ADVERTISEMENT

ಡಿ. 29ಕ್ಕೆ ಕುವೆಂಪು ಕಂಚಿನ ಪ್ರತಿವೆು ಅನಾವರಣ

ಪ್ರಕಾಶ ಕುಗ್ವೆ
Published 19 ಅಕ್ಟೋಬರ್ 2011, 10:00 IST
Last Updated 19 ಅಕ್ಟೋಬರ್ 2011, 10:00 IST

ಶಿವಮೊಗ್ಗ: ಕುವೆಂಪು ಅವರ ಆಳೆತ್ತರದ ಕಂಚಿನ ಪ್ರತಿಮೆಯೊಂದು ನಗರದಲ್ಲಿ ಇದೇ ಡಿ. 29ರಂದು ಅನಾವರಣಗೊಳ್ಳಲಿದೆ. 

  ಕುವೆಂಪು ರಂಗಮಂದಿರದ ಮುಂದೆ ಒಂಬತ್ತು ಕಾಲು ಅಡಿ ಎತ್ತರದ, ಎಂಟು ಅಡಿ ಸುತ್ತಳತೆಯ ಕುವೆಂಪು ಶಿಲ್ಪಕೃತಿ ಪ್ರತಿಷ್ಠಾಪನೆಯಾಗಲಿದೆ. ಇಷ್ಟೊಂದು ಬೃಹತ್ ಗಾತ್ರದ ಕುವೆಂಪು ಕಂಚಿನ ಪ್ರತಿಮೆ ಅವರ ತವರು ಜಿಲ್ಲೆಯಲ್ಲೇ ಪ್ರತಿಷ್ಠಾಪನೆಗೊಳ್ಳುತ್ತಿರುವುದರಿಂದ ಕನ್ನಡ ಪರ ಸಂಘಟನೆಗಳ, ಪ್ರತಿಮೆ ಪ್ರಿಯರ, ಕುವೆಂಪು ಅಭಿಮಾನಿಗಳ ಬಹುದಿನಗಳ ಬೇಡಿಕೆ ಈಡೇರಲಿದೆ.

ಕುವೆಂಪು ರಂಗಮಂದಿರ ಆರಂಭವಾದಾಗಿನಿಂದ ವಿವಿಧ ಕನ್ನಡಪರ ಸಂಘ-ಸಂಸ್ಥೆಗಳು ರಂಗಮಂದಿರದಲ್ಲಿ ಕುವೆಂಪು ಪ್ರತಿಮೆ ಪ್ರತಿಷ್ಠಾಪಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸುತ್ತಲೇ ಬಂದಿದ್ದವು. ಅದರಂತೆ ಎಂಟು ತಿಂಗಳ ಹಿಂದೆ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ನಗರಕ್ಕೆ ಬಂದಾಗ ಈ ಕುರಿತಂತೆ ಮನವಿ ಮಾಡಲಾಗಿತ್ತು.

ಯಡಿಯೂರಪ್ಪ ಕೂಡಲೇ ಪ್ರತಿಮೆ ಸ್ಥಾಪನೆಗೆ ಅಸ್ತು ಎಂದಿದ್ದರು. ಅದರಂತೆ ಈಗ ಕುವೆಂಪು ಶಿಲ್ಪ ಪೂರ್ಣಗೊಂಡಿದ್ದು, ಪ್ರತಿಷ್ಠಾಪನೆಗೆ ಸಜ್ಜುಗೊಂಡಿದೆ.

ಈ ಬೃಹತ್ ಕಂಚಿನ ಪ್ರತಿಮೆ ಕುವೆಂಪು ಅವರ 107ನೇ ಜನ್ಮ ದಿನಚಾರಣೆ ಡಿ. 29ರಂದು ಅನಾವರಣೆಗೊಳ್ಳಲಿದೆ. ಈ ಆಕರ್ಷಕ ಆಳೆತ್ತರದ ಪ್ರತಿಮೆ ರೂಪಿಸಿದವರು ಕುವೆಂಪು ಅವರ ತಾಲ್ಲೂಕಿನವರೇ ಆದ ತೀರ್ಥಹಳ್ಳಿಯ ಬಾಣಂಕಿಯ ಚಿತ್ರ ಕಲಾವಿದ ಬಿ.ಡಿ. ಜಗದೀಶ್. ಸದ್ಯ ಬೆಂಗಳೂರು ನಿವಾಸಿಯಾಗಿರುವ ಜಗದೀಶ್, ಈ ಶಿಲ್ಪ ನಿರ್ಮಾಣಕ್ಕೆ ಸತತ ಶ್ರಮ, ಶ್ರದ್ಧೆ ಹಾಕಿದ್ದಾರೆ.

