ADVERTISEMENT

ತಾಲ್ಲೂಕಿನ ಗ್ರಾ.ಪಂ. ನೌಕರರ ಒಕ್ಕೂಟದಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 8:25 IST
Last Updated 21 ಜನವರಿ 2011, 8:25 IST

ಸೊರಬ: ಕನಿಷ್ಠ ವೇತನ, ನೇಮಕಾತಿ ಕಾಯಂಗೊಳಿಸವುದು ಮೊದಲಾದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಗ್ರಾ.ಪಂ. ನೌಕರರ ಒಕ್ಕೂಟದ ವತಿಯಿಂದ ಗುರುವಾರ ಧರಣಿ ಆರಂಭಗೊಂಡಿತು.

ನೌಕರರಿಗೆ ಭವಿಷ್ಯ ನಿಧಿ ಜಾರಿ ಆಗಿದ್ದರೂ, ಸೌಲಭ್ಯ ನೀಡುತ್ತಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು. ವಿವಿಧ ಗ್ರಾ.ಪಂ.ಗಳಲ್ಲಿ ಜವಾನ, ನೀರುಗಂಟಿ, ಬಿಲ್ ಕಲೆಕ್ಟರ್ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಕಾಯಂಗೊಳಿಸಬೇಕು. ಕನಿಷ್ಠ ವೇತನವನ್ನು 6 ಸಾವಿರಕ್ಕೆ ಹೆಚ್ಚಿಸಬೇಕು. ಸೇವಾ ಪುಸ್ತಕ ದಾಖಲಿಸಬೇಕು.

ಸರ್ಕಾರವೇ ನೇರವಾಗಿ ವೇತನ ನೀಡಬೇಕು. ಕಾರ್ಯದರ್ಶಿ ಗ್ರೇಡ್-2 ಹುದ್ದೆಗೆ ಹಾಲಿ ನೌಕರರನ್ನೇ ನೇಮಿಸಬೇಕು. ನಿವೃತ್ತ ನೌಕರರಿಗೆ 4 ಲಕ್ಷ ಜೀವನ ನಿರ್ವಹಣೆಗೆ ಹಾಗೂ ಮಾಸಿಕ ಅರ್ಧ ವೇತನ ಜಾರಿಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮಂಡಿಸಿದರು.

ಅಡೆ-ತಡೆ ಇಲ್ಲದೇ ನಡೆಯುತ್ತಿರುವ ಹೊಸ ನೇಮಕಾತಿಗಳನ್ನು ಸ್ಥಗಿತಗೊಳಿಸಿ, ಹಾಲಿ ನೌಕರರ ಕಾಯಂಗೆ ಕ್ರಮ ಕೈಗೊಳ್ಳಬೇಕು ಎಂದುಆಗ್ರಹಿಸಿದರು.
ಬೇಡಿಕೆ ಕುರಿತು ಸಂಬಂಧಪಟ್ಟ ಸಚಿವರು, ಅಧಿಕಾರಿಗಳಿಗೆ ಪದೇ ಪದೇ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿ, ತಮ್ಮೆಲ್ಲಾ ಬೇಡಿಕೆ ಈಡೇರುವವರೆಗೆ ಧರಣಿ ಹಿಂತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದರು. 

ಜಿ.ಪಂ. ಯೋಜನಾ ನಿರ್ದೇಶಕ ಮುನಿರಾಜಪ್ಪ ಮನವಿ  ಸ್ವೀಕರಿಸಿದರು. ಜಿ.ಪಂ. ವ್ಯಾಪ್ತಿಯ ಬೇಡಿಕೆಗಳಿಗೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು, ರಾಜ್ಯ ಮಟ್ಟದ ಬೇಡಿಕೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಗೌರವಾಧ್ಯಕ್ಷೆ ಶೇಖರಮ್ಮ, ಜಿಲ್ಲಾ ಸಂಘದ ಶಿವಶಂಕರಪ್ಪ, ಮೇಘರಾಜ, ತಾಲ್ಲೂಕು ಅಧ್ಯಕ್ಷ ಸುಬ್ರಾಯ ಶೆಟ್ಟಿ, ಕಾರ್ಯದರ್ಶಿ ಮಂಜಪ್ಪ, ಹುಚ್ಚರಾಯಪ್ಪ, ತಾಲ್ಲೂಕು ಸಂಚಾಲಕ ನಾಗರಾಜ, ಪದಾಧಿಕಾರಿಗಳು,  ನೌಕರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.