ಕಾರ್ಗಲ್: ತಾಳಗುಪ್ಪ- ಬೆಂಗಳೂರು ಮಧ್ಯದ ರೈಲು ಸೇವೆ ಇನ್ನೂ ಮರೀಚಿಕೆ ಆಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಗಿದ್ದ ತಾಳಗುಪ್ಪ, ಶಿವಮೊಗ್ಗ ರೈಲು ಸಂಚಾರ ಮೀಟರ್‌ಗೇಜ್ ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಾ 2005ನೇ ಇಸವಿಯವರೆಗೂ ಸಾಗಿ ಬಂದಿತ್ತು. ಈ ಮಧ್ಯೆ ಸಂಚಾರ ಮಾರ್ಗವನ್ನು ಬ್ರಾಡ್‌ಗೇಜ್ ಆಗಿ ಪರಿವರ್ತಿಸುವಂತೆ ಅನೇಕ ಜನಪರ ಹೋರಾಟಗಳು ನಾಡಿನ ಪ್ರಖ್ಯಾತ ಸಾಹಿತಿ ನಾ. ಡಿಸೋಜ ನೇತೃತ್ವದಲ್ಲಿ ನಡೆದವು.
ಹೋರಾಟಗಳ ಪರಿಣಾಮ ಮತ್ತು ಸರ್ಕಾರಗಳ ಸಂಕಲ್ಪವೇನೋ ಎಂಬಂತೆ 2011ರಲ್ಲಿ ಶಿವಮೊಗ್ಗ ತಾಳುಗುಪ್ಪ ರೈಲ್ವೆ ಮಾರ್ಗ ಬ್ರಾಡ್‌ಗೇಜ್ ಆಗಿ ಪರಿವರ್ತನೆಗೊಂಡು ಆರಂಭದಲ್ಲಿ ಮೈಸೂರು ತಾಳಗುಪ್ಪ ರೈಲು ಸಂಚಾರ ಆರಂಭವಾಯಿತು. ಆದರೆ, ಈ ಭಾಗದ ಜನರ ಬಹುನಿರೀಕ್ಷಿತ ತಾಳುಗುಪ್ಪ, ಬೆಂಗಳೂರು ಸಂಚಾರ ಮಾತ್ರ ಮರೀಚಿಕೆಯಾಗಿಯೇ ಉಳಿದು ಹೋಗಿದೆ!
3-4 ತಿಂಗಳುಗಳಿಂದ ಇನ್ನೇನು ಬೆಂಗಳೂರು, ತಾಳಗುಪ್ಪ ರೈಲ್ವೆ ಸಂಚಾರ ನಾಳೆಯಿಂದ ಆರಂಭ, ಮುಂದಿನ ವಾರದಿಂದ ಆರಂಭ, 1ನೇ ತಾರೀಕಿನಿಂದ ಆರಂಭ ಹೀಗೆ ಅನೇಕ ಊಹಾಪೋಹಗಳು ಗಾಳಿ ಸುದ್ದಿಯಾಗಿ ಹರಡಿಕೊಂಡಿತ್ತು.
ತಾಳಗುಪ್ಪದ ರೈಲುನಿಲ್ದಾಣದ ವ್ಯವಸ್ಥಾಪಕರಲ್ಲಿ ಈ ಬಗ್ಗೆ ವಿಚಾರಿಸಿದರೆ ತಮಗೇ ಯಾವುದೇ ಆದೇಶಗಳು ಅಥವಾ ಮುನ್ಸೂಚನೆಗಳು ಈವರೆಗೂ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಈವರೆಗೂ ಈ ಭಾಗದ ನಾಗರಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅವಶ್ಯಕತೆಯಿರುವ ಬೆಂಗಳೂರು ಸಂಪರ್ಕದ ಸಂಚಾರ ಮಾರ್ಗ ಆರಂಭವಾಗದೇ ಭಾರೀ ನಿರಾಸೆಯನ್ನು ರೈಲು ಇಲಾಖೆ ಉಂಟು ಮಾಡಿರುವುದು ಸತ್ಯವಾದ ವಿಚಾರ ಆಗಿದೆ ಎಂದು ಈ ಭಾಗದ ಹೋರಾಟಗಾರರು ತಿಳಿಸಿದ್ದಾರೆ.
ಜೋಗ ಜಲಪಾತ ಧುಮ್ಮಿಕ್ಕುತ್ತಿದ್ದು, ನಾಡಿನ ಎಲ್ಲೆಡೆಯಿಂದ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಇವರಲ್ಲಿ ಮುಖ್ಯವಾಗಿ ಶಿವಮೊಗ್ಗ, ತುಮಕೂರು, ಬೆಂಗಳೂರು ಸುತ್ತಮುತ್ತಲಿನ ಭಾಗದವರೇ ಹೆಚ್ಚು.
ಪ್ರವಾಸಿಗರ ಹಿತದೃಷ್ಟಿಯಿಂದಲಾದರೂ ಬೆಂಗಳೂರು ತಾಳಗುಪ್ಪ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಕೂಡಲೇ ಆರಂಭಿಸಲಿ ಎಂಬುದು ಈ ಭಾಗದ ಜನರ ಆಶಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.