ADVERTISEMENT

ಕ್ರೀಡೆಯಿಂದ ಆರೋಗ್ಯ; ಜಿಲ್ಲಾಧಿಕಾರಿ

ಎಲ್‌ಐಸಿ ಚೆಸ್, ವಾಲಿಬಾಲ್ ಸ್ಪರ್ಧೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 9:46 IST
Last Updated 17 ಜುಲೈ 2013, 9:46 IST

ಶಿವಮೊಗ್ಗ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ 2013-14ನೇ ಸಾಲಿನ ದಕ್ಷಿಣ ಮಧ್ಯ ವಲಯದ 47ನೇ ವಾಲಿಬಾಲ್ ಮತ್ತು ಚೆಸ್ ಪಂದ್ಯಾವಳಿಗಳು ನಗರ ವಿವಿಧಡೆ ಮಂಗಳವಾರ ಆರಂಭಗೊಂಡವು.

ವಾಲಿಬಾಲ್ ಪಂದ್ಯಾವಳಿಯನ್ನು ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಬಾಲ್ ಸರ್ವ್ ಮಾಡುವ ಮೂಲಕ ಚಾಲನೆ ನೀಡಿದರು. ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಚೆಸ್ ಪಂದ್ಯಾವಳಿಯನ್ನು ಎಜುರೈಟ್ ತರಬೇತಿ ಅಕಾಡೆಮಿ ನಿರ್ದೇಶಕ ಎನ್.ದಿವಾಕರ್‌ರಾವ್ ಕಾಯಿ ನಡೆಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ವೃತ್ತಿಯ ಜತೆ ಕ್ರೀಡೆಯನ್ನೂ ಪ್ರವೃತ್ತಿಯನ್ನಾಗಿ ಮಾಡಿಕೊಂಡಾಗ ವೃತ್ತಿಯಲ್ಲಿ ನೈಪುಣ್ಯ ಪಡೆಯಲು ಸಾಧ್ಯ ಎಂದರು.

ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಕ್ರೀಡೆ. ಕ್ರೀಡೆಯಿಂದ ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಎಲ್‌ಐಸಿಯ ಹಿರಿಯ ವಿಭಾಗೀಯ ವ್ಯವಸ್ಥಾಪಕ ಎಂ.ಬಾಲಯೋಗಿ, ಮಾರುಕಟ್ಟೆ ವ್ಯವಸ್ಥಾಪಕ ಜಕ್ಕಣ್ಣನವರ್, ಕ್ರೀಡಾ ಸಮಿತಿ ಕಾರ್ಯದರ್ಶಿ ಎಸ್.ಎ.ರವಿ, ವ್ಯವಸ್ಥಾಪಕ ಎನ್.ಶೇಷಾದ್ರಿ, ಜಿಲ್ಲಾ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಶಶಿ ಮತ್ತಿತರರು ಉಪಸ್ಥಿತರಿದ್ದರು.

ಚೆಸ್ ಪಂದ್ಯಾವಳಿ:  ಚೆಸ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಎಜುರೈಟ್ ತರಬೇತಿ ಅಕಾಡೆಮಿ ನಿರ್ದೇಶಕ ಎನ್.ದಿವಾಕರ್ ರಾವ್, ಎಲ್‌ಐಸಿಯಲ್ಲಿ ನೌಕರರು ಮೊದಲಿನಿಂದಲೂ ಕೆಲಸದಲ್ಲಿ ಬದ್ಧತೆ ಉಳಿಸಿಕೊಂಡು ಬಂದಿದ್ದಾರೆ. ಇಂತಹ ಕ್ರೀಡಾಕೂಟಗಳಿಂದ ನೌಕರರಲ್ಲಿ ಪರಸ್ಪರ ವಿಶ್ವಾಸ, ಬಾಂಧವ್ಯ ಬೆಳೆಯಲು ಸಹಾಯವಾಗುತ್ತದೆ ಎಂದು ಹೇಳಿದರು.

ಚೆಸ್ ಇತ್ತೀಚಿನ ವರ್ಷಗಳಲ್ಲಿ ಬಹಳ ಪ್ರಾಮುಖ್ಯತೆ ಪಡೆಯುತ್ತಿದೆ. ಅದರಲ್ಲೂ ಶಿವಮೊಗ್ಗದಂತಹ ಊರುಗಳಲ್ಲಿ ಸಾಕಷ್ಟು ಪ್ರತಿಭೆಗಳು ಈ ಆಟದಲ್ಲಿ ಬೆಳೆಯುತ್ತಿದ್ದಾರೆ. ಅಂಥಹವರಿಗೆ ಇಂತಹ ಕ್ರೀಡಾಕೂಟಗಳು ಸ್ಫೂರ್ತಿ ನೀಡಲಿ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.