ADVERTISEMENT

ಕಳಪೆ ಕಾಮಗಾರಿ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 9:25 IST
Last Updated 17 ಆಗಸ್ಟ್ 2012, 9:25 IST

ಸಾಗರ: ತಾಲ್ಲೂಕಿನ ನಾಡಕಲಸಿಯಿಂದ ಬೊಮ್ಮತ್ತಿಗೆ ಹೋಗುವ ರಸ್ತೆಯನ್ನು ಈಚೆಗೆ ನಿರ್ಮಿಸಲಾಗಿದ್ದು ಕಾಮಗಾರಿ ತೀರಾ ಕಳಪೆಯಾಗಿರುವುದನ್ನು ಖಂಡಿಸಿ ಗ್ರಾಮಸ್ಥರು ರೈತ ಸಂಘ, ಹಸಿರು ಸೇನೆ, ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ಸಹಯೋಗದೊಂದಿಗೆ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ಕಲಸಿ ಮಹಾಬಲೇಶ್ವರ ಮಾತನಾಡಿ, ಈಗ್ಗೆ ಎರಡು ತಿಂಗಳ ಹಿಂದಷ್ಟೆ ನಾಡಕಲಸಿ ಹಾಗೂ ಬೊಮ್ಮತ್ತಿ ನಡುವೆ ನಡೆದ ರಸ್ತೆ  ಕಾಮಗಾರಿ ತೀರಾ ಕಳಪೆಯಾಗಿದ್ದು ರಸ್ತೆಯಲ್ಲಿ ಹೊಂಡಗಳು ಕಾಣಿಸಿಕೊಂಡಿವೆ. ಹೀಗಾಗಿ ಈ ರಸ್ತೆ ನಿರ್ಮಾಣಕ್ಕೆ ಬಳಸಿದ ಸಾರ್ವಜನಿಕರ ರೂ. 12 ಲಕ್ಷ  ಹಣ ಗುಂಡಿಗೆ ಹಾಕಿದಂತಾಗಿದೆ ಎಂದು ದೂರಿದರು.

ಕಳಪೆ ಕಾಮಗಾರಿಯಿಂದಾಗಿ ರಸ್ತೆಯಲ್ಲಿ ಜನರು ಹಾಗೂ ವಾಹನಗಳು ಓಡಾಟ ಮಾಡುವುದೆ ದುಸ್ತರವಾಗಿದೆ. ಈ ಬಗ್ಗೆ ಗುತ್ತಿಗೆದಾರರನ್ನು ಕೇಳಿದರೆ ಉದ್ಧಟತನದ ಉತ್ತರ ನೀಡುತ್ತಾರೆ. ಅಧಿಕಾರಿಗಳು, ಜನಪ್ರತಿನಿಧಿನಿಗಳು ಮೌನ ವಹಿಸಿದ್ದಾರೆ. ಹೀಗಾಗಿ ಗ್ರಾಮಸ್ಥರ ಪ್ರತಿಭಟನೆ ಅನಿವಾರ್ಯವಾಗಿದೆ ಎಂದರು.

ADVERTISEMENT

ಆದಷ್ಟು ಶೀಘ್ರವಾಗಿ ರಸ್ತೆಯಲ್ಲಿ ಆಗಿರುವ ಗುಂಡಿಗಳನ್ನು ಸರಿಪಡಿಸಿ ಕಳಪೆ ಆಗಿರುವ ಕಾಮಗಾರಿಯನ್ನು ದುರಸ್ತಿ ಮಾಡದೆ ಇದ್ದಲ್ಲಿ ಅಧಿಕಾರಿಗಳಿಗೆ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಹೆನ್ರಿ, ರೈತ ಸಂಘದ ಗುರುಮೂರ್ತಿ, ಕೆ.ಪಿ.ದೇವರಾಜ್, ಚಂದ್ರಶೇಖರ ಗೌಡ, ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆಯ ಯು.ಕೆ.ವಿಜಯ್‌ಕುಮಾರ್, ತುಕಾರಾಂ, ನವೀನ್ ಇನ್ನಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.