ADVERTISEMENT

ಕುರಿಗಾರರಿಗೆ ಬಂದೂಕು ತರಬೇತಿ: ಭರವಸೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 10:45 IST
Last Updated 17 ಜನವರಿ 2011, 10:45 IST

ಶಿಕಾರಿಪುರ: ಮುಂದಿನ ಪೀಳಿಗೆಯ ಮಕ್ಕಳಿಗಾದರೂ ಶಿಕ್ಷಣ ನೀಡುವ ಮೂಲಕ ಸರ್ಕಾರಗಳು ನೀಡುವ ಸೌಲಭ್ಯಗಳನ್ನು ಪಡೆಯಿರಿ ಎಂದು ಕುರಿ ಉಣ್ಣೆ ನಿಗಮದ ಅಧ್ಯಕ್ಷ ಭೋಜರಾಜ್ ಖರೋಡೆ ಕರೆ ನೀಡಿದರು.ತಾಲ್ಲೂಕಿನ ತಡಗಣಿಗೆ ಗ್ರಾಮದ ಸಮೀಪ ಭಾನುವಾರ ಸಂಚಾರಿ ಕುರಿಗಾರರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುರಿಗಳ ಸಾಕಾಣಿಕೆಗಾಗಿ ಸರ್ಕಾರ ಸಹಾಯಧನ, ಸಾಲಸೌಲಭ್ಯ ನೀಡುತ್ತದೆ. ಕುರಿಗಾರರಿಗಾಗಿ ಔಷಧಿ ವಿತರಣೆ, ತರಬೇತಿ ಕಾರ್ಯಕ್ರಮ ನೀಡುತ್ತದೆ. ಅವುಗಳ ಬಳಕೆ ಮಾಡಿಕೊಳ್ಳುವಲ್ಲಿ ಕುರಿಗಾರರು ವಿಫಲವಾಗಿದ್ದಾರೆ ಎಂದರು.

ಕುರಿಗಳಿಗೆ ಬರುವ ರೋಗಗಳ ಬಗ್ಗೆ, ಅವುಗಳ ನಿವಾರಣೆಗಾಗಿ ಕಾಲದಿಂದ ಕಾಲಕ್ಕೆ ನೀಡುವ ಸಲಹೆಗಳ ಬಗ್ಗೆಯೂ ಸರಿಯಾದ ತಿಳಿವಳಿಕೆ ಕುರಿಗಾರರಿಗೆ ಸಿಗುತ್ತಿಲ್ಲ. ಇದರ ಸಮರ್ಪಕ ಬಳಕೆ ಮಾಡಿಕೊಳ್ಳುವುದಕ್ಕಾಗಿ ಸಂಚಾರಿ ಕುರಿಗಾರರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಂತಹ ನಿಟ್ಟಿನಲ್ಲಿ ಪ್ರಯತ್ನ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಕುರಿಗಳನ್ನು ಕಳವು ಮಾಡುವ ಸಂಖ್ಯೆ ಪ್ರತಿವರ್ಷ ಹೆಚ್ಚಳವಾಗುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಸಂಚಾರಿ ಕುರಿಗಾರರಿಗೆ ಬಂದೂಕು ತರಬೇತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.ಕುರಿಗಾರರಿಗಾಗಿ ವಿಮೆ ಸೌಲಭ್ಯ, ಉತ್ತಮ ತರಬೇತಿ, ಸಹಾಯ ಧನ, ಕುರಿಗಳಿಗೆ ಬರುವ ರೋಗ ನಿವಾರಣೆಗಾಗಿ ಸಂಚಾರಿ ಚಿಕಿತ್ಸಾ ವಾಹನ ಸೇರ್ಪಡೆ ಸೇರಿದಂತೆ ಕುರಿಗಾರರ ಹಲವು ಬೇಡಿಕೆ ಈಡೇರಿಕೆಗೆ ಹಣ ಪಡೆಯುವುದಕ್ಕಾಗಿ ್ಙ 90 ಕೋಟಿ ಬಜೆಟ್ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಗ್ರಾ.ಪಂ. ಸದಸ್ಯ ತಡಗಣಿ ಮಂಜಪ್ಪ ಮಾತನಾಡಿ, ನಮ್ಮ ಗ್ರಾಮೀಣ ಪ್ರದೇಶಗಳಿಗೆ ಆಗಮಿಸುವ ಕುರಿಗಾರರು ಪ್ರಾಮಾಣಿಕತೆಗೆ ಹೆಸರುವಾಸಿ ಆಗಿದ್ದಾರೆ. ಇವರಲ್ಲಿನ ಶ್ರದ್ಧೆ, ಕಾರ್ಯವೈಖರಿ ಎಲ್ಲ ಜನಾಂಗದ ಜನರಿಗೆ ಮಾದರಿಯಾಗುವಂತಹದ್ದು ಎಂದರು.ಕುರಿಗಾರರ ಸಂಘದ ಅಧ್ಯಕ್ಷ ಮಲ್ಲಪ್ಪ ಬಂಡೆಂಪ್ಪ ಕೌಲಾಪುರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪೂಜಾರ್ ಹಾಲಪ್ಪ, ವಿಠ್ಠಲ್‌ಬಣ್ಣೆ, ಅರುಣ್‌ಕುಮಾರ್, ಡಾ.ಪ್ರಶಾಂತ್, ಪಶು ಇಲಾಖೆಯ ಸಹಾಯ ನಿರ್ದೇಶಕ ಡಾ.ರಾಜ್ ಮಾತನಾಡಿದರು.ಬಿ.ಎಲ್. ರಾಜು ಕಾರ್ಯಕ್ರಮ ನಿರೂಪಿಸಿದರು. ವಾಸಪ್ಪ ಹೆಗಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.