ADVERTISEMENT

ಜಾತ್ರೆ, ಹಬ್ಬದಂತೆ ಸಂಭ್ರಮದಿಂದ ಕೃಷಿ ಮಾಡಿ

ಕೃಷಿ ಉತ್ಸವದಲ್ಲಿ ರೈತರಿಗೆ ಪಂಡಿತಾರಾಧ್ಯ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 9:52 IST
Last Updated 4 ಮಾರ್ಚ್ 2014, 9:52 IST

ಹೊಳಲ್ಕೆರೆ: ರೈತರು ಕೃಷಿಯನ್ನು ಜಾತ್ರೆ, ಹಬ್ಬದ ರೀತಿ ಸಂಭ್ರಮದಿಂದ ಮಾಡಬೇಕು ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ಪಟ್ಟಣದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಕೃಷಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತ ಕೃಷಿಯಿಂದ ಹೆಚ್ಚಿನ ಆದಾಯ ಬರುವುದಿಲ್ಲ ಎಂದು ಅಲ್ಪತೃಪ್ತಿ ಪಡುತ್ತಾನೆ. ಆದರೆ ಕೃಷಿ ದೇಶಕ್ಕೆ ಅನ್ನ ನೀಡುವ ಪವಿತ್ರ ಕಾಯಕ. ಅದನ್ನು ನಿಷ್ಠೆ, ಪ್ರಾಮಾಣಿಕತೆ, ಶ್ರದ್ಧೆಯಿಂದ ಮಾಡಬೇಕು. ದೇಶದಲ್ಲಿ ಭ್ರಷ್ಟಾಚಾರ ತುಂಬಿದ್ದು, ಕೃಷಿಕನಿಗೆ ಅಳಿದುಳಿದ ಆದಾಯ ಅಷ್ಟೇ ದೊರೆಯುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಹಣ ಮಾಡುವ ದುರಾಸೆ ಇದ್ದರೆ, ರೈತ ಮಾತ್ರ ಸಂತೃಪ್ತ ಜೀವನ ನಡೆಸಿದರೆ ಸಾಕು ಎಂಬ ಸಮಾಧಾನದಿಂದ ಇರುತ್ತಾನೆ.

ರೈತ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆಯನ್ನು ಸರ್ಕಾರ ನಿಗದಿ ಮಾಡಬೇಕಿಲ್ಲ. ರೈತನೇ ತನ್ನ ಬೆಳೆಗೆ ಬೆಲೆ ನಿಗದಿ ಮಾಡುವಂತೆ ಆಗಬೇಕು. ಎಲ್ಲರೂ ರೈತನನ್ನು ಹುಡುಕಿಕೊಂಡು ಬರುವ ಸನ್ನಿವೇಶ ಸೃಷ್ಠಿಯಾಗಬೇಕು ಎಂದರು.

ವೈಜ್ಞಾನಿಕ ಕೃಷಿ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಆರೋಗ್ಯಕ್ಕೆ ಮಾರಕವಾಗುವ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೆ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಅನಕ್ಷರಸ್ಥರಷ್ಟೇ ಕೃಷಿ ಮಾಡಬೇಕು ಎಂಬ ಪರಿಸ್ಥಿತಿ ಇದ್ದು, ವಿದ್ಯಾವಂತರೂ ಕೃಷಿಯಲ್ಲಿ ತೊಡಗಬೇಕು.  ಹಣದಾಸೆಗಾಗಿ ಕೇವಲ ವಾಣಿಜ್ಯ ಬೆಳೆಗಳನ್ನಷ್ಟೇ ಬೆಳೆಯದೆ ಆಹಾರ ಬೆಳೆಗಳಿಗೂ ಒತ್ತು ನೀಡಬೇಕು ಎಂದು ಸ್ವಾಮೀಜಿ ರೈತರಿಗೆ ಕಿವಿಮಾತು ಹೇಳಿದರು.

ವಸ್ತುಪ್ರದರ್ಶನ ಉದ್ಘಾಟಿಸಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶ. ಆದರೆ ಹೆಚ್ಚಿನ ಜನ ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ವ್ಯಾಪಾರ, ಕಾರ್ಖಾನೆಗಳಲ್ಲಿ ದುಡಿಯುವುದು, ಇತರ ಉದ್ಯೋಗಗಳಿಂದ ಹೆಚ್ಚಿನ ಹಣ ಬರುತ್ತದೆ ಎಂದು ನಗರಗಳ ಕಡೆ ವಲಸೆ ಹೋಗುತ್ತಿದ್ದಾರೆ. ಬಡರೈತ ರಾಗಿ, ಜೋಳ ಬೆಳೆಯುವುದು, ಶ್ರೀಮಂತ ರೈತ ಅಡಿಕೆ, ತೆಂಗು, ದಾಳಿಂಬೆ ಮತ್ತಿತರ ವಾಣಿಜ್ಯ ಬೆಳೆ ಬೆಳೆಯುವುದು ಸಾಮಾನ್ಯವಾಗಿದೆ.

ಎಲ್ಲರೂ ಆಹಾರ ಧಾನ್ಯ ಬೆಳೆಯುವಂತಾಗಬೇಕು. ನೀರಾವರಿ ಸೌಲಭ್ಯ ಇರುವ ಭಾಗದ ರೈತರನ್ನಷ್ಟೇ ಸರ್ಕಾರ ಗುರುತಿಸಿ ಬೆಂಬಲ ಬೆಲೆ ನೀಡುತ್ತಿದೆ. ಆದರೆ ಬರಪೀಡಿತ ಪ್ರದೇಶಗಳ ರೈತರಿಗೆ ಹೆಚ್ಚಿನ ಉತ್ತೇಜನ ನೀಡುವ ಅಗತ್ಯ ಇದೆ ಎಂದರು.

ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಮಾತನಾಡಿ, ಚಾಕೋಲೇಟ್‌, ಪೇಸ್ಟ್‌, ಸೋಪು, ಸಣ್ಣ ಸೂಜಿ, ಗುಂಡುಪಿನ್‌ಗಳಿಗೂ ಕಂಪೆನಿಯವರೇ ಬೆಲೆ ನಿಗದಿ ಮಾಡುತ್ತಾರೆ. ಅವರು ತಿಂಗಳಿಗೊಮ್ಮೆ ಬೆಲೆ ಏರಿಸುತ್ತಿದ್ದರೂ ಗ್ರಾಹಕರು ಅನಿವಾರ್ಯವಾಗಿ ಖರೀದಿ ಮಾಡಲೇಬೇಕು. ಆದರೆ, ರೈತನ ಉತ್ಪನ್ನಗಳಿಗೆ ಮಾತ್ರ ನಿಗದಿತ ಬೆಲೆ ಇಲ್ಲದಿರುವುದು ಅರ್ಥಹೀನ ಎಂದರು.
ಹನುಮಲಿ ಷಣ್ಮುಖಪ್ಪ, ತಾ.ಪಂ. ಅಧ್ಯಕ್ಷ ಸಿ.ರವಿ, ಯೋಜನೆಯ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್‌, ಯೋಜನಾಧಿಕಾರಿ ಜನಾರ್ದನ್‌, ಮಾಜಿ ಶಾಸಕ ಪಿ.ರಮೇಶ್‌, ಪ.ಪಂ. ಸದಸ್ಯ ಸವಿತಾ ಬಸವರಾಜು, ರಮೇಶ್‌, ತಹಶೀಲ್ದಾರ್‌ ಚನ್ನಬಸಪ್ಪ, ತಿಪ್ಪಯ್ಯ, ರುದ್ರಪ್ಪ, ಶಂಕರಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.