ADVERTISEMENT

ಚರ್ಚೆ ಸ್ವರೂಪ ಪಡೆದ ರಾಜಕಾಲುವೆ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 1 ಮೇ 2011, 9:20 IST
Last Updated 1 ಮೇ 2011, 9:20 IST

ಶಿವಮೊಗ್ಗ: ನಗರದ ರಾಜಕಾಲುವೆಗಳಿಗೆ ಸಂಬಂಧಿಸಿದಂತೆ ನಡೆದ ಚರ್ಚೆ, ತೀವ್ರ ಸ್ವರೂಪ ಪಡೆದು ನಗರಸಭೆ ಪ್ರತಿಪಕ್ಷದ ನಾಯಕ ಎಸ್.ಕೆ. ಮರಿಯಪ್ಪ ಮತ್ತು ಆಯುಕ್ತ ಬಿ. ಜಯಣ್ಣ ಅವರ ನಡುವೆ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತು.

ಶನಿವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ, ನಗರ ವ್ಯಾಪ್ತಿಗೆ ಬರುವ ರಾಜಕಾಲುವೆಗಳ ತೆರವು ಹಾಗೂ ಸ್ವಚ್ಛಗೊಳಿಸುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಆರೋಪಿಸಿದ ಎಸ್.ಕೆ. ಮರಿಯಪ್ಪ, ಈ ಬಗ್ಗೆ ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಲು ಆಯುಕ್ತರು ಮುಂದಾದಾಗ, ‘ಈವರೆಗೆ ನೀವು ಏನೂ ಮಾಡಿಲ್ಲ. ಯಾವುದರ ಬಗ್ಗೆಯೂ ಸ್ಪಷ್ಟ ಮಾಹಿತಿಯೂ ನಿಮ್ಮಲ್ಲಿಲ್ಲ. ಕುಳಿತುಕೊಳ್ರಿ’ ಎಂದು ಮೂದಲಿಸಿದರು.
ಇದರಿಂದ ಕೆರಳಿದ ಆಯುಕ್ತ ಬಿ. ಜಯಣ್ಣ, ‘ನೀವು ಹೇಳಿದ್ದನ್ನೆಲ್ಲಾ ಕೇಳೋಕ್ಕಾಗಲ್ಲ. ಸರ್ಕಾರ ಹೇಳಿದ್ದನ್ನು ಕೇಳುವುದಕ್ಕೆ ನಾನಿರೋದು’ ಎಂದು ಪ್ರತಿಕ್ರಿಯಿಸಿದರು. |

‘ನೀವೇನು ಅಧಿಕಾರಿಗಳೋ ಅಥವಾ ರಾಜಕಾರಣಿಗಳೋ? ರಾಜಕಾರಣ ಮಾಡಲು ಇಲ್ಲಿ ಬಂದಿದ್ದೀರಾ? ಶಾಸಕರ ಬಗ್ಗೆ ಎಷ್ಟು ಹಗುರವಾಗಿ ಮಾತಾಡಿದ್ದೀರಾ ಎಂಬುದನ್ನು ಇಲ್ಲಿ ಹೇಳಬೇಕಾ?’ ಎಂದು ಎಸ್.ಕೆ. ಮರಿಯಪ್ಪ ಎಚ್ಚರಿಕೆ ನೀಡಿದರು. ಇದಕ್ಕೆ ಪ್ರತಿಯಾಗಿ, ‘ನೀವು ಮಾತಾಡಿಲ್ವಾ? ಅದನ್ನೂ ಹೇಳಬೇಕಾ?’ ಎಂದರು.

ಆಗ, ಇಬ್ಬರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತು. ಪುನಃ ಮರಿಯಪ್ಪ, ರಾಜಕಾಲುವೆ ಬಗ್ಗೆ ಮಾಹಿತಿ ಕೇಳಿದಾಗ, ‘ನನಗೇನೂ ಗೊತ್ತಿಲ್ಲ’ ಎಂದು ಆಯುಕ್ತರು ಉತ್ತರಿಸಿದರು. ಇದರಿಂದ ಕೆರಳಿದ ಪ್ರತಿಪಕ್ಷದ ಸದಸ್ಯರು, ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ ಮತ್ತು ಆಯುಕ್ತರು ಇದ್ದಲ್ಲಿಗೆ ತೆರಳಿ, ಆಕ್ರೋಶ ವ್ಯಕ್ತಪಡಿಸಿದರು. ಆಗ, ಕೆಲಹೊತ್ತು ಸಭೆಯನ್ನು ಮುಂದೂಡಲಾಯಿತು.

