ADVERTISEMENT

ದೇಶ ದುರ್ಬಲಗೊಳಿಸುವ ವಿದೇಶಿ ವಸ್ತುಗಳ ಖರೀದಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 9:15 IST
Last Updated 27 ಅಕ್ಟೋಬರ್ 2017, 9:15 IST

ಶಿವಮೊಗ್ಗ: ದೇಶದ ಜನರು ವಿದೇಶಿ ವಸ್ತುಗಳನ್ನು ಹೆಚ್ಚು ಖರೀದಿಸಿದಷ್ಟೂ ಆ ದೇಶಗಳ ಆರ್ಥಿಕತೆ ಬಲಗೊಳ್ಳುತ್ತದೆ ಎಂದು ರಾಷ್ಟ್ರೀಯ ಸ್ವದೇಶಿ ಆಂದೋಲನ ಸಂಚಾಲಕ ಕೆ.ವಿ. ಬಿಜು ಎಚ್ಚರಿಸಿದರು. ನಗರದ ರಾಷ್ಟ್ರೀಯ ಕಾನೂನು ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ, ರಾಷ್ಟ್ರೀಯ ಸ್ವಾಭಿಮಾನ ಅಂದೋಲನ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಹಾಗೂ ಸ್ವದೇಶಿ ವಸ್ತುಗಳ ಬಳಸಿ’ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ ನೆರೆ ರಾಷ್ಟ್ರಗಳ ವಸ್ತುಗಳು ಸಾಕಷ್ಟು ಪ್ರಮಾಣದಲ್ಲಿ ಲಗ್ಗೆ ಇಟ್ಟಿವೆ. ಚೀನಾ ವಸ್ತುಗಳ ಹಾವಳಿ ಮಿತಿಮೀರಿದೆ. ಹಾಗಾಗಿ, ನಮ್ಮ ದೇಶದ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಇದು ಭಾರತದ ಆರ್ಥಿಕತೆಗೆ ದೊಡ್ಡಪೆಟ್ಟು, ಅಲ್ಲದೇ, ಚೀನಾ ಭಾರತಕ್ಕಿಂತ ಆರ್ಥಿಕವಾಗಿ ಬಲಗೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಒಂದು ದೇಶದ ಆರ್ಥಿಕತೆ ಇನ್ನೊಂದು ದೇಶದ ವ್ಯಾಪಾರ ವ್ಯವಸ್ಥೆ ಮೇಲೆ ಅವಂಬಿಸಿರುತ್ತದೆ. ದೇಶದಲ್ಲಿ ಜಾಗತೀಕ, ಉದಾರೀಕರಣ, ಖಾಸಗೀಕರಣದ ಪ್ರಭಾವ ಹೆಚ್ಚಾಗಿ ದೇಶ ಸಂಕಷ್ಟಕ್ಕೆ ಸಿಲುಕಿದೆ. ಸ್ವದೇಶಿ ವಸ್ತುಗಳ ಬೇಡಿಕೆ ಕಡಿಮೆಯಾದ ಕಾರಣ ದೇಶಿ ಕುಶಲ ವಸ್ತುಗಳ ತಯಾರಿಕಾ ಘಟಕಗಳು ಮುಚ್ಚಿವೆ. ಅವಲಂಬಿತ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಆರ್ಥಿಕತೆ ಸಂಕಷ್ಟ ಎದುರಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ದೇಶದಲ್ಲಿರುವ ಎಲ್ಲ ಗುಡಿ ಕೈಗಾರಿಕೆಗಳು ನಶಿಸಲಿವೆ ಎಂದು ಎಚ್ಚರಿಸಿದರು.

ADVERTISEMENT

ಪ್ರಾಂಶುಪಾಲ ಜಿ.ಆರ್.ಜಗದೀಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ‘ದೇಶದ ಜನರು ವಿದೇಶಿ ವಸ್ತುಗಳಿಗೆ ಮಾರು ಹೋಗುತ್ತಿದ್ದಾರೆ. ಇದರಿಂದ ದೇಶದ ಆರ್ಥಿಕತೆಯ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಬಿ.ಎಸ್. ವಿಶ್ವನಾಥ ಗೌಡ, ರಾಷ್ಟ್ರೀಯ ಸ್ವದೇಶಿ ಆಂದೋಲನ ರಾಜ್ಯ ಸಂಚಾಲಕ ಸಿ.ವಿ. ಮಾಧವನ್, ಗಾಂಧಿ ಬಸಪ್ಪ ಮತ್ತು ಹಳದಮ್ಮ ಪ್ರತಿಷ್ಠಾನದ ಎಸ್.ಬಿ. ವಾಸುದೇವ್, ಪ್ರಧಾನ ಕಾರ್ಯದರ್ಶಿ ಎಸ್.ಬಿ. ಅಶೋಕ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.