ADVERTISEMENT

ದಂಡ ಪಡೆದು ರೈತರಿಗೆ ಭೂಮಿ ಬಿಟ್ಟುಕೊಡಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2012, 5:00 IST
Last Updated 4 ಆಗಸ್ಟ್ 2012, 5:00 IST

ಸೊರಬ: ಕೆರೆಹಳ್ಳಿ ಗ್ರಾಮದ 88 ಎಕರೆ ಭೂಮಿ ಒತ್ತುವರಿ ತೆರವುಗೊಳಿಸಿದ ಬೆನ್ನಲ್ಲೇ ಶುಕ್ರವಾರ ತಾಳಗುಪ್ಪ ಗ್ರಾಮದ ಭೂಮಿಯನ್ನು ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಿತು. 

ತಾಳಗುಪ್ಪ ಗ್ರಾಮದಲ್ಲಿ ಗುರುವಾರ ತೆರವು ಕಾರ್ಯ ನಡೆಸಿದ ಪ್ರದೇಶಕ್ಕೆ ಮಾಜಿ ಸಚಿವ ಕುಮಾರ ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರು, ಈ ರೈತರ ಗೋಳು ನೋಡಲಾಗುತ್ತಿಲ್ಲ. ಸರ್ಕಾರ ಇದನ್ನು ಕಾಣದಂತೆ ಕುಳಿತಿದೆ. ಈ ಭಾಗದ ಜನ ಹೈಕೋರ್ಟ್‌ನ ಆದೇಶಕ್ಕೆ ತಡೆಯಾಜ್ಞೆ ತರುವ ಬಗ್ಗೆ, ಮುಂದಿನ ಕಾರ್ಯದ ಬಗ್ಗೆ ಮೊದಲೇ ಯೋಚಿಸಬೇಕಿತ್ತು.

ಬೆಂಗಳೂರಿನಲ್ಲಿ ಅನಧಿಕೃತ ಕಟ್ಟಡಕ್ಕೆ ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸುವ ರೀತಿಯಲ್ಲಿ ಈ ರೈತರಿಗೆ ಜಮೀನು ಮಂಜೂರು ಮಾಡಿಕೊಡಬೇಕಿತ್ತು. ಸರ್ಕಾರ ಗ್ರಾಮೀಣ ರೈತರ ಜೀನದೊಂದಿಗೆ ಚೆಲ್ಲಾಟವಾಡುತ್ತಿದೆ.

ರೈತರ ಬದುಕು ದುಸ್ತರವಾಗಿ ಬೀದಿ ಪಾಲಾಗಲಿದೆ. ಸರ್ಕಾರ ಈಗಲಾದರೂ ಈ ಭಾಗದ ರೈತರಿಗೆ ಆದ ನಷ್ಟ ತುಂಬಿಕೊಡುವ ಜತೆಗೆ, ಅವರಿಗೆ ಜಮೀನು ಬಿಟ್ಟುಕೊಡಲು ಮುಂದಾಗಬೇಕು. ಈಗಾಗಲೇ ಅನುಭೋಗದಲ್ಲಿರುವವರಿಗೆ  ಜಮೀನನ್ನು ಮಂಜೂರು ಮಾಡಿಕೊಡಲು ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದರು.

ಸ್ಥಳಕ್ಕೆ ಆಗಮಿಸಿದ್ದ ಕಾಗೋಡು ತಿಮ್ಮಪ್ಪ ಮಾತನಾಡಿ, ಸರ್ಕಾರ ರೈತರ ಬದುಕು ಕಸಿದುಕೊಂಡು ಅವರನ್ನು ನಕ್ಸಲರನ್ನಾಗಿಸಲು ಪ್ರೇರೇಪಿಸುತ್ತಿದೆ. ಬಿಜೆಪಿ ಸರ್ಕಾರದಿಂದ ರೈತರ ಮೇಲೆ ಪ್ರತಿಬಾರಿ ದೌರ್ಜನ್ಯವಾಗುತ್ತಿದೆ. ರೈತರು ಸಾಗುವಳಿ ಮಾಡಿ ಬೆಳೆ ಬೆಳೆಯುತ್ತಿದ್ದ ಜಮೀನನ್ನು ತೆರವುಗೊಳಿಸಿರುವುದರಿಂದ ರೈತರ ಬದುಕು ದುಸ್ತರವಾಗುವುದಲ್ಲದೇ ಅವರು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಪಾರಂಪರಿಕ ಅರಣ್ಯ ಕಾನೂನು ಪ್ರಕಾರ ಗ್ರಾಮ ಸಭೆ ಕರೆದು ಅರಣ್ಯ ಸಮಿತಿ ರಚನೆ ಮಾಡಿ, ಅರಣ್ಯ ಇಲಾಖೆಯಿಂದ ರೈತರು ರಶೀದಿ ಪಡೆದುಕೊಂಡಿದ್ದರೆ ಅಂತಹವರನ್ನು ಯಾವುದೇ ಅಧಿಕಾರಿ ತೆರವುಗೊಳಿಸಲು ಸಾಧ್ಯವಿಲ್ಲ. ಈ ಭಾಗದ ರೈತರಿಗೆ ಸರಿಯಾದ ಕಾನೂನಿನ ತಿಳಿವಳಿಕೆ ಇಲ್ಲದೇ ಇರುವುದು ಹಾಗೂ ರಾಜಕೀಯ ನಾಯಕರು ಸರಿಯಾಗಿ ಮನವರಿಕೆ ಮಾಡಿಕೊಡದೇ ಇದ್ದುದರಿಂದ ಈ ಪರಿಸ್ಥಿತಿ ಬಂದೊದಗಿದೆ.

