ADVERTISEMENT

ತ್ರಿವೇಣಿ ಸಂಗಮ;ಬಿಜೆಪಿಗೆ 20 ಸೀಟು!

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 13:21 IST
Last Updated 18 ಜೂನ್ 2018, 13:21 IST

ಶಿವಮೊಗ್ಗ: ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳು, ರಾಮುಲು ಸೇರ್ಪಡೆ ಹಾಗೂ ಮೋದಿ ಅಲೆಯ ತ್ರಿವೇಣಿ ಸಂಗಮದಿಂದ ಲೋಕಸಭಾ ಚುನಾವಣೆಯಲ್ಲಿ 20ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಆಂತರ್ಯದಲ್ಲಿದ್ದ ಗುಂಪುಗಾರಿಕೆಯಿಂದ ಸೋಲು ಅನುಭವಿಸಬೇಕಾಯಿತು. ಆದರೆ, ಮುಂದಿನ ದಿನಗಳಲ್ಲಿ ‘ಎಡವಿದ ಕಲ್ಲನ್ನು ಮತ್ತೆ ಎಡವಲು ಸಾಧ್ಯ ಇಲ್ಲ’ ಎಂದು ಸೂಚ್ಯವಾಗಿ ನುಡಿದರು.

ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾತಿಗೆ ಕಿಂಚಿತ್ತೂ ಬೆಲೆ ಇಲ್ಲ. ಲೋಕಸಭಾ ಚುನಾವಣೆಗೆ ನಿಂತಿಕೊಳ್ಳಿ ಎಂದು ಸೂಚಿಸಿದರೂ, ನಾವು ಸ್ಪರ್ಧಿಸುವುದಿಲ್ಲ ಎಂಬ ಪ್ರತ್ಯುತ್ತರವನ್ನು ಅವರ ಸಹದ್ಯೋಗಿಗಳು ನೀಡುತ್ತಿರುವುದು ಕಾಂಗ್ರೆಸ್ ಪಕ್ಷದಲ್ಲಿನ ಗುಂಪುಗಾರಿಕೆ  ಬಿಂಬಿಸುತ್ತದೆ ಎಂದು ದೂರಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಚಲನಚಿತ್ರ ನಟರ ಪ್ರಭಾವ ನಡೆಯುವುದಿಲ್ಲ. ನಟ ಶಿವರಾಜ್ ಕುಮಾರ್, ‘ನಾನು ಗೀತಾ ಪರವಾಗಿ ಮತ ಪ್ರಚಾರ ಮಾಡುತ್ತೇನೆಯೇ ಹೊರತು, ಜೆಡಿಎಸ್ ಪಕ್ಷದ ಪರವಾಗಿ ಅಲ್ಲ’ ಎಂದು ಹೇಳಿರುವುದು, ಜಿಲ್ಲೆಯಲ್ಲಿ ಜೆಡಿಎಸ್ ಪರವಾದ ಅಲೆ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎಂದರು.

ಜೆಡಿಎಸ್ ಅಲೆ ರಾಜ್ಯದಲ್ಲಿಯೇ ಇಲ್ಲ. ಜಿಲ್ಲೆಯಲ್ಲಿ ಕಾಣಲು ಸಾಧ್ಯವೇ?. ಬಂಗಾರಪ್ಪ ಅವರ ಮಗಳು ಎಂಬ ಒಂದೇ ಒಂದು ಕಾರಣದಿಂದ ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕಿಳಿಸಲಾಗಿದೆಯೇ ಹೊರತು, ಗೆಲ್ಲಲಿ ಎಂಬ ಉದ್ದೇಶ ದಿಂದಲ್ಲ ಎಂದು ಟೀಕಿಸಿದ ಅವರು, ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ ಅವರನ್ನು ರಾಜಕೀಯದಿಂದ ಮುಗಿಸಬೇಕು ಎಂಬ ಉದ್ದೇಶದಿಂದ ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕಿಳಿಸಿದ್ದಾರೆ ಎಂದು ಆರೋಪಿಸಿದರು.

ರಾಮುಲು, ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ವರಿಷ್ಠರು ತೀರ್ಮಾನ ಮಾಡಿದ್ದಾರೆ ಎಂದ ಅವರು, ಸುಷ್ಮಾ ಸ್ವರಾಜ್ ಹಾಗೂ ರಾಮುಲು ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ವಿರೋಧಿಗಳಿಗೆ ಗೆಲ್ಲುವ ವಿಶ್ವಾಸ ಇಲ್ಲ; ಬಿಎಸ್‌ವೈ
ಹಿಂದಿನ 5ವರ್ಷಗಳಲ್ಲಿ ಬಿಜೆಪಿ ಸರ್ಕಾರ ನೀಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತುಲನೆ ಮಾಡಿ ನೋಡಲಿ ಎಂದು ಶಿವಮೊಗ್ಗ ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಸವಾಲು ಹಾಕಿದರು.

ಬಿಜೆಪಿ ಲೋಕಸಭಾ ಚುನಾವಣೆಯ ಶಿವಮೊಗ್ಗ ನಗರ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾತ್ರ ವಲ್ಲದೇ ಇಡೀ ದೇಶದಲ್ಲಿ ಮೋದಿ ಅಲೆಯಿದೆ ಹಾಗೂ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆ ಎಂದರು.

ಚುನಾವಣಾ ಸಮೀಕ್ಷೆಗಳು ರಾಜ್ಯದಲ್ಲಿ ಬಿಜೆಪಿ 20ಸೀಟುಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಿವೆ. ಆದರೆ, ಬಿಜೆಪಿ ಇನ್ನೂ ಅಖಾಡಕ್ಕೆ ಇಳಿದಿಲ್ಲ. ಅಖಾಡಕ್ಕೆ ಧುಮುಕಿದರೆ 20ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವ ಸಾಮರ್ಥ್ಯ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿರೋಧಿಗಳ ಟೀಕೆಗಳಿಗೆ ಉತ್ತರಿಸುವ ಪ್ರಮೇಯವೇ ಇಲ್ಲ. ಅವರಿಗೆ ಗೆಲ್ಲುವ ವಿಶ್ವಾಸ ಇಲ್ಲದ ಕಾರಣ ಬಿಜೆಪಿ ಕುರಿತು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT