ADVERTISEMENT

ಚಿಂತಕ ಡಿ.ಎಸ್. ನಾಗಭೂಷಣ ವಿಶ್ಲೇಷಣೆ...

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 9:25 IST
Last Updated 19 ಸೆಪ್ಟೆಂಬರ್ 2011, 9:25 IST

ಶಿವಮೊಗ್ಗ: ನವೋದಯ ಹಾಗೂ ಪ್ರಾಚೀನ ಸಾಹಿತ್ಯದ ಸುತ್ತವೇ ಗಿರಕಿ ಹೊಡೆದ ಕಳೆದ ದಶಕದ ಕನ್ನಡ ಸಾಹಿತ್ಯ ವಿಮರ್ಶೆ, ಸಮಕಾಲೀನ ಚಿಂತನೆಗಳ ಬಗ್ಗೆ ಗಮನ ಹರಿಸಿಲ್ಲ ಎಂದು ಸಂಸ್ಕೃತಿ ಚಿಂತಕ ಡಿ.ಎಸ್. ನಾಗಭೂಷಣ ವಿಶ್ಲೇಷಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಂಘ ಸಂಯುಕ್ತವಾಗಿ `ಕನ್ನಡ ಸಾಹಿತ್ಯ: 2001-2011~ ಕುರಿತು ಹಮ್ಮಿಕೊಂಡಿರುವ ವಿಚಾರ ಸಂಕಿರಣದಲ್ಲಿ ಶನಿವಾರ ಸಾಹಿತ್ಯ ವಿಮರ್ಶೆ ಬಗ್ಗೆ ಅವರು ಮಾತನಾಡಿದರು.

ಈ ದಶಕದಲ್ಲಿ ಕುವೆಂಪು, ಗಾಂಧಿ, ಬಸವಣ್ಣನ ಕುರಿತಂತೆ ಅತಿಹೆಚ್ಚು ವಿಮರ್ಶೆಗಳು ಬಂದಿವೆ ಎಂದು ಪ್ರಸ್ತಾಪಿಸಿದ ಅವರು, ಕೆಲವು ಸ್ಟಾರ್ ಸಾಹಿತಿಗಳ ಕೃತಿಗಳು ಬಿಡುಗಡೆ ಆಗುತ್ತಿದ್ದಂತೆ ವಿಮರ್ಶಿಸಲು ಕೆಲವು ವಿಮರ್ಶಕರು ಸಿಪಾಯಿ ತರಹ ಸಿದ್ಧರಾಗಿರುತ್ತಾರೆ. ಆದರೆ, ತೇಜಸ್ವಿ ಅವರ `ವಿಮರ್ಶೆಯ ವಿಮರ್ಶೆ~ ಕೃತಿ ಬಗ್ಗೆ ಏಕೆ ವಿಮರ್ಶೆ ಬಂದಿಲ್ಲ ಎಂದು ಪ್ರಶ್ನಿಸಿದರು.

ಸಂಸ್ಕೃತಿ ಹಿಂದಿನ ರಾಜಕಾರಣ ಕುರಿತಂತೆ ತೇಜಸ್ವಿ ಎತ್ತಿದ್ದ ಪ್ರಶ್ನೆಗಳು ಬಹಳ ಮೌಲಿಕವಾದವು. ಇದೇ ಪ್ರಶ್ನೆಗಳನ್ನು ಹಿಂದೆ ಡಿ.ಆರ್. ನಾಗರಾಜ್ ಎತ್ತಿದ್ದರು. ಇಷ್ಟಾದರೂ ಕಳೆದ ದಶಕದ ವಿಮರ್ಶೆ ಇದನ್ನು ಗಮನಿಸದಿರುವುದು ಸೋಜಿಗ ಎಂದರು.

