಹಳ್ಳಿಯ ಹುಡುಗನಾಗಿ ಬೆಳೆದ ನಾನು ಸುಗಮ ಸಂಗೀತ, ಸಾಹಿತ್ಯ ಲೋಕದಲ್ಲಿ ಉನ್ನತಮಟ್ಟ ಮಾಡಿಕೊಟ್ಟ ಕನ್ನಡ ಜನತೆಗೆ ಕೃತಜ್ಞತೆ ಅರ್ಪಿಸಿದರು.

ರಾಜ್ಯೋತ್ಸವ, ಸಂತ ಶಿಶುನಾಳ ಷರೀಫ, ಕರ್ನಾಟಕ ಕುಲತಿಲಕ, ಆರ್ಯಭಟ, ಭಾರ್ಗವ, ರಾಗಶ್ರೀ, ಮಲೆನಾಡ ಕೋಗಿಲ ಪ್ರಶಸ್ತಿಗಳು ನನ್ನ ಕಂಠಕ್ಕೆ ಲಭಿಸಿದೆ. ಅದು ನನಗಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಶಾಸಕ ಗೊಪಾಲಕೃಷ್ಣ ಬೇಳೂರು ಮಾತನಾಡಿ, ಸರಳ ಸಜ್ಜನಿಕೆಯ ಗಾಯಕ, ಆಶು ಕವಿಗೆ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿರುವುದು ತಾಲ್ಲೂಕಿನ ಜನತೆಯ ಪಾಲಿಗೆ ಹರ್ಷ ತಂದಿದೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಶಾಂತಾರಾಮ ಪ್ರಭು ಸಮ್ಮೇಳನದ ಅಗತ್ಯತೆ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.

 ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ, ಜಿಲ್ಲಾ ಪಂಚಾಯ್ತಿ ಸದಸ್ಯೆ ಜ್ಯೋತಿ ಚಂದ್ರಮೌಳಿ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಎಸ್. ಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ, ಪ.ಪಂ. ಅಧ್ಯಕ್ಷ ಅರುಣ್‌ಕುಮಾರ್, ತಹಶೀಲ್ದಾರ್ ಸಾಜಿದ್ ಅಹ್ಮದ್ ಮುಲ್ಲಾ, ತಾಲ್ಲೂಕು ಗ್ರಾ.ಪಂ. ಅಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಎಂ.ಬಿ. ತಾರಕೇಶ್ವರ ಗೌಡ ವೇದಿಕೆಯಲ್ಲಿ ಹಾಜರಿದ್ದರು.

ಕಾರ್ಯದರ್ಶಿ ಎಚ್.ಆರ್. ಪ್ರಕಾಶ್ ಸ್ವಾಗತಿಸಿದರು. ಗುಂಡೂಮನೆ ರಮೇಶ್ ಹೆಗಡೆ ಹಾಗೂ ಸಿ.ಎ. ಪಾಂಡುರಂಗ ರಾವ್ ಕಾರ್ಯಕ್ರಮ ನಿರೂಪಿಸಿದರು. ಚಿತ್ತಾರ ಮುರಳಿ ವಂದಿಸಿದರು.

 ಕನ್ನಡಕ್ಕೆ ಉದ್ಯೋಗ ಖಾತ್ರಿ ಬೇಕು
ಜಾಗತೀಕರಣದ ಹೋರಾಟದ ಬದುಕಿನಲ್ಲಿ ಕನ್ನಡ ಶಾಲೆಯ ಮಕ್ಕಳು ಉದ್ಯೋಗದಿಂದ ವಂಚಿತ ಆಗುತ್ತಿರುವುದು ವಾಸ್ತವದ ಕಟುಸತ್ಯ. ಕನ್ನಡಕ್ಕೆ ಈಗ `ಉದ್ಯೋಗ ಖಾತ್ರಿ~ ಬೇಕು ಎಂದು ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವ ಡಾ.ರಂಗರಾಜ ವನದುರ್ಗ ಆಶಯ ವ್ಯಕ್ತಪಡಿಸಿದರು.
ಭಾನುವಾರ ಶಾಂತವೇರಿ ಗೋಪಾಲಗೌಡ ರಂಗಮಂದಿರದ ಶಿವಪ್ಪ ನಾಯಕ ವೇದಿಕೆಯಲ್ಲಿ ತಾಲ್ಲೂಕು ಪ್ರಥಮಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಅವರುಮಾತನಾಡಿದರು.

ಕನ್ನಡ ಶಾಲೆ, ಅಂಗನವಾಡಿಗಳಲ್ಲಿ `ಬಿಸಿ ಊಟದ~ ಸಾಲು ಇದ್ದರೆ, ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಡೊನೇಷನ್ ನೀಡಲು ಪೋಷಕರ ಸಾಲುಇರುವುದು ಕನ್ನಡಕ್ಕೆ ಆಗಿರುವ ಅಪಮಾನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡ-ಕಾನ್ವೆಂಟ್ ಶಾಲೆಗಳಲ್ಲಿ ತಾರತಮ್ಯ ಇರದ ಏಕರೀತಿಯ ಶಿಕ್ಷಣ ನೀತಿ ಪ್ರಾಮಾಣಿಕವಾಗಿ ಜಾರಿಯಾದಲ್ಲಿ ಮಾತ್ರ ಕನ್ನಡಕ್ಕೆ ಗೌರವ ದೊರೆಯುತ್ತದೆ. ಕೇವಲ ಭಾವನಾತ್ಮಕ ಕನ್ನಡದಿಂದ ಹೊಟ್ಟೆ ತುಂಬಲಾರದು ಎಂದರು.

