ADVERTISEMENT

`ತ್ವರಿತ ಪರಿಹಾರ ಕಾಮಗಾರಿ ಕೈಗೊಳ್ಳಿ'

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 10:15 IST
Last Updated 5 ಆಗಸ್ಟ್ 2013, 10:15 IST

ಶಿವಮೊಗ್ಗ: ಮಳೆಯಿಂದ ಹಾನಿಗೀಡಾಗಿದ ಪ್ರದೇಶಗಳಲ್ಲಿ ಕೂಡಲೇ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಶಾಸಕಿ ಶಾರದಾ ಪೂರ‌್ಯನಾಯ್ಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೆ ಒಳಗಾದ ಗ್ರಾಮಗಳಿಗೆ ಭಾನುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ಶಾರದಾ ಅವರು,  ಅಧಿಕಾರಿಗಳಿಗೆ ಪರಿಸ್ಥಿತಿಯನ್ನು ಸಮಪರ್ಕವಾಗಿ ನಿಭಾಯಿಸುವಂತೆ ಸೂಚಿಸಿದರು.

ವಡೇರಪುರ, ಕುಂಸಿ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿದ ಅವರು,  ಮನೆಗಳು ಕುಸಿದು ಬಿದ್ದಿರುವ ಬಗ್ಗೆ, ಬೆಳೆ ಹಾನಿಯಾಗಿರುವ ಬಗ್ಗೆ ಸೇತುವೆಗಳು, ರಸ್ತೆಗಳು, ಕೆರೆ ಕಟ್ಟೆಗಳು ಒಡೆದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.


ಗ್ರಾಮಸ್ಥರ ಅಹವಾಲು ಆಲಿಸಿದ ಅವರು, ಮಳೆಯಿಂದ ತೊಂದರೆಗೆ ಒಳಗಾದವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಪ್ರಾಕೃತಿಕ ವಿಕೋಪ ನಿಧಿಯ ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗಿದ್ದು, ಪ್ರಸ್ತುತ ನೀಡಲಾಗುತ್ತಿರುವ ಪರಿಹಾರ ಧನ ಹೆಚ್ಚಿಸಲಾಗಿದೆ. ನೂತನ ನಿಯಾವಳಿಗಳಿಗೆ ಅನುಗುಣವಾಗಿ ಮಳೆಯಿಂದ ತೊಂದರೆಗೆ ಈಡಾದವರಿಗೆ ಪರಿಹಾರ ಧನ ವಿತರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಕೂಡಲೇ, ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ ಉಂಟಾದ ನಷ್ಟದ ಸಮಗ್ರ ವರದಿ ನೀಡುವಂತೆಯೂ ತಿಳಿಸಿದರು.
ತಹಶೀಲ್ದಾರ್ ಕೊಟ್ರೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.