ಸೊರಬ: ಬಗರ್‌ಹುಕುಂ ಸಾಗುವಳಿ ಯಿಂದ ಕಾಡು ನಾಶವಾಗುತ್ತಿದ್ದು, ಇರುವ ಜಮೀನಿನಲ್ಲಿಯೇ ಸಾಗುವಳಿ ಮಾಡಿ, ಕಾಡು ಉಳಿಸಲು ಮುಂದಾಗಬೇಕು ಎಂದು ಶಾಸಕ ಎಚ್. ಹಾಲಪ್ಪ ಸಲಹೆ ಮಾಡಿದರು.
ಸೊರಬ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿದ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಕಚೇರಿ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯ ಸಂಪತ್ತನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಪ್ರತಿಯೊಬ್ಬರು ಅವರವರ ಮನೆಯಲ್ಲಿ ಮೊದಲು ಗಿಡ ನೆಡುವುದರ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಒಂದು ಮರ ಕಡಿದರೆ ಹತ್ತು ಮರ ನೆಡಬೇಕೆಂಬ ನಿಯಮವಿದ್ದರೂ ಯಾರೂ ಅದನ್ನು ಪಾಲಿಸುತ್ತಿಲ್ಲ ಎಂದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಾಗ ದುಷ್ಟಶಕ್ತಿಗಳಿಂದ ಪ್ರಾಣಭಯ ಹಾಗೂ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರ ಬಗ್ಗೆ ತಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಪರಿಹರಿಸುವುದಾಗಿ ಭರವಸೆ ನೀಡಿದರು.
ಪ್ರಾಣಿ, ಪಕ್ಷಿಗಳು ಕಾಡಿನ ಆಭರಣಗಳು. ಕಾಡಿಗೆ ಬೀಳುವ ಬೆಂಕಿಯಿಂದ ಭವಿಷ್ಯದಲ್ಲಿ ಪ್ರಾಣಿಸಂಕುಲ ನಾಶವಾಗಿ ಮುಂದಿನ ಪೀಳಿಗೆಗೆ ಪ್ರಾಣಿ-ಪಕ್ಷಿಗಳನ್ನು ಕೇವಲ ಚಿತ್ರಪಟದಲ್ಲಿ ತೋರಿಸುವಂತಹ ಪರಿಸ್ಥಿತಿ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಸಾಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮನೋಜಕುಮಾರ ತ್ರಿಪಾಠಿ ಮಾತನಾಡಿ, ಇಲಾಖೆಯಲ್ಲಿರುವ ಸಿಬ್ಬಂದಿಗಳಿಗೆ ವಸತಿ ಸೌಕರ್ಯದ ಸಮಸ್ಯೆ ಹಾಗೂ ಸಿಬ್ಬಂದಿಗಳ ಕೊರತೆ ಇದೆ. ಒಬ್ಬ ಅರಣ್ಯ ಸಿಬ್ಬಂದಿಗೆ 2,500 ಹೆಕ್ಟೇರ್ ವಿಸ್ತೀರ್ಣದ ಕಾಡು ರಕ್ಷಿಸುವ ಜವಾಬ್ದಾರಿ ವಹಿಸಲಾಗುತ್ತಿರುವುದರಿಂದ ಶೇ. 80ರಷ್ಟು ಅರಣ್ಯವನ್ನು ಸಂರಕ್ಷಿಸಲಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ವಿಜಯಾ ಮಹಾಲಿಂಗಪ್ಪ ವಹಿಸಿದ್ದರು.
ಸಮಾರಂಭದಲ್ಲಿ ಜಿ.ಪಂ. ಉಪಾಧ್ಯಕ್ಷ ಎಚ್. ಗಂಗಾಧರಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಚಂದ್ರಶೇಖರ್, ವಲಯ ಅರಣ್ಯಾಧಿಕಾರಿ ನಾಗನಗೌಡ ಪಾಟೀಲ್, ಶಿಶು ಅಭಿವೃದ್ಧಿ ಅಧಿಕಾರಿ ಜೋಯಪ್ಪ, ಎಪಿಎಂಸಿ ಅಧ್ಯಕ್ಷ ಗಜಾನನರಾವ್ ಉಳವಿ, ಜಿ.ಪಂ. ಮಾಜಿ ಸದಸ್ಯ ಎ.ಎಲ್. ಅರವಿಂದ್ ಆನವಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.