ADVERTISEMENT

ಜೋಪಡಿಯಲ್ಲಿ ಹಾರಿದ ತ್ರಿವರ್ಣ ಧ್ವಜ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 7:45 IST
Last Updated 16 ಆಗಸ್ಟ್ 2012, 7:45 IST

ತೀರ್ಥಹಳ್ಳಿ: ಸುತ್ತಲೂ ಜೋಪಡಿಗಳು. ನೆರೆದವರಲ್ಲಿ ಹಬ್ಬದ ಸಂಭ್ರಮ. ದಿನದ ಕಾಯಕ ಆರಂಭವಾಗುವುದಕ್ಕೂ ಮುನ್ನ ಭಾವುಟ ಹಾರಿಸಿ ನಲಿವ ಮನಸ್ಸುಗಳು. ನಾವೂ ಈ ರಾಷ್ಟ್ರದ ಸ್ವಂತಂತ್ರ ಪ್ರಜೆಗಳು ಎಂಬ ಭಾವಕ್ಕೆ ಅಲ್ಲಿ ಕೊರತೆ ಇರಲಿಲ್ಲ!. ಸರ್ಕಾರ ನಮ್ಮನ್ನು ಈ ದೇಶದ ಪ್ರಜೆಗಳು ಎಂದು ಪರಿಗಣಿಸದಿದ್ದರೆ ಏನಂತೆ ನಾವೂ ಸ್ವತಂತ್ರ ಭಾರತದ ಭಾವುಟ ಹಾರಿಸಿ ನಲಿಯೋಣ ಎಂಬ ತವಕಕ್ಕೆ ಅಲ್ಲಿ ಕೊನೆ ಮೊದಲಿರಲಿಲ್ಲ!.

ಇಂಥಹ ವಿಶಿಷ್ಟ ಸನ್ನಿವೇಶ ಸೃಷ್ಠಿಯಾಗಿದ್ದು, ಪಟ್ಟಣ ಸಮೀಪ ತುಂಗಾ ನದಿ ದಡದ ಕುರುವಳ್ಳಿ ಕಮಾನು ಸೇತುವೆ ಬಳಿಯಲ್ಲಿ ಸುಮಾರು 30 ವರ್ಷಳಿಗಿಂತಲೂ ಹಿಂದಿನಿಂದ ಜೋಪಡಿಗಳಲ್ಲಿ ನೆಲೆಸಿರುವ ಅಲೆಮಾರಿ ಕುಟುಂಬದ ಜನರಲ್ಲಿ.

ಯುವ ಕಲಾವಿದ ನಿಶ್ಚಲ್ ಶೆಟ್ಟಿ ಅವರ ನೇತೃತ್ವದಲ್ಲಿ 66ನೇ ಸ್ವಾತಂತ್ರ್ಯ ದಿನವಯನ್ನು  ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ADVERTISEMENT

ಶ್ರೀನಂದ ದಬ್ಬಣಗದ್ದೆ, ಪೋರ್ಣೇಶ್ ಕೆಳಕೆರೆ, ಲೋಹಿತ್ ಚಿಬ್ಬಲಗುಡ್ಡೆ, ಸಮಾನ ಮನಸ್ಕ ಯುವಕರು ಕಾರ್ಯಕ್ರಮ  ಆಯೋಜಿಸಿದ್ದರು.

ಉತ್ಸಾಹದಲ್ಲಿ ಜೋಪಡಿ ಮಕ್ಕಳು ಸಿಹಿ ತಿಂದು ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

ಬಸ್‌ನಿಲ್ದಾಣ ಸ್ವಚ್ಛ

ಸಾಗರ: ಜೆಡಿಎಸ್ ಮುಖಂಡರು ಖಾಸಗಿ ಬಸ್‌ನಿಲ್ದಾಣದ ಆವರಣ ಸ್ವಚ್ಛಗೊಳಿಸುವ ಮೂಲಕ ಬುಧವಾರ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಿದರು.

ಕಾರ್ಯಕರ್ತರು ಬಸ್‌ನಿಲ್ದಾಣದ ಆವರಣಕ್ಕೆ ನೀರು ಸುರಿದು ಕಸ ಗುಡಿಸುವ ಮೂಲಕ ಶ್ರಮದಾನ ಮಾಡಿದರು.
ಪಕ್ಷದ ನಗರ ಘಟಕದ ಅಧ್ಯಕ್ಷ ಎಸ್.ಎಲ್. ಮಂಜುನಾಥ್ ಮಾತನಾಡಿ,  ನಗರಸಭೆ ನೈರ್ಮಲ್ಯ ಕಾಪಾಡು ವಲ್ಲಿ ವಿಫಲವಾಗಿದೆ. ಬಸ್‌ನಿಲ್ದಾಣ ಸ್ವಚ್ಛಗೊಳಿಸಿ ನಿರ್ಲಕ್ಷ್ಯ ಖಂಡಿಸಿದ್ದೇವೆ ಎಂದು ಹೇಳಿದರು.

ಕೆ. ಅರುಣ್ ಪ್ರಸಾದ್, ಕನ್ನಪ್ಪ ಬೆಳಲಮಕ್ಕಿ, ಜಾಕೀರ್, ಎಳನೀರು ಮುನ್ನಾ ಇದ್ದರು.

ದೇಶ ಪ್ರೇಮ

ಶಿಕಾರಿಪುರ: ಪ್ರತಿ ವರ್ಷ ತಾಲ್ಲೂಕು ಆಡಳಿತದಿಂದ ಕಾಲೇಜು ಮೈದಾನದಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಕಂಚಿನ ಕಂಠದ ಮೂಲಕ ಭಾರತ್‌ಮಾತಾ ಕೀ ಜೈ ಎಂಬ ಘೋಷಣೆ ಹೇಳಿ ವಿದ್ಯಾರ್ಥಿಗಳನ್ನು ಸೆಳೆದ ಹಿರಿಯರಾದ ಎಸ್.ಆರ್. ಕೃಷ್ಣಪ್ಪ ಪ್ರಸ್ತುತ ವರ್ಷ ಅನಾರೋಗ್ಯದ ನಿಮಿತ್ತ ಮನೆ ಮುಂದೆಯೇ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವ ಆಚರಿಸಿದರು.

 ಕೃಷ್ಣಪ್ಪ ಅವರ ಸಾಮಾಜಿಕ ಸೇವೆ ಗುರುತಿಸಿ ಎಚ್.ಡಿ. ಕುಮಾರ ಸ್ವಾಮಿ, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರ್ಕಾರ 2007ರಲ್ಲಿ ಅವಧಿಯಲ್ಲಿ  ಡಾ.ಅಂಬೇಡ್ಕರ್ ಅವರ 116ನೇ ಜನ್ಮೋತ್ಸವ ಪ್ರಯುಕ್ತ ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಿದೆ.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಂ.ಆರ್. ರಘು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಜಿ.ಆರ್. ಹೆಗಡೆ,  ಪಕ್ಕದ ಕುಟುಂಬದವರೊಂದಿಗೆ ಸ್ವಾತಂತ್ರ್ಯ ದಿನ ಆಚರಿಸಿದ್ದು ಮಾತ್ರ ವಿಶೇಷವಾಗಿತ್ತು.
ಅವರ ದೇಶಭಕ್ತಿಗೆ ನೆರೆದ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.