780 ಕೆಜಿ ತೂಕ !
`ಸುಮಾರು 780 ಕೆ.ಜಿ. ತೂಕದ ಈ ಪ್ರತಿಮೆ ರೂಪಿಸುವಾಗ ಕುವೆಂಪು ಅವರ ಮಗಳು ತಾರಿಣಿದೇವಿ ಹಾಗೂ ಅಳಿಯ ಡಾ.ಕೆ. ಚಿದಾನಂದಗೌಡ ಅವರು ಮೂರ‌್ನಾಲ್ಕು ಬಾರಿ ನೀಡಿದ ಸಲಹೆ-ಸೂಚನೆಗಳನ್ನು ನೀಡಿದ್ದರು. ಅವುಗಳನ್ನು ಅಳವಡಿಸಿಕೊಂಡೇ ಈ ಪ್ರತಿಮೆ ರೂಪುಗೊಂಡಿದೆ~ ಎನ್ನುತ್ತಾರೆ ಬಿ.ಡಿ. ಜಗದೀಶ್.

ಎರಡು ಪ್ರತಿಮೆ ನಿರ್ಮಾಣ
ಕುವೆಂಪು ಅವರ ಇದೇ ರೀತಿಯ ಎರಡು ಪ್ರತಿಮೆಗಳನ್ನು ನಿರ್ಮಿಸಿದ್ದು, ಈಗಾಗಲೇ ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಸಂಸ್ಥೆ ಎದುರು ಒಂದು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಎದುರು ಇನ್ನೊಂದು ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಕುವೆಂಪು ಅವರ ಭಾವಚಿತ್ರದ ಇನ್ನೊಂದು ಪ್ರತಿಮೆಯನ್ನು ಬೆಂಗಳೂರಿನ ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ನಲ್ಲಿ ಇಡಲಾಗಿದೆ ಎನ್ನುತ್ತಾರೆ ಜಗದೀಶ್.

`ಸಾಹಿತಿಗಳ ಪ್ರತಿಮೆ ಮಾಡುವಾಗ; ಅದರಲ್ಲೂ ಕುವೆಂಪು ಅವರ ಪ್ರತಿಮೆ ನಿರ್ಮಿಸುವಾಗ ಎಚ್ಚರದ ಕಣ್ಣು ಇರಬೇಕಾಗುತ್ತದೆ. ಸ್ವಲ್ಪ ಆಯ ತಪ್ಪಿದ್ದರೂ ಸಮಸ್ಯೆ ಮೈಮೇಲೆ ಬರುತ್ತದೆ. ಕುವೆಂಪು ನನ್ನೂರಿನ ಸಾಹಿತಿ; ಅವರ ಪ್ರತಿಮೆ ನನ್ನೂರಿನಲ್ಲೇ ಪ್ರತಿಷ್ಠಾಪಿಸುತ್ತಿರುವುದರಿಂದ ಹೆಚ್ಚಿನ ನಿಗಾ ವಹಿಸಿಯೇ ರೂಪಿಸಲಾಗಿದೆ~ ಎಂಬುದು ಜಗದೀಶ್ ಅವರ ವಿಶ್ವಾಸ.

ಗಣ್ಯರ ಮೆಚ್ಚುಗೆ
ಜಗದೀಶ್ ನಿರ್ಮಿಸಿದ ಈ ಕುವೆಂಪು ಶಿಲ್ಪಕೃತಿಯನ್ನು ಈಗಾಗಲೇ ತಾರಿಣಿ, ಚಿದಾನಂದಗೌಡ, ದೇಜಗೌ, ಡಾ.ಹಂಪ ನಾಗರಾಜಯ್ಯ, ಜಿ. ನಾರಾಯಣ, ಕಡಿದಾಳು ಶಾಮಣ್ಣ, ಸಂಸತ್ ಸದಸ್ಯ ಡಿ.ಬಿ. ಚಂದ್ರೇಗೌಡ, ಡಾ.ನಲ್ಲೂರು ಪ್ರಸಾದ್, ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಮತ್ತಿತರರು ನೋಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೂ 25 ಲಕ್ಷದ ಯೋಜನೆ
`ಇದು ಒಟ್ಟು ರೂ 25 ಲಕ್ಷ ಯೋಜನೆ. ಈಗಾಗಲೇ ಸರ್ಕಾರ ್ಙ 20ಲಕ್ಷ ಬಿಡುಗಡೆ ಮಾಡಿದೆ. ರಂಗಮಂದಿರದ ಎದುರಿನ ಕಾರಂಜಿ ಇರುವ ಸ್ಥಳದಲ್ಲೇ ಸುಮಾರು ಐದು ಅಡಿ ಎತ್ತರದ ಬೆಡ್ ಮಾಡಿ, ಅದರ ಮೇಲೆ ಪ್ರತಿಮೆ ಪ್ರತಿಷ್ಠಾಪನೆ ಮಾಡಲು ಸಿದ್ಧತೆಗಳು ನಡೆದಿವೆ~ ಎನ್ನುತ್ತಾರೆ ಹರಿಕುಮಾರ್.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT