ADVERTISEMENT

ತರಬೇತುದಾರರು ಇಲ್ಲದೇ ಸೊರಗಿದ ಕ್ರೀಡಾ ಪ್ರತಿಭೆಗಳು

ಮಾರ್ಗದರ್ಶಕರಿಲ್ಲದೇ ಶಿವಮೊಗ್ಗ ಕ್ರೀಡಾ ಬೆಳವಣಿಗೆಗೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 12:08 IST
Last Updated 9 ಏಪ್ರಿಲ್ 2018, 12:08 IST

ಶಿವಮೊಗ್ಗ : ‘ಹಲ್ಲಿದ್ದರೆ ಕಡಲೆ ಇಲ್ಲ, ಕಡಲೆ ಇದ್ದರೆ ಹಲ್ಲಿಲ್ಲ’ ಎನ್ನುವ ಗಾದೆ ಮಾತು ಶಿವಮೊಗ್ಗದ ಕ್ರೀಡಾ ಕ್ಷೇತ್ರಕ್ಕೆ ಅಕ್ಷರಶಃ ಅನ್ವಯಿಸುತ್ತದೆ.ಹೌದು, ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುಂಚೂಣಿಯಲ್ಲಿರುವ ಶಿವಮೊಗ್ಗವು ಕ್ರೀಡಾ ಕ್ಷೇತ್ರದಲ್ಲೂ ಪ್ರಭುತ್ವ ಸಾಧಿಸಿದೆ. ಇಲ್ಲಿ ಅಭ್ಯಾಸ ನಡೆಸಿದ ಅನೇಕರು ಇಂದಿಗೂ ಜಿಲ್ಲೆಯ ಕೀರ್ತಿ ಪತಾಕೆಯನ್ನು ವಿಶ್ವದೆಲ್ಲೆಡೆ ಹಾರಿಸುತ್ತಿದ್ದಾರೆ. ಇಂತಹ ಜಿಲ್ಲೆಯಲ್ಲಿ ಇತ್ತೀಚೆಗೆ ಸೂಕ್ತ ತರಬೇತುದಾರರಿಲ್ಲದೇ ಕ್ರೀಡಾಪಟುಗಳು ಕ್ರೀಡೆಗಳಿಂದ ವಿಮುಖರಾಗುತ್ತಿದ್ದಾರೆ. ಇದು ಇಲ್ಲಿನ ಕ್ರೀಡಾಕ್ಷೇತ್ರಕ್ಕೆ ದೊಡ್ಡಮಟ್ಟದ ಪೆಟ್ಟು ನೀಡಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಕ್ರೀಡಾ ವಸತಿ ಸಮುಚ್ಚಯದಲ್ಲಿ ವಾಲಿಬಾಲ್, ಬ್ಯಾಸ್ಕೆಟ್‌ಬಾಲ್, ಪುಟ್‌ಬಾಲ್‌, ಅಥ್ಲೆಟಿಕ್ಸ್‌, ಹಾಕಿ, ಕೊಕ್ಕೊ, ಕಬಡ್ಡಿ, ಹ್ಯಾಂಡ್‌ಬಾಲ್‌, ಈಜುಕೊಳ, ಬ್ಯಾಡ್ಮಿಂಟನ್‌ ಸೇರಿದಂತೆ 20ಕ್ಕೂ ಹೆಚ್ಚೂ ಸುಸಜ್ಜಿತ ಅಂಕಣಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಮೂಲಸೌರ್ಕರ್ಯದ ಕೊರತೆಯನ್ನೂ ನೀಗಿಸಲಾಗಿದೆ. ಆದರೇ ಕಾಯಂ ತರಬೇತುದಾರರು ಇಲ್ಲದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಕ್ರೀಡಾಪಟುಗಳು ಪ್ರಗತಿ ಸಾಧಿಸುತ್ತಿಲ್ಲ.

