ADVERTISEMENT

ಗಣಿ ಹಗರಣ; ಸಿಬಿಐ ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2011, 11:55 IST
Last Updated 8 ಸೆಪ್ಟೆಂಬರ್ 2011, 11:55 IST

ಸಾಗರ: ಇಲ್ಲಿನ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರು ಕರ್ನಾಟಕದ ಲೋಕಾಯುಕ್ತರು ಸಲ್ಲಿಸಿರುವ ವರದಿ ಆಧರಿಸಿ ಗಣಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಬುಧವಾರ  ಮೆರವಣಿಗೆ ನಡೆಸಿದರು.

ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಲೇಖಕ ಅ.ರಾ. ಶ್ರೀನಿವಾಸ್ ಮಾತನಾಡಿ, ದೇಶದ ಎಲ್ಲೆಡೆ ಉದ್ಯಮಿಗಳೇ ರಾಜಕಾರಣಕ್ಕೆ ಇಳಿದು ವ್ಯವಸ್ಥೆಯನ್ನು ಭ್ರಷ್ಟಗೊಳಿಸುತ್ತಿರುವ ವಿದ್ಯಮಾನ ಜನಸಾಮಾನ್ಯರನ್ನು ಬೆಚ್ಚಿಬೀಳಿಸುವಂತಿದೆ. ಜನಸಾಮಾನ್ಯರು ಅಸಹಾಯಕತೆಯಿಂದ ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದು ಅವರಿಗೆ ಧ್ವನಿ ಬರಬೇಕಾದರೆ ತನಿಖಾ ಸಂಸ್ಥೆಗಳು ಮತ್ತಷ್ಟು ಚುರುಕಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಎಂ.ಕೆ.ದ್ಯಾವಪ್ಪ ಮಾತನಾಡಿ, ಗಣಿ ಧಣಿ ಜನಾರ್ಧನ ರೆಡ್ಡಿ ಚಿನ್ನದ ಸಿಂಹಾಸನದ ಮೇಲೆ ಕುಳಿತುಕೊಳ್ಳುವಷ್ಟು ಮಟ್ಟಿಗೆ ಶ್ರೀಮಂತಿಕೆ ಸಂಪಾದಿಸಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡಿದ ಸಹಕಾರದಿಂದಲೆ. ಕರ್ನಾಟಕದಲ್ಲಿ ಗಣಿಭೂತ ಈ ಮಟ್ಟಿಗೆ ಕೊಬ್ಬಲು ಬಿಜೆಪಿ ಸರ್ಕಾರ ನಡೆಸಿರುವ ಅನಾಚಾರವೆ ಕಾರಣ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದ ಹಲವು ಮಂತ್ರಿಗಳು ಕಂಬಿ ಎಣಿಸಲು ಯೋಗ್ಯರಾಗಿದ್ದಾರೆ. ಸಾಗರದಲ್ಲೂ ಜನಾರ್ಧನ ರೆಡ್ಡಿಯವರ ಸಂತತಿ ಇದೆ. ಹೀಗಾಗಿ ಇಲ್ಲಿನ ಅಧಿಕಾರಿಗಳು ಕೊಬ್ಬಿ ಹೋಗಿದ್ದಾರೆ ಎಂದು ಟೀಕಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯದ ಗಣಿ ಅಕ್ರಮದ ಕುರಿತು ಸಿಬಿಐ ತನಿಖೆ ನಡೆಯಬೇಕು ಎಂದು ಒತ್ತಾಯಿಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
 
ಆಂಧ್ರಪ್ರದೇಶದಲ್ಲಿ ನಡೆಸಿದ್ದಾರೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತು ಸಿಬಿಐ ಜನಾರ್ಧನ ರೆಡ್ಡಿ ಅವರನ್ನು ಬಂಧಿಸಿರುವುದು ಸ್ವಾಗತಾರ್ಹ. ಅದೇ ರೀತಿ ಕರ್ನಾಟಕದಲ್ಲೂ ಅವರು ನಡೆಸಿರುವ ಗಣಿಗಾರಿಕೆ ಅಕ್ರಮ ಕುರಿತು ತನಿಖೆಯಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಬಸೆ ಅಶೋಕಮೂರ್ತಿ, ಸಿರಿವಂತೆ ಚಂದ್ರಶೇಖರ್, ಅಮೃತ್‌ರಾಸ್, ಕುಂಟಗೋಡು ಸೀತಾರಾಮ್, ಎಸ್. ಎಸ್. ನಾಗರಾಜ್, ಕೆ.ಸಿ.ರಾಮಚಂದ್ರ, ಈಶ್ವರನಾಯ್ಕ ಕುಗ್ವೆ, ಮೋಹನಮೂರ್ತಿ, ಅಣ್ಣಪ್ಪ ಶಿವಗಂಗೆ, ಪರಮೇಶ್ವರ ಕೆ.ಹೊಸಕೊಪ್ಪ, ಕೆ.ಸಿ. ಹಿರಿಯಣ್ಣ, ಸಬಾಸ್ಟಿನ್ ಗೋಮ್ಸ, ವಿಲ್ಸನ್ ಗೊನ್ಸಾಲ್ವೀಸ್, ವಿಲ್ಸನ್ ಡಯಾಸ್, ತಿಮ್ಮಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಬಸವಣ್ಣಪ್ಪಗೌಡ ಇನ್ನಿತರರು ಭಾಗಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.