ನಂತರ ಆಯುಕ್ತರು, ‘ನನ್ನಿಂದ ಸಭೆಯಲ್ಲಿ ಗೊಂದಲ ಉಂಟಾಯಿತು. ಇದಕ್ಕೆ ವಿಷಾದಿಸುತ್ತೇನೆ’ ಎಂದರು.
ಆಗ, ಸಭೆ ಮುಂದುವರಿಯಿತು. ಸಭೆಯ ಆರಂಭದಲ್ಲಿ ರಾಜಕಾಲುವೆ, ಚರಂಡಿಗಳನ್ನು ಈಗಲೇ ಸ್ವಚ್ಛಗೊಳಿಸಬೇಕು. ಮಳೆಗಾಲದಲ್ಲಿ ಮತ್ತದೇ ಸಮಸ್ಯೆ ಉದ್ಭವಿಸಲಿದೆ ಎಂದು ಸದಸ್ಯ ಎಚ್.ಸಿ. ಯೋಗೀಶ್ ಒತ್ತಾಯಿಸಿದರು. ಇದಕ್ಕೆ ಸದಸ್ಯ ವಿಶ್ವನಾಥ್ ಕಾಶಿ ದನಿಗೂಡಿಸಿದರು.

ಪೂರಕವಾಗಿ ಮಾತನಾಡಿದ ಸದಸ್ಯ ರಾಜಶೇಖರ್, ನಗರಸಭೆ ಆಸ್ತಿ ಬಗ್ಗೆಯೇ ಸ್ಪಷ್ಟ ಮಾಹಿತಿ ಇಲ್ಲ. ಆಸ್ತಿ ನೋಂದಾವಣಿಯಲ್ಲಿ ಮಾತ್ರ ನಗರಸಭೆ ಹೆಸರಿದೆ. ಆದರೆ, ತಹಶೀಲ್ದಾರ್ ಕಚೇರಿಯಲ್ಲಿನ ಆರ್‌ಟಿಸಿಯಲ್ಲಿ ಬೇರೆ ಹೆಸರಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಅಧಿಕಾರಿಗಳು, ನಗರ ವ್ಯಾಪ್ತಿಯಲ್ಲಿ 13 ರಾಜಕಾಲುವೆಗಳು ಬರುತ್ತವೆ. ಇವುಗಳ ಉದ್ದ 30.14 ಕಿ.ಮೀ. ಆಗಿದ್ದು, ಹಂತ ಹಂತವಾಗಿ ಇವುಗಳ ದುರಸ್ತಿ, ಹೂಳು ತೆಗೆಯುವ ಕೆಲಸ ಮಾಡಲಾಗುತ್ತಿದೆ ಎಂದರು. ಉಪಾಧ್ಯಕ್ಷ ಬಿ. ಸತ್ಯನಾರಾಯಣ ಉಪಸ್ಥಿತರಿದ್ದರು.

ಕಲುಷಿತ ನೀರು ಪೂರೈಕೆ: ದೃಢಪಡಿಸಿದ ಅಧಿಕಾರಿಗಳು

ಶಿವಮೊಗ್ಗ: ನಗರಕ್ಕೆ ಕೆಲದಿನಗಳಿಂದ ಕಲುಷಿತ ನೀರು ಪೂರೈಕೆ ಆಗುತ್ತಿದೆ!
ಇದನ್ನು ಸ್ವತಃ ಅಧಿಕಾರಿಗಳೇ ಒಪ್ಪಿಕೊಂಡರು. ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದ ನಗರಸಭೆ ಸದಸ್ಯ ಎಸ್.ಕೆ. ಮರಿಯಪ್ಪ, ಸುಮಾರು ದಿನಗಳಿಂದ ನಗರದಲ್ಲಿ ಕಲುಷಿತ ನೀರು ಸರಬರಾಜಾಗುತ್ತಿದೆ. ಮಣ್ಣು ಮಿಶ್ರಿತ ನೀರಿನಿಂದ ಆರೋಗ್ಯದ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಲುಷಿತ ನೀರು ಪೂರೈಕೆ ಆಗುತ್ತಿರುವುದನ್ನು ಒಪ್ಪಿಕೊಂಡ ಅಧಿಕಾರಿಗಳು, ಹಳೇ ಸಂಪುನಿಂದ ಸರಬರಾಜಾಗುವ ನೀರು ಸ್ವಲ್ಪಮಟ್ಟಿಗೆ ಕಲುಷಿತಗೊಂಡಿರುತ್ತದೆ. ಎರಡು ಕಡೆ ಮಾತ್ರ ಶುದ್ಧೀಕರಣವಾಗುತ್ತಿದ್ದು, ಇನ್ನೊಂದು ಇನ್ನೂ ಕಾರ್ಯಾರಂಭವಾಗಿಲ್ಲ. ಹಾಗಾಗಿ, ಈ ಸಮಸ್ಯೆ ಉದ್ಭವಿಸಿದೆ ಎಂದು ಸಮಜಾಯಿಷಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.