ADVERTISEMENT

ತೀರ್ಥಹಳ್ಳಿಯಲ್ಲಿ ಮಳೆ ಅಬ್ಬರ: ಚಂಗಾರಿನಲ್ಲಿ ದೋಣಿ ಕಣ್ಮರೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 10:06 IST
Last Updated 22 ಜುಲೈ 2013, 10:06 IST

ತೀರ್ಥಹಳ್ಳಿ: ಈ ಬಾರಿ ಸುರಿಯುತ್ತಿರುವ ಮುಂಗಾರು ಮಳೆ ತನ್ನ ಆರ್ಭಟವನ್ನು ನಿಲ್ಲಿಸಿಲ್ಲ. ಜೂನ್ 5 ರಿಂದ ಆರಂಭವಾದ ಮಳೆ ಬಿಡುವು ನೀಡದೇ ಸುರಿಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮಳೆಗಾಲ ಆರಂಭವಾಗಿದ್ದರೂ ಒಂದೆರಡು ವಾರದ ಮಟ್ಟಿಗಾದರೂ ಬಿಡುವು ನೀಡುತ್ತಿತ್ತು. ಇದರಿಂದ ಮಳೆ ಬಿಡುವಿನ ವೇಳೆಯಲ್ಲಿ ರೈತರು ತಮ್ಮ ಮಳೆಗಾಲದ ಹಂಗಾಮಿನ ಕೆಲಸಗಳನ್ನು ಮಾಡಿಕೊಳ್ಳಲು ಅವಕಾಶವಾಗುತ್ತಿತ್ತು. ಆದರೆ ಈಗ ಸುರಿಯುತ್ತಿರುವ ಮಳೆ ಗತಕಾಲದ ನೆನಪಿಗೆ ಮಲೆನಾಡಿಗರನ್ನು ಕೊಂಡೊಯ್ಯುವಂತಾಗಿದೆ.

ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಶಿವಮೊಗ್ಗ, ತೀರ್ಥಹಳ್ಳಿ ರಸ್ತೆಯಲ್ಲಿನ ಮಂಡಗದ್ದೆ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಸಂಚಾರ ಬಂದ್ ಆಗಿದೆ. ಪರ‌್ಯಾಯ ಮಾರ್ಗವಾಗಿ ಉಳಿದಿದ್ದ ಆಯನೂರು, ಹಣಗೆರೆಕಟ್ಟೆ, ತೀರ್ಥಹಳ್ಳಿ ಮಾರ್ಗದ ಹಣಗೆರೆಕಟ್ಟೆ ಬಳಿಯಲ್ಲಿ ಮರವೊಂದು ರಸ್ತೆಗೆ ಉರುಳಿದ್ದರಿಂದಾಗಿ ಕೆಲ ಗಂಟೆಗಳ ಕಾಲ ಸಂಚಾರ ಸ್ಥಬ್ಧಗೊಳ್ಳುವಂತಾಗಿತ್ತು.

ಗುಡ್ಡೇಕೇರಿ, ಆಗುಂಬೆ ಮಾರ್ಗದ ನಾಬಳ ಸೇತುವೆ ನೀರಿನಲ್ಲಿ ಮುಳುಗಿದ್ದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಲಕ್ಕುಂದ, ಗೋವಿನಹಳ್ಳಿ ಬಳಿ ಪ್ರವಾಹದ ನೀರು ರಸ್ತೆ ಪಕ್ಕದಲ್ಲಿ ಬಂದು ನಿಂತಿದೆ. ಆಗುಂಬೆಯಲ್ಲಿ ಶನಿವಾರ 166.4 ಮಿ.ಮೀ. ಹಾಗೂ ತೀರ್ಥಹಳ್ಳಿಯಲ್ಲಿ 149.8 ಮಿ.ಮೀ. ಮಳೆ ಬಿದ್ದಿದೆ. ತೀರ್ಥಹಳ್ಳಿಯಲ್ಲಿ ಪುರಾಣ ಪ್ರಸಿದ್ದ ರಾಮ ಮಂಟಪ ಪ್ರವಾಹದಿಂದಾಗಿ ಮುಳುಗುವ ಹಂತದಲ್ಲಿದೆ.

  ಚಂಗಾರು ಗ್ರಾಮದಲ್ಲಿ ದೋಣಿ ಕಣ್ಮರೆ: ಈ ನಡುವೆ ಮಾಲತಿ ನದಿಗೆ ಚಂಗಾರಿನಲ್ಲಿ ಬಳಸುತ್ತಿದ್ದ ದೋಣಿ ಕಣ್ಮರೆಯಾಗಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾದರು. ತಕ್ಷಣ ಆಗುಂಬೆ ಪೊಲೀಸ್ ಠಾಣೆ ಹಾಗೂ ತೀರ್ಥಹಳ್ಳಿಯ ತಾಲ್ಲೂಕು ಕಚೇರಿಗೆ ಸುದ್ದಿ ಮುಟ್ಟಸಿದರು. ಸ್ಥಳಕ್ಕೆ ತಹಸೀಲ್ದಾರ್ ಗಣೇಶಮೂರ್ತಿ ಅಗ್ನಿಶಾಮಕ ಸಿಬ್ಬಂದಿಗಳೊಂದಿಗೆ  ಕಲ್ಮನೆ ಸೇತುವೆ  ಬಳಿ ದೋಣಿ ಕಾಣಬಹುದೆಂದು ಕಾದರು.

ಆಗುಂಬೆ ಠಾಣೆ ಪಿಎಸ್‌ಐ ಕೃಷ್ಣಾ ನಾಯಕ್ ಆಂದಿನಿ ಬಳಿ ಮಾಲತಿ ನದಿಯಲ್ಲಿ ದೋಣಿಗಾಗಿ ಹುಡುಕಾಟ ನಡೆಸಿದರು. ಅಷ್ಟುಹೊತ್ತಿಗೆ ಒಬ್ಬ ವ್ಯಕ್ತಿ ದೋಣಿಯಲ್ಲಿ ಹೋಗುತ್ತಿರುವ ಮಾಹಿತಿ ಲಭ್ಯವಾಯಿತು. ದೋಣಿಯಲ್ಲಿ ಇಬ್ಬರು ಇದ್ದರು ಎಂಬ ಸುದ್ದಿ ಹರಡಿದ್ದು, ಸಂಜೆ ವೇಳೆಯವರೆವಿಗೂ ಇವರ ಪತ್ತೆಯಾಗಲಿಲ್ಲ. ದೋಣಿ ಹೆಗ್ಗೋಡಿನ ಸಮೀಪ ಸಸಿಗೊಳ್ಳಿಯಲ್ಲಿ ಇದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅಲ್ಲಿಗೆ ತೆರಳುತ್ತಿರುವುದಾಗಿ ತಹಶೀಲ್ದಾರ್ ಗಣೇಶ ಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.