ADVERTISEMENT

ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ಪ್ರತಿಭಟನೆಯಲ್ಲಿ ನಾ.ಡಿಸೋಜಾ ಕರೆ...

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 6:25 IST
Last Updated 16 ಸೆಪ್ಟೆಂಬರ್ 2011, 6:25 IST

ಸಾಗರ: ನಾಡಿನಾದ್ಯಂತ ಕೃಷಿ ಭೂಮಿಯನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವುದನ್ನು ನಿಲ್ಲಿಸಲು ಕಾಗೋಡು ಸತ್ಯಾಗ್ರಹ ಮಾದರಿಯಲ್ಲಿ ಮತ್ತೊಂದು ಹೋರಾಟ ನಡೆಯಬೇಕಿದೆ ಎಂದು ಸಾಹಿತಿ ಡಾ.ನಾ. ಡಿಸೋಜ ಹೇಳಿದರು.

ತಾಲ್ಲೂಕಿನ ಕುಗ್ವೆ ಗ್ರಾಮದಲ್ಲಿ 101 ಎಕರೆ ಕೃಷಿ ಭೂಮಿಯನ್ನು ಕರ್ನಾಟಕ ಗೃಹಮಂಡಳಿ ಭೂಸ್ವಾಧೀನ ಪ್ರಕ್ರಿಯೆ ಮೂಲಕ ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ಗುರುವಾರ ರೈತರು ನಡೆಸಿದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವರ ಭೂಮಿಯನ್ನು ಕಿತ್ತುಕೊಳ್ಳುವ ಸರ್ಕಾರದ ಪ್ರಯತ್ನ ಖಂಡನಾರ್ಹ. ಒಂದೆಡೆ ರೈತಗೀತೆ ಮೂಲಕ ರೈತರನ್ನು ಹಾಡಿ ಹೊಗಳುವ ಸರ್ಕಾರ ಮತ್ತೊಂದೆಡೆ ಭೂಮಿಯನ್ನು ಕಸಿಯುವ ಮೂಲಕ ಅವರನ್ನು ಆತಂಕದಲ್ಲಿ ತಳ್ಳುತ್ತಿರುವುದು ದ್ವಿಮುಖ ನೀತಿಯಾಗಿದೆ ಎಂದರು.

ಈ ಹಿಂದೆ ಭೂಮಿಯ ಒಡೆತನ ಇದ್ದರೆ ಬದುಕು ನಿರಾಳ ಎಂಬ ಭಾವನೆ ಇತ್ತು. ಈಗ ಕೃಷಿ ತೊಂದರೆಗೆ ಸಿಲುಕಿರುವ ಜತೆಗೆ ಸರ್ಕಾರವೆ ಕೃಷಿ ಭೂಮಿಯನ್ನು ಕಬಳಿಸುವ ಹುನ್ನಾರ ನಡೆಸುತ್ತಿರುವುದು ರೈತರನ್ನು ಅಧೋಗತಿಗೆ ತಳ್ಳುತ್ತಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತೀ.ನಾ. ಶ್ರೀನಿವಾಸ್ ಮಾತನಾಡಿ, ಸಂಸದ ಬಿ.ವೈ. ರಾಘವೇಂದ್ರ ಅವರ ಮಧ್ಯವರ್ತಿಗಳು ಕುಗ್ವೆ ಗ್ರಾಮದ ಬೆಲೆ ಬಾಳುವ ಭೂಮಿಯನ್ನ ಖರೀದಿಗೆ ಕೇಳಿದ್ದರು. ಅದನ್ನು ಮಾರಾಟ ಮಾಡಲು ರೈತರು ನಿರಾಕರಿಸಿದ್ದರಿಂದ ಗೃಹಮಂಡಳಿ ಮೂಲಕ ಭೂಮಿಯನ್ನು ಕಿತ್ತುಕೊಳ್ಳುವ ಕುತಂತ್ರ ನಡೆದಿದೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡರಿಗೆ ರೈತರ ಬಗ್ಗೆ ಕನಿಷ್ಠ ಕಳಕಳಿ ಇದ್ದರೆ ಭೂಸ್ವಾಧೀನ ಪ್ರಕ್ರಿಯೆಗೆ ಹೊರಡಿಸಿರುವ ಅಧಿಸೂಚನೆಯನ್ನು ಕೂಡಲೇ ಹಿಂದಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಆ ಪಕ್ಷದವರೇ ಗೃಹಮಂಡಳಿಯ ಹಿಂದಿದ್ದಾರೆ ಎಂದು ಸಾಬೀತಾಗುತ್ತದೆ ಎಂದರು.

ಕುಗ್ವೆ ಗ್ರಾಮದ ಒಂದು ಇಂಚು ಭೂಮಿಯನ್ನೂ ಗೃಹಮಂಡಳಿಗೆ ಬಿಟ್ಟುಕೊಡುವುದಿಲ್ಲ. ಅಧಿಕಾರಿಗಳು ತಾಕತ್ತಿದ್ದರೆ ಕುಗ್ವೆಯ ಕೃಷಿ ಭೂಮಿಗೆ ಕಾಲಿಡಲಿ ಎಂದು ಅವರು ಸವಾಲು ಹಾಕಿದರು.ಜಿಲ್ಲಾ ಪಂಚಾಯ್ತಿ ಸದಸ್ಯೆ ಲಲಿತಾ ನಾರಾಯಣ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಈಶ್ವರನಾಯ್ಕ, ಪರಮೇಶ್ವರ ದೂಗೂರು, ಶಿವಾನಂದ ಕುಗ್ವೆ, ಹೊಳಿಯಪ್ಪ ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಶ್ಯಾಮಲಾ ದೇವರಾಜ್, ಸದಸ್ಯ ಮಹಾಬಲೇಶ್ವರ ಕುಗ್ವೆ, ಜ್ಯೋತಿ ಮುರುಳೀಧರ್, ಲೇಖಕ ವಿಲಿಯಂ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರವಿಕುಗ್ವೆ, ನಗರಸಭಾ ಸದಸ್ಯ ಐ.ಎನ್. ಸುರೇಶ್‌ಬಾಬು, ವಿಶ್ವನಾಥ ಕುಗ್ವೆ ಇನ್ನಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.