ತೇಜಸ್ವಿ ಅವರ `ಕಿರುಗೂರಿನ ಗಯ್ಯಾಳಿ~ ಕಥೆ ವಿಶ್ಲೇಷಿಸುವಾಗ ಗಯ್ಯಾಳಿ ಪದದ ಅರ್ಥ ಪಲ್ಲಟವಾಗಿಲ್ಲ ಎಂದು ವಿಮರ್ಶಕಿ ಡಾ.ಆಶಾದೇವಿ ಆಕ್ಷೇಪಿಸಿದ್ದಾರೆ. ಆದರೆ, ಇದು ತೇಜಸ್ವಿ ಅವರನ್ನು ಓದುವ ಕ್ರಮವಲ್ಲ. ಹೀಗೆ ಹೇಳುವುದು ಆಶಾದೇವಿ ಅವರಿಗೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ರೀತಿ ಪ್ರೊ.ರಾಜೇಂದ್ರ ಚೆನ್ನಿ ಅವರ ವಿಮರ್ಶೆಯಲ್ಲೂ ಸಾಕಷ್ಟು ವಿರೋಧಾಭಾಸಗಳಿವೆ. ಡಿ.ಆರ್. ನಾಗರಾಜ್ ಕೃತಿಯೊಂದರಲ್ಲಿ ಅಂಬೇಡ್ಕರ್ ಪ್ರಸ್ತಾಪಿಸಿಲ್ಲ ಎಂದು ಟೀಕಿಸುವ ಚೆನ್ನಿ ಅವರೇ ತಾವು ಬರೆದ `ಕನ್ನಡ ಹಿಂದೂ ಸ್ವರಾಜ್~ ಲೇಖನದಲ್ಲಿ ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪ ಮಾಡುವ ಗೋಜಿಗೆ ಹೋಗಿಲ್ಲ ಎಂದು ಟೀಕಿಸಿದರು.

ಬುದ್ದಿಜೀವಿಗಳು, ಚಿಂತಕರು ಪೇಪರ್ ಹುಲಿಗಳಾಗಿದ್ದಾರೆ. ಸಕ್ರಿಯ ಹೋರಾಟದಲ್ಲಿದ್ದೇವೆ ಎಂದು ತೋರಿಸಿ ಕೊಳ್ಳಲಾಗುತ್ತಿದೆ. ಆದರೆ, ವಾಸ್ತವ ಬೇರೆಯದೇ ಇದೆ. ಪ್ರಭುತ್ವವೇ ಇವರನ್ನು ಬೈಯಲು ದುಡ್ಡು ಕೊಟ್ಟು ಇಟ್ಟುಕೊಂಡಂತಾಗಿದೆ ಎಂದು ವಾಗ್ದಾಳಿ ನಡೆಸಿದ ಅವರು, ಪ್ರಭುತ್ವದ ಹಂಗಿಲ್ಲದೆ ಬದುಕುವ ಜೀವನಶೈಲಿ ರೂಢಿಸಿಕೊಳ್ಳಿ ಎಂದು ಬುದ್ದಿಜೀವಿಗಳು, ಚಿಂತಕರನ್ನು ಕುಟುಕಿದರು.

ಪ್ರವಾಸ ಸಾಹಿತ್ಯ ಕುರಿತು ಮಾತನಾಡಿದ ಡಾ.ಲತಾ ಗುತ್ತಿ, ಈ ದಶಕದ ಪ್ರವಾಸ ಸಾಹಿತ್ಯದಲ್ಲಿ ಅಂತಹ ಗಮನಾರ್ಹ ಬದಲಾವಣೆಗಳಿಲ್ಲ. ಗಂಭೀರವಾದ ಪ್ರವಾಸ ಸಾಹಿತ್ಯ ಈ ದಶಕದಲ್ಲಿ ಬಂದಿಲ್ಲ ಎಂದರು.
ವಿಚಾರ ಸಾಹಿತ್ಯ ಕುರಿತು ಡಾ.ನಟರಾಜ ಬೂದಾಳು ಮಾತನಾಡಿ ದರು.
 
ಕರ್ನಾಟಕ ಸಂಘದ ಅಧ್ಯಕ್ಷ ಡಾ.ತೀ.ನಂ. ಶಂಕರನಾರಾಯಣ, ಡಾ.ಸಬಿತಾ ಬನ್ನಾಡಿ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಡಾ.ಎಚ್.ಟಿ. ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.