ಕಲೆ, ಸಾಹಿತ್ಯ ಉಳಿಯಬೇಕಾದರೆ ಕಲಾವಿದ, ಸಾಹಿತಿಗಳು ನೆಮ್ಮದಿಯಿಂದ ಜೀವನ ನಡೆಸಲು ಸಮಾಜ ಪೂರಕ ವಾತಾವರಣ ಕಲ್ಪಿಸಬೇಕು ಎಂದ ಅವರು ಶಿಕ್ಷಣ ಈಗ ಒಂದು ಮಾಧ್ಯಮವಾಗಿ ಉಳಿದಿಲ್ಲ. ಅದು ಹಣ ಮಾಡುವ ಉದ್ಯೋಗವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. 
 

ತಾಲ್ಲೂಕು ಅಭಿವೃದ್ಧಿಯಲ್ಲಿ ಹಿನ್ನಡೆ: ವಿಷಾದ

ಹೊಸನಗರ: ಹೊಸನಗರ ವಿಧಾನಸಭಾ ಕ್ಷೇತ್ರ ಕಳೆದುಕೊಂಡು ತಾಲ್ಲೂಕು ರಾಜಕೀಯವಾಗಿ ಸಾಗರ- ತೀರ್ಥಹಳ್ಳಿ ಕ್ಷೇತ್ರಗಳಿಗೆ ಹರಿದು ಹಂಚುವ ಮೂಲಕ ಹೋಳಾಗಿದ್ದು, ಅಭಿವೃದ್ಧಿಯ ಹಿನ್ನಡೆಗೆ ಕಾರಣವಾಗಿದೆ ಎಂದು ಇತಿಹಾಸ ತಜ್ಞ ಅಂಬ್ರಯ್ಯ ಮಠ ಅಭಿಪ್ರಾಯಪಟ್ಟರು.

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ `ಹೊಸನಗರ ತಾಲ್ಲೂಕು ದರ್ಶನದಲ್ಲಿ ಸಮಸ್ಯೆ-ಸವಾಲು-ಪರಿಹಾರ~ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉದ್ಯೋಗ ಅರಸಿ ಪಟ್ಟಣಗಳಿಗೆ  ಪ್ರತಿಭಾ ಪಲಾಯನದಿಂದ ಹಳ್ಳಿಗಳು ವೃದ್ಧರ ಬೀಡಾಗಿದೆ. ಕಾಡುತ್ತಿರುವ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ, ಮೇಲಿಂದ ಮೇಲೆ ಅತಿವೃಷ್ಟಿಯ ಹೊಡೆತ ಹಳ್ಳಿಗಳನ್ನು ಇನ್ನಷ್ಟು ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರೊ.ಕೆ.ಜಿ. ವೆಂಕಟೇಶ್ ತಾಲ್ಲೂಕಿನ ಬಿದನೂರು ಸಾಮ್ರಾಜ್ಯದ ಇತಿಹಾಸ ಕುರಿತಂತೆ ಪ್ರಬಂಧ ಮಂಡಿಸಿದರು. ಸಮ್ಮೇಳನಾಧ್ಯಕ್ಷ ಸಾಹಿತಿ ಕೃಷಿ, ಸಾಹಿತ್ಯ ಸಾಧನೆ ಬಗ್ಗೆ ಪಿ. ಚಿದಂಬರ್‌ರಾವ್ ಹಾಗೂ  ಅಂಬರೀಷ್ ಭಾರದ್ವಾಜ್ ಉಪನ್ಯಾಸ ನೀಡಿದರು.

ಎರಡನೇ ಗೋಷ್ಠಿ: ಇಂದಿನ ಶಿಕ್ಷಣ- ಒಂದು ತಲ್ಲಣ ವಿಶ್ರಾಂತ ಕುಲಸಚಿವ ಪ್ರೊ.ತಲನೇರಿ ಹೂವೇಗೌಡ ಅಧ್ಯಕ್ಷತೆಯಲ್ಲಿ ನಡೆಯಿತು.ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್ ಶಿಕ್ಷಣ ನೀತಿಯ ಅನುಷ್ಠಾನದ ಲೋಪ-ದೋಷ, ಕನ್ನಡದ ಹಿನ್ನಡೆ ಬಗ್ಗೆ ಮಾತನಾಡಿದರು.

ಶಿಕ್ಷಣ ಸಲಹೆಗಾರರಾದ  ಕೆಸಿನಮನೆ ಎನ್. ರತ್ನಾಕರ್, ಕೆ. ರಾಮಾಶೆಟ್ಟಿ, ಬಸವರಾಜ್ ದತ್ತಾತ್ರೇಯ, ತ.ಮಾ. ನರಸಿಂಹ ಉಪನ್ಯಾಸಕ್ಕೆ ಪ್ರತಿಕ್ರಿಯೆ ನೀಡಿದರು.ಗಾಯತ್ರಿ ರಾಮಾಚಾರ್ ಸ್ವಾಗತಿಸಿದರು. ಶಂಕರಭಟ್, ಅಶೋಕ್ ಗುಳೇದ್ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರಯ್ಯ ವಂದಿಸಿದರು.
 

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.