ADVERTISEMENT

ಗಮನಸೆಳೆದ ‘ನಾನೂ ಓದಬೇಕಿತ್ತು’ ಯಕ್ಷಗಾನ

ಯಕ್ಷಗಾನ ಕಲಾವಿದರ ನೂತನ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 8:58 IST
Last Updated 11 ಡಿಸೆಂಬರ್ 2013, 8:58 IST

ತೀರ್ಥಹಳ್ಳಿ: ಸಾಕ್ಷರತೆ ಕುರಿತು ಅರಿವು ಮೂಡಿಸುವಲ್ಲಿ ಅನೇಕ ಪ್ರದರ್ಶನಾತ್ಮಕ ಕಲೆಗಳು ಪ್ರಯತ್ನ ನಡೆಸಿವೆ. ಯಕ್ಷಗಾನದ ಮೂಲಕ  ಸಾಕ್ಷರತೆಯ ಮಹತ್ವ ತಿಳಿಸುವ ಗುತ್ಯಮ್ಮ ಜಾನಪದ ಮತ್ತು ಯಕ್ಷಗಾನ ಕಲಾ ಕೇಂದ್ರದ ನೂತನ ಪ್ರಯತ್ನ ಗಮನ ಸೆಳೆದಿದೆ.

ಗ್ರಾಮೀಣ ಭಾಗದಲ್ಲಿ ಯಕ್ಷಗಾನದ ಮೂಲಕ ಅಕ್ಷರ ಜ್ಞಾನ ಪಸರಿಸುವ ಪ್ರಯತ್ನಕ್ಕೆ  ಮುಂದಾದ ತೀರ್ಥಹಳ್ಳಿ ತಾಲ್ಲೂಕಿನ ಹೊಸಳ್ಳಿಯ ಗುತ್ಯಮ್ಮ ಜಾನಪದ ಮತ್ತು ಯಕ್ಷಗಾನ ಕಲಾ ಕೇಂದ್ರದ ಕಲಾವಿದರು ತಮ್ಮ ಕಲಾ ಪ್ರದರ್ಶನದ ಮೂಲಕ ಹಳ್ಳಿಗಾಡಿನ ಜನರಲ್ಲಿ ಸಾಕ್ಷರತೆಯ ಅರಿವು ಮೂಡಿಸಲು ಮುಂದಾಗಿದ್ದಾರೆ.

ಮಲೆನಾಡಿನಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಇಂದಿಗೂ ಜನರು ಮನಸೋಲುತ್ತಾರೆ. ಪೌರಾಣಿಕ ಕಥೆಗಳನ್ನು, ಸಾಮಾಜಿಕ ಸಂದರ್ಭಕ್ಕೆ ಹೊಂದಿಕೆ ಮಾಡಿಕೊಂಡು ಪ್ರದರ್ಶನ ನೀಡುವ ಮೂಲಕ ಜನರಲ್ಲಿ ಸಾಕ್ಷರತೆಯ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಸಿರುವ ಗುತ್ಯಮ್ಮ  ಜಾನಪದ ಮತ್ತು ಯಕ್ಷಗಾನ ಕಲಾ ಕೇಂದ್ರದ ಅಧ್ಯಕ್ಷ, ಯಕ್ಷಗಾನ ಕಲಾವಿದ ಬಿ. ಗಣಪತಿ ಅವರು ಸಾಕ್ಷರತೆಯ ಅರಿವು ಮೂಡಿಸುವ ಸಲುವಾಗಿ ರಚಿಸಿರುವ ನೂತನ ಪ್ರಸಂಗ ‘ ನಾನೂ ಓದ ಬೇಕಿತ್ತು’  ಪ್ರದರ್ಶನ ಜನಮನ್ನಣೆಗೆ ಕಾರಣವಾಗಿದೆ.

ತಾಲ್ಲೂಕಿನ ಉಬ್ಬೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಪ್ರದರ್ಶನಗೊಂಡ ‘ನಾನೂ ಓದಬೇಕಿತ್ತು’ ಯಕ್ಷಗಾನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗುತ್ಯಮ್ಮ ಜಾನಪದ ಯಕ್ಷಗಾನ ಕಲಾ ಕೇಂದ್ರದ ಕಲಾವಿದರು ಸಾಕ್ಷರತೆಯ ಅರಿವು ಮೂಡಿಸುವ ಸಲುವಾಗಿ ಅವಕಾಶ ಲಭ್ಯವಾದಾಗಲ್ಲೆಲ್ಲಾ ಯಕ್ಷಗಾನ ಪ್ರದರ್ಶನ ನೀಡುವ ಮೂಲಕ ತಣ್ಣನೆ ಸಾಕ್ಷರತೆಯ ಅರಿವು ಮೂಡಿಸುವ ಪ್ರಯತ್ನ ನಡೆಸಲು ಮುಂದಾಗಿದ್ದಾರೆ.

