ADVERTISEMENT

ತೀರ್ಥಹಳ್ಳಿ: ಭೂಮಿ ಹುಣ್ಣಿಮೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 6:15 IST
Last Updated 12 ಅಕ್ಟೋಬರ್ 2011, 6:15 IST

ತೀರ್ಥಹಳ್ಳಿ: ಅಚ್ಚಂಬಲಿ...
             ಹಾಲಂಬಲಿ...
        ಬೇಲಿಮೇಲಿನ 
       ದಾರಹೀರೇಕಾಯಿ...
      ಭೂಮಿತಾಯಿ ಬಂದು 
     ಉಂಡೋಗ್ಲಿ....
     ಹೂಯ್ಲಿಗೋ.....
- ಎಂಬ ಸ್ದ್ದದು ಮಲೆನಾಡಿನ ತುಂಬ ಕೇಳಿ ಬಂತು.

ಮಣ್ಣಿನ ಹಬ್ಬ ಭೂಮಿ ಹುಣ್ಣಿಯನ್ನು ತಾಲ್ಲೂಕಿನಾದ್ಯಂತ ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು.
ರೈತರು ಬೆಳೆದ ಬೆಳೆ ಕಾಳುಕಟ್ಟಿ ಬೆಳೆದು ನಿಂತ ಪೈರಿಗೆ ಪೂಜೆ ಸಲ್ಲಿಸುವ ಮೂಲಕ ರೈತರು ಪುನೀತರಾದರು.  ಸುಗ್ಗಿಗೂ ಮುನ್ನ ಬರುವ ರೈತರ ಪಾಲಿನ ಮಹತ್ವದ ಭೂಮಿಹುಣ್ಣಿಮೆ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಕಾಳುಕಟ್ಟಿನಿಂತ ಭೂಮಿತಾಯಿ ಗರ್ಭವತಿಯಾಗಿದ್ದಾಳೆ ಎಂದು ಭಾವಿಸಲಾಗುತ್ತದೆ. ಆಕೆಯ ಬಯಕೆಯನ್ನು ಈಡೇರಿಸಲು ವಿವಿಧ ಬಗೆಯ ಅಡುಗೆ ಸಿದ್ಧಪಡಿಸಿ ಗದ್ದೆ ತೋಟಗಳಲ್ಲಿ ಹಿಂದಿನ ದಿನವೇ ಸಿದ್ಧಪಡಿಸಿದ ಪೂಜಾ ಸ್ಥಳದಲ್ಲಿ ಎಡೆಯಿಟ್ಟು ಪೂಜಿಸಿ, ಬೆರಕೆ ಸೊಪ್ಪನ್ನು ಭೂಮಿಗೆ ಎರಚಿದರು.

ನೂರಾ ಒಂದು ಬಗೆಯ ಸೊಪ್ಪನ್ನು ಶೇಖರಿಸಿ, ಅನ್ನದ ಜತೆ ಬೇಯಿಸಿ ಮಿಶ್ರಮಾಡಿ ಬೆರಕೆ ಸೊಪ್ಪನ್ನು ಸಿದ್ಧಪಡಿಸಲಾಗುತ್ತದೆ. ಹೀಗೆ ಸೊಪ್ಪನ್ನು ಸಿದ್ಧಪಡಿಸಿಕೊಳ್ಳುವಾಗ ಗರ್ಭವತಿ ಭೂಮಿತಾಯಿಗೆ ನಂಜುಕಾರುವ ಪದಾರ್ಥಗಳನ್ನು ಸೇರಿಸಿಕೊಳ್ಳದಂತೆ ಎಚ್ಚರ ವಹಿಸಲಾಗುತ್ತದೆ.

ಗೃಹಿಣಿಯರು ರಾತ್ರಿ ಪೂರ್ತಿ ಎಚ್ಚರಿದ್ದು, ವಿವಿಧ ಬಗೆಯ ಅಡುಗೆ ತಯಾರಿಸುತ್ತಾರೆ. ಅಪ್ಪಿತಪ್ಪಿ ನಿದ್ದೆಗೆ ಜಾರಿದರೆ ಕಾಳು ಬಂಜೆಯಾಗುತ್ತವೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಎಚ್ಚರಿರುತ್ತಾರೆ. ಮನೆಯ ಹಿರಿಯರು ಈ ಹೊತ್ತಲ್ಲಿ ರಾಮಾಯಣ, ಮಹಾಭಾರತ ಕೃತಿಗಳನ್ನು ಓದುತ್ತಾ ಕಾಲ ಕಳೆಯುತ್ತಾರೆ. ಮುಂಜಾನೆ ಚುಮುಚುಮು ಮಂದ ಬೆಳಕಲ್ಲಿ ಅಲಂಕಾರಗೊಳಿಸಿದ ಬುಟ್ಟಿಗೆ ಪೂಜಾ ಸಾಮಗ್ರಿಗಳನ್ನು ತುಂಬಿಕೊಂಡು ಜಮೀನಿಗೆ ಹೋಗಿ ಪೂಜೆ ಸಲ್ಲಿಸಿ ನಂತರ ಎಲ್ಲರೂ ಒಟ್ಟಿಗೆ ಸೇರಿ ಊಟಮಾಡಿ ಭೂಮಿಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಸೊರಬದಲ್ಲೂ ಸಂಭ್ರಮ

