ADVERTISEMENT

ಕ್ರಿಕೆಟ್ ತರಬೇತಿಗೆ ಕೀರ್ಮಾನಿ ಚಾಲನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 10:05 IST
Last Updated 10 ಏಪ್ರಿಲ್ 2012, 10:05 IST

ಶಿವಮೊಗ್ಗ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಗೂ ರಾಯಲ್ ಚಾಲೆಂಜರ್ಸ್ ಕರ್ನಾಟಕ ಕ್ರಿಕೆಟ್ ಅಕಾಡೆಮಿ ಸಂಯುಕ್ತವಾಗಿ 16 ಮತ್ತು 19 ವರ್ಷದ ಒಳಗಿನವರಿಗೆ ಹಮ್ಮಿಕೊಂಡಿರುವ ಕ್ರಿಕೆಟ್ ತರಬೇತಿ ಶಿಬಿರ ನಗರದ ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ ಸೋಮವಾರದಿಂದ ಆರಂಭವಾಯಿತು.

ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗ ಹಾಗೂ ಆರ್.ಸಿ. ಕರ್ನಾಟಕ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಸಯ್ಯದ್ ಕೀರ್ಮಾನಿ ಶಿಬಿರಕ್ಕೆ ಚಾಲನೆ ನೀಡಿ, ಶಿಬಿರಾರ್ಥಿಗಳಿಗೆ ಸಲಹೆಗಳನ್ನು ನೀಡಿದರು.

ತದನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ 5 ಕೇಂದ್ರ ಸೇರಿದಂತೆ, ರಾಜ್ಯದ 26 ಕಡೆಗಳಲ್ಲಿ ಬೇಸಿಗೆ ತರಬೇತಿ ಶಿಬಿರವನ್ನು ಕರ್ನಾಟಕ ಕ್ರಿಕೆಟ್ ಅಕಾಡೆಮಿ ಹಮ್ಮಿಕೊಂಡಿದೆ.

ಇಲ್ಲಿ ಉತ್ತಮ ಪ್ರದರ್ಶನ ನೀಡುವವರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಒಂದು ವರ್ಷಗಳ ಕಾಲ ತರಬೇತಿ ನೀಡಲಾಗುವುದು ಎಂದರು.

ವಾರದಲ್ಲಿ ನಾಲ್ಕು ದಿವಸ ಮಾತ್ರ ತರಬೇತಿ ನೀಡಲಾಗುತ್ತದೆ. ಉಳಿದ ದಿನಗಳಲ್ಲಿ ಪಂದ್ಯಗಳನ್ನು ಆಡಿಸಲಾಗುತ್ತದೆ. ಶಿಬಿರ ಆರಂಭವಾಗಿ ಕೆಲ ದಿನಗಳ ನಂತರ ವಲಯವಾರು ಕ್ರಿಕೆಟ್ ಟೂರ್ನಿ ನಡೆಸಲಾಗುತ್ತದೆ.

ರಾಜ್ಯದಲ್ಲಿ ಸುಮಾರು 1,500 ಕ್ರೀಡಾಪಟುಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವರು. ತರಬೇತಿಗೆ ವಿಡಿಯೊ ಆಧಾರಿತ ತಂತ್ರಗಳನ್ನು ಪ್ರಥಮ ಬಾರಿಗೆ ಬಳಸಲಾಗುವುದು ಎಂದು ವಿವರಿಸಿದರು.

ಅಕಾಡೆಮಿ ವಲಯ ಸಂಚಾಲಕ ಡಿ.ಆರ್. ನಾಗರಾಜ್ ಮಾತನಾಡಿ, ಶಿಬಿರ ಸೋಮವಾರದಿಂದ ಆರಂಭವಾಗಿ ಮೇ 18ರವರೆಗೆ ನಡೆಯಲಿದೆ. ಪ್ರತಿ ದಿನ ಬೆಳಿಗ್ಗೆ 7ರಿಂದ 9.30ರವರೆಗೆ ಹಾಗೂ ಸಂಜೆ 5.30ರಿಂದ 6.30ರವರೆಗೆ ಶಿಬಿರ ನಡೆಯುತ್ತದೆ. ಶಿಬಿರಕ್ಕೆ ಯಾವುದೇ ಶುಲ್ಕ ಪಡೆಯುವುದಿಲ್ಲ ಎಂದರು.

ಪ್ರತಿಭಾನ್ವಿತರಿಗೆ ಬೆಳೆಯಲು ಇದು ಅತ್ಯುತ್ತಮ ಅವಕಾಶ. ಉನ್ನತ ದರ್ಜೆಯ ತರಬೇತುದಾರರಾದ ಪಿ.ವಿ. ನಾರಾಯಣ್, ಸ್ವಾಮಿಕುಮಾರ್ ಹಾಗೂ ವಿಶ್ವನಾಥ್ ಅವರು ಇಲ್ಲಿ ತರಬೇತಿ ನೀಡುವರು ಎಂದು ಹೇಳಿದರು.

ನವುಲೆ ಕೆರೆ ಪಕ್ಕ ಕ್ರಿಕೆಟ್ ಅಕಾಡೆಮಿಯ ಎರಡು ಕ್ರಿಕೆಟ್ ಮೈದಾನಗಳ ನಿರ್ಮಾಣ ಕಾರ್ಯಭರದಿಂದ ಸಾಗಿದ್ದು, ನವೆಂಬರ್ ವೇಳೆಗೆ ಅಲ್ಲಿ ಕ್ರಿಕೆಟ್ ಅಭ್ಯಾಸಕ್ಕೆ ಲಭ್ಯವಾಗುತ್ತವೆ ಎಂದರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸುಕುಮಾರ್ ಪಟೇಲ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.