ರೈತರ ಪರವಾಗಿ ವಕಾಲತ್ತು ವಹಿಸಿದ ಹೈಕೋರ್ಟ್‌ನ ವಕೀಲರು ರೈತರಿಗೆ ಸರಿಯಾದ ಮಾಹಿತಿ ನೀಡದೇ, ಅವರ ಪರ ಕರ್ತವ್ಯ ನಿರ್ವಹಿಸದೇ ಲೋಪವೆಸಗಿದ್ದು ಕಂಡುಬಂದಿದೆ.  ಈ ಸಂಬಂಧ ರಾಜ್ಯ ವಕೀಲರ ಪರಿಷತ್ತಿಗೆ ದೂರು ನೀಡಿ ಅವರ ಸದಸ್ಯತ್ವ ಅನರ್ಹಗೊಳಿಸಲು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.

ರೈತರು ಈ ಹಿಂದೆ ಸಾಗುವಳಿ ಮಾಡಿಕೊಂಡು ಹೋಗುತ್ತಿರುವ ಜಮೀನಿಗೆ ಸಂಬಂಧಪಟ್ಟಂತೆ ತಾತ್ಕಾಲಿಕ ಕಂದಾಯ ಪಾವತಿಸಿ ಅನುಭೋಗ ಮಾಡುತ್ತಿದ್ದರೂ ಈಗ ಸರ್ಕಾರ ತನ್ನ ಹೆಸರಿಗೆ ಪಹಣಿ ಬದಲಾಯಿಸಿಕೊಂಡು ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ. ರೈತರು ಸಂಬಂಧಪಟ್ಟ ದಾಖಲೆಯನ್ನು ತೆಗೆದುಕೊಂಡು ತಮಗೆ ಸಲ್ಲಿಸಿದರೆ ಜಿಲ್ಲಾಧಿಕಾರಿ ಜತೆ ಚರ್ಚಿಸಿ ನ್ಯಾಯ ದೊರಕಿಸಲು ಮುಂದಾಗುವುದಾಗಿ ತಿಳಿಸಿದರು. 

ಕಾಡಿನ ರಕ್ಷಣೆಗೆ ರೈತರ ಸಹಕಾರ ಅಗತ್ಯವಾಗಿದೆ. ಈಗ ರೈತರು ತಡೆಯಾಜ್ಞೆ ತರಲು ನ್ಯಾಯಾಲಯಕ್ಕೆ ಹೋಗಿದ್ದಾರೆ. ಅವರು ಬರುವವರೆಗೆ ಕಾರ್ಯಾಚರಣೆ ನಡೆಸಬೇಡಿ. ಅವರಿಗೆ ಕಾಲಾವಕಾಶ ಕೊಡಿ ಎಂದು ಕಾಗೋಡು ತಿಮ್ಮಪ್ಪ, ಸಿಸಿಎಫ್ ಸ್ಮಿತಾ ಬಿಜ್ಜೂರ್ ಅವರಿಗೆ ಹೇಳಿದಾಗ, ನ್ಯಾಯಾಲಯದ ಆದೇಶದಂತೆ ತಾವು ಕಾರ್ಯಾಚರಣೆ ನಡೆಸಿದ್ದು, ತಮಗೆ ನ್ಯಾಯಾಲಯದ ನಿರ್ದಿಷ್ಟ ಪಡಿಸಿದಂತೆ ಒತ್ತುವರಿ ತೆರವುಗೊಳಿಸಿದ ನಂತರವೇ ಕಾರ್ಯಾಚರಣೆ ನಿಲ್ಲಿಸಿರುವುದಾಗಿ ತಿಳಿಸಿದರು.

ಸ್ಥಳದಲ್ಲಿ ಜಿಲ್ಲಾ ಅರಣ್ಯಾಧಿಕಾರಿ ರವಿಶಂಕರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ, ಮುಖಂಡರಾದ ತೀ.ನಾ. ಶ್ರೀನಿವಾಸ, ಕೆ. ಮಂಜುನಾಥ, ಪಿ.ಎಸ್.  ಪ್ರಶಾಂತ್, ನಾಗಪ್ಪ ಮಾಸ್ತರ್, ಆನಂದಪ್ಪ, ಗಣಪತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.