ಸೊರಬ: ಮಾತೆಗೆ ಕೃತಜ್ಞತೆ ಸಲ್ಲಿಸುವ ಹಿನ್ನೆಲೆಯ ಭೂಮಿಹುಣ್ಣಿಮೆ/ಸೀಗೆ ಹುಣ್ಣಿಮೆ ಹಬ್ಬವನ್ನು ತಾಲ್ಲೂಕಿನಾದ್ಯಂತ ಮಂಗಳವಾರ ಶ್ರದ್ಧೆ, ಭಕ್ತಿ, ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಇನ್ನಷ್ಟು ಮಳೆಯ ನಿರೀಕ್ಷೆಯ ನಡುವೆಯೂ ಭೂತಾಯಿ ಹಸಿರು ಹೊದ್ದಿದ್ದು, ಪ್ರಕೃತಿ ನೀಡಿದ್ದನ್ನೇ ಸಮಾಧಾನ ಚಿತ್ತದಿಂದ ಸ್ವೀಕರಿಸುವಂತೆ ರೈತರು ತಮ್ಮ ಬದುಕಿನ ಸೆಲೆಯಾದ ಆಕೆಯ ಬಯಕೆ ತೀರಿಸುವ ಪುಣ್ಯದ ಕಾರ್ಯದಲ್ಲಿ ತಲ್ಲೆನರಾಗಿದ್ದರು.

ಕೃಷಿ ಪ್ರಧಾನವಾದ ನಮ್ಮ ದೇಶದ ಒಂದು ಪರಂಪರೆಗೆ ಹಬ್ಬ ನಿದರ್ಶನ ಆಗಿದೆ.
ಭೂಮಿ ಬೆಳೆಗಳಿಂದ ಮೈದುಂಬಿ ತುಳುಕುವ ಕಾಲ ಇದಾಗಿದ್ದು, ಭೂಮಿಯನ್ನು ನಮ್ಮ ತಾಯಿಯಂತೆ ಭಾವಿಸುವ ಅನ್ನದಾತರು, ಗರ್ಭಿಣಿ ಸ್ತ್ರೀಗೆ ದಿನ ತುಂಬುತ್ತಿದ್ದಂತೆ ಸೀಮಂತ ಮಾಡುವ ಕಾರ್ಯದ ಮೂಲಕ ಸಂಭ್ರಮ ಹಂಚಿಕೊಳ್ಳುವ ರೀತಿಯಲ್ಲಿ ಅನಾದಿ ಕಾಲದಿಂದ ಆಚರಿಸುತ್ತಾ ಬರುತ್ತಿರುವ ಭೂಮಿಗೆ ಬಯಕೆ ತೀರಿಸುವ ವಿಧಿಯಲ್ಲಿ ಪಾಲ್ಗೊಂಡಿದ್ದರು.

ನಮ್ಮ ಜನಪದ ಮಹಿಳೆಯ ಕಲಾವಂತಿಕೆಯ ಕುರುವಾಗಿ ಹಸೆ ಬುಟ್ಟಿಯಲ್ಲಿ ಬಗೆ ಬಗೆಯ ತರಕಾರಿ ಬಳಸಿ ಮಾಡಿದ ಚರಗವನ್ನು ಹೊತ್ತು ಭೂ ತಾಯಿಗೆ ಸಮರ್ಪಿಸಿದರು.

ಬೆಳೆಗಳಿಗೆ ವಸ್ತ್ರ ತೊಡಿಸಿ, ಪೂಜಿಸಿ, `ಹಚ್ಚಂಬ್ಲಿ, ಹರಿವೆ ಸೊಪ್ಪು, ಹಿತ್ಲಲ್ಲಿರೋ ಹೀರೇಕಾಯಿ, ಹುಣಿಸೆಮರದ ಹುಣಿಸೇಕಾಯಿ, ಎದ್ದುಣ್ಣೆ, ಕದ್ದುಣ್ಣೆ ಭೂಮ್ತಾಯವ್ವ, ಹೊ. ಹೊ. ಹೋ~ ಎಂದು ಕೂಗುತ್ತಾ, ಭೂಮಿ ತಾಯಿಗೆ ಚರಗದೊಂದಿಗೆ ಕಡುಬನ್ನೂ ನೀಡಿದರು. ಕಾಗೆ, ಇಲಿಯಂತಹ ರೈತೋಪಕಾರಿ ಜೀವಿಗಳಿಗೆ ಸಹ ಎಡೆ ಅರ್ಪಣೆಯಾಯಿತು.

ಜತೆಗೆ ಕುಟುಂಬದವರೆಲ್ಲಾ ಸೇರಿ ಒಂದೆಡೆ ಭೋಜನ ಸವಿದರು. ಮಲೆನಾಡಿನ ಕಸಬಾ, ಉಳವಿ, ಚಂದ್ರಗುತ್ತಿ ಭಾಗಗಳಲ್ಲಿ `ಭೂಮಣ್ಣಿ ಹಬ್ಬ~ ಎಂದು ಕರೆಯುವುದು ರೂಢಿ ಯಲ್ಲಿದ್ದು, ಅರೆ ಮಲೆನಾಡಿನ ಆನವಟ್ಟಿ, ಜಡೆ. ಕುಪ್ಪಗಡ್ಡೆ ಹೋಬಳಿಯ ಗ್ರಾಮಗಳಲ್ಲಿ `ಸೀಗೆ ಹುಣ್ಣಿಮೆ~ ಎಂದು ಕರೆಯಲಾಗುತ್ತದೆ. ಸಿಹಿ, ಖಾರದ ಕಡುಬಿನೊಂದಿಗೆ ರೊಟ್ಟಿ, ಬುತ್ತಿಗಳ ಸಮಾರಾಧನೆ ನಡೆಯುತ್ತದೆ.

ಆಪ್ತೇಷ್ಟರು ಕೂಡಿ ಸಾಮೂಹಿಕ ಭೋಜನ ಮಾಡಿ ಸೌಹಾರ್ದತೆ ಮೆರೆಯುವುದು ಈ ಹಬ್ಬದ ವಿಶೇಷತೆಗಳಲ್ಲಿ ಒಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.