ADVERTISEMENT

ಕಾಂಗ್ರೆಸ್‌ ತೆಕ್ಕೆಗೆ ಶಿರಾಳಕೊಪ್ಪ ಪಟ್ಟಣ ಪಂಚಾಯ್ತಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 5:57 IST
Last Updated 13 ಮಾರ್ಚ್ 2014, 5:57 IST

ಶಿರಾಳಕೊಪ್ಪ: ಶಿಕಾರಿಪುರ ತಾಲ್ಲೂಕಿನ  ಶಿರಾಳಕೊಪ್ಪ ಪಟ್ಟಣ ಪಂಚಾಯ್ತಿ ಗದ್ದುಗೆಯನ್ನು ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿ ಜಮಿಲಾ ಖಾತೂನ್‌ ಹಾಗೂ ಉಪಾಧ್ಯಕ್ಷರಾಗಿ ನೂರ್‌ ಜಾನ್‌ ಆಯ್ಕೆಯಾದರು.

15 ಸದಸ್ಯ ಬಲದ ಪಟ್ಟಣ ಪಂಚಾಯ್ತಿಗೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 5, ಕೆಜೆಪಿ 5, ಬಿಎಸ್ಆರ್ ಕಾಂಗ್ರೆಸ್ 1, ಜೆಡಿಎಸ್ 1, ಪಕ್ಷೇತರ 3 ಸ್ಥಾನ ಪಡೆದಿದ್ದವು. ಕಾಂಗ್ರೆಸ್ ಪಕ್ಷದ ಪರವಾಗಿ 10ನೇ ವಾರ್ಡ್‌ನ ಸದಸ್ಯ ಜಮೀಲಾ ಖಾತೂನ್ ಅಧ್ಯಕ್ಷ ಸ್ಥಾನಕ್ಕಾಗಿ, 5ನೇ ವಾರ್ಡ್‌ನ ನೂರ್ ಜಾಹನ್ ಉಪಾಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿದ್ದರು. ಅವರ ಪ್ರತಿ ಸ್ಪರ್ಧೆಯಾಗಿ ಕೆಜೆಪಿ ಪರವಾಗಿ ಅಧ್ಯಕ್ಷ ಸ್ಥಾನಕ್ಕೆ 3ನೇ ವಾರ್ಡ್‌ ಅಭ್ಯರ್ಥಿ ಭಾರತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲದೊಂದಿಗೆ 13ನೇ ವಾರ್ಡ್‌ನ ರಶೀದಾ ಬೇಗಂ ಸ್ಪರ್ಧಿಸಿದ್ದರು.

ಈ ಎರಡು ಸ್ಥಾನಕ್ಕೆ ಕೈ ಎತ್ತುವ ಮೂಲಕ  ಜನಪ್ರತಿನಿಧಿಗಳು ಮತ ಚಲಾಯಿಸಿದರು. ಅಂತಿಮವಾಗಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳು 15 ಮತಗಳಲ್ಲಿ 10 ಮತ ಪಡೆದು ವಿಜಯಶಾಲಿಯಾದರು. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 5 ಮತ ಪಡೆದು ಸೋಲು ಅನುಭವಿಸಿದರು.

ಧರ್ಮೋಜಿರಾವ್ ಅವರು ಚುನಾವಣಾಧಿಕಾರಿ ಯಾಗಿ ಕಾರ್ಯ ನಿರ್ವಹಿಸಿದ್ದರು. ಮುಖ್ಯಾಧಿಕಾರಿ ರಾಜ್ ಕುಮಾರ್, ಸರ್ಕಲ್ ಇನ್ ಸ್ಪೆಕ್ಟರ್ ಮಾದಪ್ಪ, ಸಬ್ ಇನ್‌ಸ್ಪೆಕ್ಟರ್‌ ಗುರುಪ್ರಸಾದ್ ಇದ್ದರು.

ಕೆಜೆಪಿ ಸದಸ್ಯನಿಂದ ಕಾಂಗ್ರೆಸ್‌ಗೆ ಮತ: ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಚುನಾವಣೆಯಲ್ಲಿ 6ನೇ ವಾರ್ಡ್‌ನಿಂದ ಕೆಜೆಪಿ ಪಕ್ಷದಿಂದ ಚುನಾಯಿತರಾಗಿದ್ದ ಮನ್ಸೂರ್ ಆಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ್ದು. ಬಿ.ಎಸ್.ಯಡಿಯೂರಪ್ಪ ಬೆಂಬಲಿಗರಿಗೆ ಇರುಸು–ಮುರುಸು ಉಂಟು ಮಾಡಿತು.

ಮಾಜಿ ಶಾಸಕ ಬಿ.ಸಿ. ಪಾಟೀಲ್ ಜತೆಗೆ ಆಗಮಿಸಿದ ಪಟ್ಟಣ ಪಂಚಾಯ್ತಿ ಸದಸ್ಯರು: ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಜೆ.ಪಕ್ಕೀರಪ್ಪ ನೇತೃತ್ವದಲ್ಲಿ ಹಾಗೂ ನಗರ ಘಟಕದ ಅಧ್ಯಕ್ಷ ಜಬ್ಬರ್ ಸಾಬ್ ನೇತೃತ್ವದಲ್ಲಿ 10 ಜನ ಪಟ್ಟಣ ಪಂಚಾಯ್ತಿ ಸದಸ್ಯರ ನಿಯೋಗ 4 ದಿನದಿಂದ ಅಜ್ಞಾತವಾಸದಲ್ಲಿದ್ದು, ಬುಧವಾರ ಸಿನಿಮೀಯ ಮಾದರಿಯಲ್ಲಿ 15ಕ್ಕೂ ಹೆಚ್ಚು ವಾಹನಗಳಲ್ಲಿ ಮಾಜಿ ಶಾಸಕ ಬಿ.ಸಿ.ಪಾಟೀಲ್ ಹಿರೆಕೆರೂರಿನ ತಮ್ಮ ನಿವಾಸದಿಂದ ಪಟ್ಟಣ ಪಂಚಾಯ್ತಿ ಆವರಣಕ್ಕೆ ಪಟ್ಟಣ ಪಂಚಾಯ್ತಿ ಸದಸ್ಯರನ್ನು ಕರೆತರುತ್ತಿದ್ದಂತೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಉದ್ಘಾರ ಮುಗಿಲು ಮುಟ್ಟಿತ್ತು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್, ಮಾಜಿ ಶಾಸಕ ಶಾಂತಣ್ಣ, ಮಹಾದೇವಪ್ಪ, ಬ್ಲಾಕ್ ಅಧ್ಯಕ್ಷ ಮಲ್ಲೆನಹಳ್ಳಿ ಹನುಮಂತಪ್ಪ, ಭಂಡಾರಿ ಮಾಲತೇಶ್, ನಯಾಜ್ ಅಹಮ್ಮದ್, ಗುಂಡಿ ಗಪೂರ್ ಸಾಬ್, ಎಂ.ರಫೀಕ್, ಹುಲ್ಮಾರ್ ಮಹೇಶ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.