ADVERTISEMENT

ಕಾರ್ಖಾನೆ ಉಳಿಸದಿದ್ದಲ್ಲಿ ಮತದಾನ ಬಹಿಷ್ಕಾರ: ವಿಐಎಸ್ಎಲ್ ಕಾರ್ಮಿಕರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 8:47 IST
Last Updated 10 ಮಾರ್ಚ್ 2018, 8:47 IST
ಭದ್ರಾವತಿ ವಿಐಎಸ್ಎಲ್ ಕಾರ್ಮಿಕ ಸಂಘದ ನೇತೃತ್ವದಲ್ಲಿ ಶುಕ್ರವಾರ ಖಾಸಗೀಕರಣ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಯಿತು
ಭದ್ರಾವತಿ ವಿಐಎಸ್ಎಲ್ ಕಾರ್ಮಿಕ ಸಂಘದ ನೇತೃತ್ವದಲ್ಲಿ ಶುಕ್ರವಾರ ಖಾಸಗೀಕರಣ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಯಿತು   

ಭದ್ರಾವತಿ: ವಿಐಎಸ್ಎಲ್ ಕಾರ್ಖಾನೆ ಉಳಿಸಿ ರಕ್ಷಿಸಲು ಸರ್ಕಾರಗಳು ಮುಂದಾಗದಿದ್ದಲ್ಲಿ ಮತದಾನ ಬಹಿಷ್ಕಾರ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು ಎಚ್ಚರಿಕೆ ನೀಡಿದರು.

ವಿಐಎಸ್ಎಲ್ ಕಾರ್ಮಿಕ ಸಂಘ, ಗುತ್ತಿಗೆ ಕಾರ್ಮಿಕರ ಸಂಘ, ಎಂಪ್ಲಾಯೀಸ್ ಅಸೋಸಿಯೇಷನ್, ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರ ಸಂಯುಕ್ತವಾಗಿ ಶುಕ್ರವಾರ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಕಾರ್ಖಾನೆಯ ಖಾಸಗೀಕರಣದ ಪ್ರಸ್ತಾವ ಕೈಬಿಡಬೇಕು, ಗುತ್ತಿಗೆ ಕಾರ್ಮಿಕರ ಕೆಲಸಕ್ಕೆ ಅಡ್ಡಿ ಮಾಡಬಾರದು ಹಾಗೂ ಬಂಡವಾಳ ಹೂಡಲು ಕೇಂದ್ರ ಸರ್ಕಾರ ಮನಸ್ಸು ಮಾಡಬೇಕು ಎಂದು ಅವರು ಆಗ್ರಹಿಸಿದರು.

ADVERTISEMENT

ಎಐಟಿಯುಸಿ ಮುಖಂಡ ಡಿ.ಸಿ. ಮಾಯಣ್ಣ ಮಾತನಾಡಿ, ‘ಖಾಸಗೀಕರಣ ಪ್ರಕ್ರಿಯೆಯು ಕೆಲಸಗಾರರನ್ನು ಕಡಿತ ಮಾಡುವುದರ ಮುನ್ಸೂಚನೆ.
ಇದಕ್ಕೆ ಅಂತ್ಯ ಹಾಡಲು ನಾವೆಲ್ಲರೂ  ಸಂಘಟಿತ ಹೋರಾಟ ಮಾಡಬೇಕಿದೆ’ ಎಂದರು.

‘ಕೇಂದ್ರದ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಖಾಸಗೀಕರಣದ ಅಜೆಂಡಾದೊಂದಿಗೆ ಕೆಲಸ ಮಾಡುತ್ತಿದ್ದು, ಈಗ ಈ ಪ್ರಕ್ರಿಯೆಯು ವೇಗ ಹೆಚ್ಚಿಸಿಕೊಂಡಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ನಿರಂತರ ಹೋರಾಟ ನಡೆಸೋಣ’ ಎಂದು ಕರೆ ನೀಡಿದರು.

ಸಿಐಟಿಯುಸಿ ಮುಖಂಡ ಎಲ್. ರಂಗೇಗೌಡ ಮಾತನಾಡಿ, ‘ಗುತ್ತಿಗೆ ಕಾರ್ಮಿಕರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಕೂಡಲೇ ಗುತ್ತಿಗೆ ಮುಂದುವರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಹಿರಿಯ ಕಾರ್ಮಿಕ ಮುಖಂಡ ಜೆ.ಎನ್. ಚಂದ್ರಹಾಸ, ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಬಸಂತಕುಮಾರ್, ಮೋಹನ್, ಸಿ.ವಿ. ರಾಘವೇಂದ್ರ, ಗುತ್ತಿಗೆ ಕಾರ್ಮಿಕ ಸಂಘದ ನಾರಾಯಣ, ಚಂದ್ರೇಗೌಡ, ಕೆಂಪಯ್ಯ, ಅಂತೋಣಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.