ADVERTISEMENT

ಗಾಂಧಿತತ್ವ ಮತ್ತೆ ಪ್ರಸ್ತುತ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 7:30 IST
Last Updated 21 ಜನವರಿ 2011, 7:30 IST

ಶಿವಮೊಗ್ಗ: ಸಮಾಜದಲ್ಲಿ ಮನುಷ್ಯತ್ವ ನೆಲೆಯೂರಲು ಗಾಂಧಿತತ್ವ ಮತ್ತೆ ಪ್ರಸ್ತುತವಾಗುತ್ತಿದೆ ಎಂದು ಗದುಗಿನ ತೋಂಟದ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ನಗರದ ಬೆಕ್ಕಿನ ಕಲ್ಮಠದಲ್ಲಿ ಗುರುವಾರ 99ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಭಾವೈಕ್ಯ ಸಮ್ಮೇಳನದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿನ ಪರಸ್ಪರ ದ್ವೇಷ, ಅಸೂಹೆ ಸೇರಿದಂತೆ ಎಲ್ಲ ಅನಾಹುತಗಳಿಗೂ ಮನುಷ್ಯ ಕಾರಣ. ಮೂಲಭೂತವಾದ ಯಾರೇ ಮಾಡಿದರೂ ಅದು ಆತಂಕಕಾರಿ. ಮನುಷ್ಯ ವಿರೋಧಿ ಗುಣವದು. ಆದ್ದರಿಂದ, ಭಾವೈಕ್ಯತೆ, ಮನುಷ್ಯನನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಗಾಂಧಿತತ್ವಗಳು ಪ್ರಸ್ತುತವಾಗುತ್ತಿವೆ ಎಂದು ಉದಾಹರಣೆ ಮೂಲಕ ವಿವರಿಸಿದರು.  

ನಂತರ, ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಉದಾರೀಕರಣ ಮತ್ತು ಜಾಗತೀಕರಣದ ಭರಾಟೆಯಲ್ಲಿ ಮಾನವೀಯ ಮೌಲ್ಯಗಳು ಕಳೆದು ಹೋಗುತ್ತಿದ್ದು, ಆಧ್ಯಾತ್ಮಿಕ ಶಕ್ತಿಯ ಆಧಾರ ಸ್ತಂಭ ಅಲುಗಾಡುತ್ತಿದೆ ಎಂದರು.

ಕವಿ ಪ್ರೊ.ಇಟಗಿ ಈರಣ್ಣ ಮಾತನಾಡಿ, ಭಾವೈಕ್ಯ ಎಂದರೆ ಭಾವನೆಗಳು ಒಂದಾಗುವುದು. ಆದರೆ, ಇಂದಿಗೂ ನಮಲ್ಲಿ ಕಂದಕಗಳು ಹಾಗೇ ಉಳಿದುಕೊಂಡಿವೆ ಎಂದು ವಿಷಾದಿಸಿದರು. ಇದೇ ಸಂದರ್ಭದಲ್ಲಿ ಎಚ್. ಇಬ್ರಾಹಿಂ ಅವರಿಗೆ ‘ಗುರು ಬಸವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಕೆಪಿಎಸ್‌ಸಿ ಸದಸ್ಯ ಎಸ್. ರುದ್ರೇಗೌಡ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ಮಾಜಿ ಸಚಿವೆ ಲೀಲಾವತಿದೇವಿ ಪ್ರಸಾದ್, ಎಪಿಎಂಸಿ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಎಸ್.ಎಂ. ಶಿವನಗೌಡರ ಮತ್ತಿತರರು ಉಪಸ್ಥಿತರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.