ADVERTISEMENT

ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 6:05 IST
Last Updated 22 ಆಗಸ್ಟ್ 2012, 6:05 IST

ತೀರ್ಥಹಳ್ಳಿ: ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಕೃಷಿ ಮೇಲಿನ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ಮಂಗಳವಾರ ತೀರ್ಥಹಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರು ಇಂದು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಯಾವ ಸರ್ಕಾರಗಳೂ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ. ಈ ಹಿಂದೆ ಆಡಳಿತ ನಡೆಸಿದ ಜೆಡಿಎಸ್ ನೇತೃತ್ವದ ಸರ್ಕಾರ ಸಾಲಮನ್ನಾ ಮಾಡುವ ಮೂಲಕ ರೈತರ ನೆರವಿಗೆ ಸ್ಪಂದಿಸಿದೆ ಎಂದು ಹೇಳಿದರು.

ಬಗರ್‌ಹುಕುಂ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ. ಆ ಮೂಲಕ ಮಾತ್ರ ಅರ್ಜಿದಾರರಿಗೆ ಭೂಮಿ ಹಂಚಲು ಸಾಧ್ಯವಿದೆ. ಶಿಕಾರಿಪುರ ತಾಲ್ಲೂಕು ಕೆರೆಹಳ್ಳಿಯಲ್ಲಿ ರೈತರ ಅಡಿಕೆ ತೋಟ ಧ್ವಂಸ ಮಾಡಿರುವುದು ಸರಿಯಾದ ಕ್ರಮವಲ್ಲ.

ಇಂಥ ಘಟನೆಗಳು ನಾಳೆ ತೀರ್ಥಹಳ್ಳಿ ಯಲ್ಲಿಯೂ ನಡೆಯಬಹುದು. ರೈತರ ಪರವಾಗಿ `ಅನ್ನದಾತನ ಕಣ್ಣೀರು~ ಹೆಸರಿನಲ್ಲಿ ಕೆರೆಹಳ್ಳಿಯಿಂದ ಶಿವಮೊಗ್ಗೆಯವರೆಗೆ 130 ಕಿ.ಮೀ. ಪಾದ ಯಾತ್ರೆಯನ್ನು ಸೆ. 4ರಿಂದ 9ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಸಂದರ್ಭ ಎದುರಾಗಿದೆ. ಬರಗಾಲ ಬಿದ್ದಾಗ ರೈತರ ನೆರವಿಗೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಬತ್ತದ ಬಿತ್ತನೆ  ಬೀಜವನ್ನು ನೀಡಿ ಸಹಕರಿಸಿದ್ದರು. ಅದರ ಮುಂದುವರಿಕೆಯ ಭಾಗವಾಗಿ ವೈಯಕ್ತಿಕವಾಗಿ ಕೆಲವು ಆಯ್ದ ಭಾಗಗಳಲ್ಲಿ ಅನ್ನಕ್ಕೆ ಆಸರೆ ಆಗುವಂತೆ ಬತ್ತವನ್ನು ಹಂಚುವ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯಾದ್ಯಂತ ಜೆಡಿಎಸ್‌ಗೆ ಒಲವು ವ್ಯಕ್ತವಾಗುತ್ತಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ಈಗಿನ ಬಿಜೆಪಿ ಸರ್ಕಾರಕ್ಕೆ ಜನರ ಮೇಲೆ ಕಾಳಜಿ ಇಲ್ಲ. ರೈತರು ಬದುಕಲಾರದೇ ವಿಷ ಕುಡಿದರೂ ಚಿಂತೆ ಇಲ್ಲ. ಕೇವಲ ಕುರ್ಚಿ ಉಳಿಸಿಕೊಳ್ಳವ ಪ್ರಯತ್ನವನ್ನು ಮಾತ್ರ ಮಾಡುತ್ತಿದೆ. ಅದಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕೆರೆಹಳ್ಳಿಯಿಂದ ಹೊರಟ ಪಾದಯಾತ್ರೆ ಸೊರಬ, ಶಿರಾಳಕೊಪ್ಪ, ಶಿಕಾರಿಪುರ, ಕುಂಸಿ ಮಾರ್ಗವಾಗಿ ಆಯನೂರು ಮೂಲಕ ಶಿವಮೊಗ್ಗ ತಲುಪಲಿದೆ. ತೀರ್ಥಹಳ್ಳಿಯಿಂದ ಆಗಮಿಸುವ ಕಾರ್ಯಕರ್ತರು ಆಯನೂರಿನಲ್ಲಿ ಪಾದಯಾತ್ರೆಗೆ ಸೇರಲಿದ್ದಾರೆ. ಸೆ. 7ರಂದು ಕುಮಾರಸ್ವಾಮಿ ಅವರು ಕುಂಸಿಯಲ್ಲಿ ಕಾರ್ಯಕರ್ತರೊಂದಿಗೆ ವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್. ಮದನ್, ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಪಕ್ಷದ ಮುಖಂಡರಾದ ಅಡ್ಡಗುಡ್ಡೆ ಮಹೇಶ್‌ನಾಯ್ಕ, ನಾಕುಂಜಿ ಸುಧಾಕರ್, ಕೀಗಡಿ ಪುಟ್ಟಸ್ವಾಮಿ, ಜಯಂತಿ ಕೃಷ್ಣಮೂರ್ತಿ, ಡಾಕಮ್ಮ ಹಾಜರಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.