ADVERTISEMENT

ಕೃಷಿಯಲ್ಲೂ ಐಸ್ ಕ್ರೀಮ್ ವ್ಯಾಪಾರಿ ಕೈಚಳಕ

ಪಿ.ಎನ್.ನರಸಿಂಹಮೂರ್ತಿ
Published 13 ಜೂನ್ 2014, 7:11 IST
Last Updated 13 ಜೂನ್ 2014, 7:11 IST
ಹೊಸನಗರ ಸಮೀಪದ ಮಳವಳ್ಳಿಯ ಜಗದೀಶ್ ಅವರ ತೋಟ
ಹೊಸನಗರ ಸಮೀಪದ ಮಳವಳ್ಳಿಯ ಜಗದೀಶ್ ಅವರ ತೋಟ   

ಅಪ್ಪ, ಅಜ್ಜಂದಿರು ನಂಬಿ ಬಂದ ಕೃಷಿ ಜೀವನ ಬಿಟ್ಟು ಪಟ್ಟಣಕ್ಕೆ ಪಲಾಯನ ಮಾಡುವ ಜನರೇ ಹೆಚ್ಚು. ಬೆಂಗಳೂರಿನಲ್ಲಿ ಐಸ್ ಕ್ರೀಮ್‌ ಪಾರ್ಲರ್ ನಲ್ಲಿ ಜಣ ಜಣ ಕಾಸು ಎಣಿಸುತ್ತಿದ್ದ ವ್ಯಾಪಾರಿಯೊಬ್ಬ, ಮರಳಿ ಕೃಷಿಯಲ್ಲಿ ಸಾಹಸ ಮಾಡಿ ಯಶಸ್ಸು ಗಳಿಸಿ, ಪ್ರಗತಿಪರ ಕೃಷಿಕರೆನಿಸಿಕೊಂಡ ಯಶೋಗಾಥೆ ಇದು.

ಹೊಸನಗರ ಸಮೀಪದ ಗುಳ್ಳೆಕೊಪ್ಪ ಗ್ರಾಮದಲ್ಲಿ ಸುಮಾರು 9 ಎಕರೆ ಬರಡು ಜಮೀನು ಖರೀದಿ ಮಾಡಿದ ಮಳವಳ್ಳಿಯ ಕೆ.ವಿ.ಜಗದೀಶ್ ರಾವ್.20ವರ್ಷಗಳಿಂದ ಕೃಷಿಯಲ್ಲಿ ತಮ್ಮನ್ನು ಸಂಪೂರ್ಣ ಅರ್ಪಣೆ ಮಾಡಿಕೊಂಡಿ ದ್ದಾರೆ. 

ಸಮಯ ಪ್ರಜ್ಞೆ, ಸಂವೇದನೆ, ಸಂಶೋಧನಾ ಮನಸ್ಸು, ಶ್ರದ್ಧೆಯಿಂದ  ಕೃಷಿಯಲ್ಲಿ ತೊಡಗಿಸಿಕೊಂಡರೆ ಅದೊಂದು ಅದ್ಭುತ ಲೋಕ ಎನ್ನುತ್ತಾರೆ ಅವರು. ವೈಜ್ಞಾನಿಕವಾಗಿ ಬೆಳೆಸಿದ 5 ಎಕರೆ ಅಡಿಕೆ ತೋಟದಲ್ಲಿ 18-–20 ಕ್ವಿಂಟಲ್ ಅತ್ಯುತ್ತಮ ಇಳುವರಿ ಬರುತ್ತಿದೆ. ಪ್ರತಿಯೊಂದು ಮರದ ಬಗ್ಗೆ ವೈಯಕ್ತಿಕ ಕಾಳಜಿ, ಸಾವಯವ ಹಾಗೂ ರಾಸಾಯನಿಕದ ಉಪಚಾರ, ಪೋಷಕಾಂಶಗಳ ಪೋಷಣೆ-, ಪಾಲನೆ ಬಗ್ಗೆ ಕಾಳಜಿ ವಹಿಸಿದೆ ಉತ್ತಮ ಲಾಭ ಗಳಿಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. 