ಇನ್ನು ಕ್ರೀಡಾಪಟುಗಳ ಪ್ರತಿಭೆಗೆ ಸಾಣೆ ಹಿಡಿಯಲು ನುರಿತ ಹಾಗೂ ಕಾಯಂ ತರಬೇತುದಾರರೂ ಇಲ್ಲದ ಕಾರಣ ಇಲ್ಲಿನ ಸುಸಜ್ಜಿತ ಕ್ರೀಡಾಂಗಣಗಳು ಇದ್ದು ಇಲ್ಲದಂತಾಗಿವೆ. ಸದ್ಯದ ಮಟ್ಟಿಗೆ ಹಾಕಿಗೆ ಮಾತ್ರ ಕಾಯಂ ತರಬೇತುದಾರರು ಇದ್ದಾರೆ. ಉಳಿದಂತೆ ಟೆನಿಸ್, ಈಜು, ಷಟಲ್‌ ಬ್ಯಾಡ್ಮಿಂಟನ್‌ಗೆ ತಾತ್ಕಾಲಿಕ ತರಬೇತುದಾರರು ಇದ್ದಾರೆ. ಆದರೆ ಎಲ್ಲಾ ಕ್ರೀಡೆಗಳಿಗೆ ಅಲ್ಲದಿದ್ದರೂ ಪ್ರಮುಖ ಕ್ರೀಡೆಗಳಿಗಾದರೂ ಕಾಯಂ ತರಬೇತುದಾರರನ್ನು ನೇಮಕ ಮಾಡಿದರೆ ಇಲ್ಲಿನ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹಿರಿಯ ಕ್ರೀಡಾಪಟುಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ADVERTISEMENT

ವಸತಿ ಸೌಲಭ್ಯದ ಕೊರತೆ : ಶಿವಮೊಗ್ಗದ ನೆಹರೂ ಕ್ರೀಡಾಂಗಣ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ನಡೆಸಲು ಯೋಗ್ಯವಾಗಿದೆ. ಆದರೆ ಇಲ್ಲಿಗೆ ಬರುವ ಕ್ರೀಡಾಪಟುಗಳು ಮತ್ತು ತರಬೇತುದಾರರು ತಂಗಲು ಸೂಕ್ತ ವಸತಿ ಸೌಲಭ್ಯವಿಲ್ಲ. ಇದರಿಂದ ಆಯೋಜಕರು ಕ್ರೀಡಾಕೂಟ ಆಯೋಜಿಸಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ಕೆಲವರು ದೂರದೂರಿನಿಂದ ಬರುವ ಕ್ರೀಡಾಪಟುಗಳಿಗೆ ಕ್ರೀಡಾ ಹಾಸ್ಟೆಲ್‌, ಒಳಾಂಗಣ ಕ್ರೀಡಾಂಗಣದಲ್ಲಿ ತಂಗಲೂ ವ್ಯವಸ್ಥೆ ಕಲ್ಪಿಸಿದರೂ ಅಲ್ಲಿನ ಅವ್ಯವಸ್ಥೆಯ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ.

ತರಬೇತುದಾರರ ಕೊರತೆ ಕುರಿತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್‌ ಅವರು ಪ್ರತಿಕ್ರಿಯಿಸಿ, ‘ತಾವು ಅಧಿಕಾರ ವಹಿಸಿಕೊಂಡ ಮೇಲೆ ತರಬೇತುದಾರರ ನೇಮಕಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಬೇಡಿಕೆ ಇಡಲಾಗುತ್ತಿದೆ. ಆದರೆ ಇಲಾಖೆ ಕಾಯಂ ತರಬೇತುದಾರರನ್ನು ನೀಡುತ್ತಿಲ್ಲ. ಇದೀಗ ನಿರಂತರ ಬೇಡಿಕೆ ಪರಿಗಣಿಸಿ ಅಥ್ಲೆಟಿಕ್ಸ್‌ಗೆ ಕಾಯಂ ತರಬೇತುದಾರರನ್ನು ನೇಮಕ ಮಾಡಿದೆ. ಅಲ್ಲದೇ ಈಜು ಸೇರಿದಂತೆ ಕೆಲ ಕ್ರೀಡೆಗಳಿಗೆ ಇಲಾಖೆಯೇ ತಾತ್ಕಾಲಿಕವಾಗಿ ಖಾಸಗಿ ತರಬೇತುದಾರರನ್ನು ನೀಡಿ ವೇತನ ನೀಡುತ್ತಿದೆ’ ಎಂದರು.

ಈ ಬಗ್ಗೆ ಜಿಲ್ಲಾ ಒಲಂಪಿಕ್‌ ಕಾರ್ಯದರ್ಶಿ ಕೆ.ಎಸ್‌.ಶಶಿ ಪ್ರತಿಕ್ರಿಯಿಸಿ, ‘ಹಿಂದೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿದ್ದರು. ಈಗ ಅಂತಹ ಕ್ರೀಡಾಪಟುಗಳು ಹೊರಹೊಮ್ಮುತ್ತಿಲ್ಲ. ಕಾಯಂ ತರಬೇತುದಾರರು ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣ. ಶೀಘ್ರ ಕ್ರೀಡಾ ಇಲಾಖೆ ಸೂಕ್ತ ತರಬೇತುದಾರರು ಮತ್ತು ಸಿಬ್ಬಂದಿ ನೇಮಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.