ಯಕ್ಷಗಾನದ ಕಾಲ ಮಿತಿಯನ್ನು ಕೇವಲ ಎರಡೂವರೆ ಗಂಟೆಗೆ ಮಿತಿಗೊಳಿಸಿ ಸಾಧ್ಯವಾದಷ್ಟು ವಯಸ್ಕರಿಗೆ ಹೇಳಬೇಕಾದ ವಿಚಾರವನ್ನು ಸೂಕ್ಷ್ಮವಾಗಿ ಕಲೆಯ ಮೂಲಕ ತಲುಪಿಸುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ರಾಜರ ಕಥೆಯ ಮೂಲಕ ಸಾಕ್ಷರತೆಯ ಮಹತ್ವವನ್ನು ಈ ಪ್ರಸಂಗದಲ್ಲಿ ಕಟ್ಟಿಕೊಡಲಾಗಿದೆ.   

ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದರೆ ಅದು ಒಂದು ಸಮಾಜ ಹಾಗೂ ಕುಟುಂಬದ ಮೇಲೆ ಯಾವ ರೀತಿಯ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದನ್ನು ಈ ಯಕ್ಷಗಾನ ಪ್ರಸಂಗದಲ್ಲಿ ವರ್ಣಿಸಲಾಗಿದೆ.

ಗಣಪತಿ ಅವರ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚೆಗೆ ಕುಪ್ಪಳಿಯಲ್ಲಿ ನಡೆದ ಉಮಾಶ್ರೀ ಸಿನಿಮೋತ್ಸವದಲ್ಲಿ ‘ನಾನೂ ಓದಬೇಕಿತ್ತು’ ಯಕ್ಷಗಾನ ಪ್ರಸಂಗವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ, ಕಲಾವಿದೆ ಉಮಾಶ್ರೀ ಉದ್ಘಾಟಿಸಿದ್ದಾರೆ. ‘ಗುತ್ಯಮ್ಮ ಯಕ್ಷಗಾನ ಕಲಾ ಕೇಂದ್ರದ 15 ಮಂದಿ ಕಲಾವಿದರು ಯಕ್ಷಗಾನ ಪ್ರದರ್ಶನ ನೀಡುತ್ತಾರೆ.

ಒಂದು ಯಕ್ಷಗಾನ ಪ್ರದರ್ಶನ ನೀಡಲು ಕನಿಷ್ಠ 10 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ದಾನಿಗಳು ನೀಡುವ ಹಣದಿಂದ ಕೆಲವು ಕಡೆ ಪ್ರದರ್ಶನ ನೀಡಬೇಕು ಎಂಬ ಯೋಚನೆಯಿದೆ. ಸಾಕ್ಷರತೆ ಅರಿವು ಮೂಡಿಸುವ ಸರ್ಕಾರದ ಕಾರ್ಯಕ್ರಮಗಳಲ್ಲಿ ಇಂಥ ಪ್ರಯತ್ನಗಳನ್ನು ಬಳಸಿಕೊಳ್ಳಲು ಮುಂದಾಗಬೇಕು’ ಎಂದು ಗುತ್ಯಮ್ಮ ಜಾನಪದ ಯಕ್ಷಗಾನ ಕಲಾ ಕೇಂದ್ರದ ಅಧ್ಯಕ್ಷ ಬಿ.ಗಣಪತಿ ಹೇಳುತ್ತಾರೆ.

ಸ್ಥಳೀಯ ಕಲಾವಿದರನ್ನೇ ಇಲ್ಲಿ ಬಳಸಿಕೊಳ್ಳಲಾಗಿದೆ. ಮುಖ್ಯ ಪಾತ್ರದಲ್ಲಿ ಮೂರ್ತಿಗೌಡ ಗುಡ್ಡೇಕೇರಿ, ಯೋಗೀಶ್‌ ಹೆಬ್ಬೈಲು, ಆಲ್ಮನೆ ಚಂದ್ರು, ರವಿರಾಜ್‌ ಮುಸ್ಸಿಯನಕೊಪ್ಪ, ಗಣಪತಿ ಇಂಗಾಲದಿ, ಸಂಕದಹೊಳೆಯ ಕಾರ್ತಿಕ್‌, ನಾಗರಾಜ್‌, ರಾಜೇಶ್‌, ಕೃಷ್ಣಮೂರ್ತಿ ಬೈಸೆ, ಸ್ತ್ರೀ ಪಾತ್ರದಲ್ಲಿ ನಾಗರಕೊಡಿಗೆ ರಾಘವೇಂದ್ರ, ಹಾಸ್ಯ ಕಲಾವಿದರಾಗಿ ಬಾಲಕೃಷ್ಣ ಅರೇಹಳ್ಳಿ, ನಟೇಶ್‌ ಭಟ್‌ ಭಾಗವತಿಕೆ, ಸದಾಶಿವ ಮೇಗರವಳ್ಳಿ ಚಂಡೆ, ಗಣೇಶಮೂರ್ತಿ ಹುಲುಗಾರು ಮದ್ದಲೆಯ ತಂಡದ ಯಕ್ಷಗಾನ ಪ್ರದರ್ಶನವನ್ನು ಬಿ.ಗಣಪತಿ ನಿರ್ದೇಶಿಸುತ್ತಾರೆ.

ಮಲೆನಾಡಿನಮಟ್ಟಿಗೆ ಸಾಕ್ಷರತೆಯ ಅರಿವು ಮೂಡಿಸುವಲ್ಲಿ ಇದೊಂದು ಗಮನಸೆಳೆಯುವ ಪ್ರಯತ್ನವಾಗಿದ್ದು, ಸರ್ಕಾರದ ನೆರವು ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.