ವೇಳಾಪಟ್ಟಿ:  ಸಮಯಕ್ಕೆ ಸರಿಯಾಗಿ ವೈಜ್ಞಾನಿಕ ಪದ್ಧತಿ ಯಲ್ಲಿ ಪೋಷಾಂಶ, ರೋಗ ನಿರೋಧಕ ಅಂಶಗಳನ್ನು ನೀಡುವುದರ ಮೂಲಕ ಉತ್ತಮ ಕೃಷಿ ಸಾಧ್ಯ. ಕೃಷಿ ವರ್ಷ ಆರಂಭದಲ್ಲಿ ಮುಂಗಡವಾಗಿ ಒಂದು ಕೃಷಿ ವೇಳಾ ಪಟ್ಟಿ ಸಿದ್ಧ ಮಾಡಿಕೊಂಡು, ಮುಂದಿನ ತಿಂಗಳ ಬೇಸಾಯದ ಬಗ್ಗೆ ಈ ತಿಂಗಳೇ ತಯಾರಿ ಮಾಡಿಕೊಳ್ಳುವುದು ಸೂಕ್ತ ಎಂಬುದು ಅವರ ಅಭಿಪ್ರಾಯ.

ಜಗದೀಶ್ ರಾವ್ ತಮ್ಮ ಅಡಿಕೆ ತೋಟದಲ್ಲಿ ಅಂತರ್ಗತ ಬಸಿ ಕಾಲುವೆ. ಪ್ರತಿ ಅಡಿಕೆ ಮರಕ್ಕೆ ಕಾಳು ಮೆಣಸು ಹಬ್ಬಿಸಿದ್ದಾರೆ. ಕಾಡು ಹಿಪ್ಪಳಿಗೆ ಕಸಿ ಮಾಡಿದ ಕಾಳು ಮೆಣಸಿನ ಸಸಿ ನಾಟಿಮಾಡುವುದರ ಮೂಲಕ ಬೇರಿನಿಂದ ಯಾವುದೇ ರೋಗ ಬಾರದಂತೆ ನಿಗಾ ವಹಿಸಿ ಯಶಸ್ವಿ ಯಾಗಿದ್ದಾರೆ. ಇದಕ್ಕೆ ಬೇಕಾದ ಆಹಾರವನ್ನು ಬುಡಕ್ಕೆ ನೀಡುವ ಗೊಬ್ಬರದ ಜತೆಗೆ ಗಿಡಕ್ಕೂ ಸಹ ಪೋಷಾಂಶಗಳನ್ನು ಸ್ಪ್ರೆ ಮಾಡುವುದರ ಮೂಲಕ ಉತ್ತಮ ಫಸಲು ಪಡೆ ಯುತ್ತಿದ್ದಾರೆ.

ತೋಟದ ಉಪಬೆಳೆಯಿಂದ ಮೂಲ ಬೆಳೆಗೆ ಧಕ್ಕೆ ಆಗಬಾರದು. ಹೆಚ್ಚು ಪೋಷಕಾಂಶಗಳನ್ನು ಹೀರಿಕೊಳ್ಳುತ್ತಿದ್ದ ಬೆಳೆದು ನಿಂತ ಕಾಫಿ ಗಿಡಗಳನ್ನು ಕಡಿದು ಹಾಕಿದ ಉದಾಹರಣೆ ಇದೆ ಎನ್ನುತ್ತಾರೆ ಜಗದೀಶ್ ರಾವ್. ಆದರೂ, ಸಹ ಉಪಬೆಳೆ ಆಗಿ ಕೋಕೋ, ಏಲಕ್ಕಿ, ಬಾಳೆ ಬೆಳೆದು ಲಾಭ ಗಳಿಸಬಹದು ಎನ್ನುತ್ತಾರೆ. ಅಲ್ಲದೆ, ತೋಟದ ಸುತ್ತಲಿನ ಬೆಟ್ಟ ಪ್ರದೇಶದಲ್ಲಿ ತೆಂಗು, ಮಾವು, ಗೇರು, ಸಪೋಟ, ಜೇನು ಕೃಷಿಯೂ ಲಾಭ ಗಳಿಸಬಹುದು ರೈತರಲ್ಲಿ ಆತ್ಮವಿಶ್ವಾಸ ತುಂಬುತ್ತಾರೆ. 

ಸಾಂಘಿಕ ಕೃಷಿ: ವೈಜ್ಞಾನಿಕ ಹಾಗೂ ತಂತ್ರಜ್ಞಾನ ಬಳಸಿಕೊಂಡು ಕೃಷಿ ಮಾಡುವಾಗ ಫಸಲು ಏರಿಕೆಯ ಜತೆಯಲ್ಲಿ ಖರ್ಚು ಸಹ ಏರುತ್ತದೆ. ಇದನ್ನು ನಿವಾರಿಸಲು 10 ಸಮಾನ ಮನಸ್ಕ ಕೃಷಿಕರ ಒಂದು  ಗುಂಪು ಹುಟ್ಟು ಹಾಕಿದ್ದಾರೆ. ಕೃಷಿಗೆ ಬೇಕಾಗುವ ರಾಸಾಯನಿಕ, ಸಾವಯವ ಗೊಬ್ಬರ, ಕೀಟ -ಕ್ರಿಮಿನಾಶಕ, ಪೋಷಕಾಂಶ, ಕೃಷಿ ಉಪಕರಣಗಳನ್ನು ಸಗಟು (ಹೋಲ್‌ ಸೇಲ್) ದರದಲ್ಲಿ ಖರೀದಿ ಮಾಡುವ ಮೂಲಕ ಶೇಕಡ 40ರಷ್ಟು ಹಣ ಉಳಿಕೆ. ಉತ್ಪನ್ನದ ಮಾರುಕಟ್ಟೆಶೋಧ ಹಾಗೂ ಕೃಷಿ ವಿಜ್ಞಾನಿ, ಪರಿಣಿತರನ್ನು ತೋಟಕ್ಕೆ ಕರೆಸಿ ಅವರಿಂದ ಪಡೆದ ಮಾಹಿತಿ ಸಂಗ್ರಹ ಹಾಗೂ ಅನುಷ್ಠಾನ ಕುರಿತ ಗುಂಪು ಚರ್ಚೆ, ವಿಚಾರ ವಿನಿಮಯದಂತಹ  ಸಾಂಘಿಕ ಕೃಷಿಗೆ ಹೆಚ್ಚು ಒತ್ತು ನೀಡುವುದರ ಮೂಲಕ ಕೃಷಿಯಲ್ಲಿ ಉನ್ನತಿ ಕಾಣಬಹದು ಎನ್ನುತ್ತಾರೆ.   

ಸಸ್ಯ ಪ್ರತಿಸ್ಪಂದನ: ಪ್ರತಿಯೊಂದು ಸಸಿ, ಗಿಡ, ಮರ, ಸಸ್ಯಗಳು ನಮ್ಮೊಂದಿಗೆ ಪ್ರತಿಸ್ಪಂದಿಸುತ್ತದೆ. ಅದನ್ನು ತಿಳಿಯುವ ಒಳ ಮನಸ್ಸು ಬೇಕು. ಗಿಡ ನೆಟ್ಟು ಅಂಡಲೆಯುವುದು ನಿಲ್ಲಸಿ. ಅವುಗಳಿಗೆ ವೈಯಕ್ತಿಕ ಆರೈಕೆ ಮಾಡಿದರೆ ಫಲ ನಿಶ್ಚಿತ. ಕೃಷಿ ಕೊಟ್ಟ ಖುಷಿ, ನೆಮ್ಮದಿ ಬದುಕು ಬೇರಾವುದು ಕೊಡಲಾ ರದು ಎನ್ನುತ್ತಾರೆ ಕೆ.ವಿ. ಜಗದೀಶ್ ರಾವ್.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.