ADVERTISEMENT

ಧರ್ಮಗಳ ಮೀರಿದ ವಿಶ್ವಮಾನವ ಬಸವಣ್ಣ

ಶಿವಮೊಗ್ಗ: ‘ಕೆಳದಿ ಶಿವಪ್ಪ ನಾಯಕ’ ಪ್ರಶಸ್ತಿ ಸ್ವೀಕರಿಸಿದ ಡಾ.ನೀರಜ್ ಪಾಟೀಲ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2016, 12:13 IST
Last Updated 15 ಆಗಸ್ಟ್ 2016, 12:13 IST
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ಸಮಾರಂಭದಲ್ಲಿ ಲಂಡನ್‌ನಲ್ಲಿ ಬಸವಣ್ಣನ ಪುತ್ಥಳಿ ಸ್ಥಾಪಿಸಲು ಶ್ರಮಿಸಿದ ಡಾ.ನೀರಜ್ ಪಾಟೀಲ್ ಅವರಿಗೆ ‘ಕೆಳದಿ ಶಿವಪ್ಪನಾಯಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ಸಮಾರಂಭದಲ್ಲಿ ಲಂಡನ್‌ನಲ್ಲಿ ಬಸವಣ್ಣನ ಪುತ್ಥಳಿ ಸ್ಥಾಪಿಸಲು ಶ್ರಮಿಸಿದ ಡಾ.ನೀರಜ್ ಪಾಟೀಲ್ ಅವರಿಗೆ ‘ಕೆಳದಿ ಶಿವಪ್ಪನಾಯಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು   

ಶಿವಮೊಗ್ಗ: ‘ಬಸವಣ್ಣ ಯಾವುದೇ ಧರ್ಮಕ್ಕೆ ಸೀಮಿತರಲ್ಲ. ಎಲ್ಲ ಧರ್ಮಗಳಿಗೂ ಮೀರಿದ ನಾಯಕರಾಗಿರುವ ಬಸವಣ್ಣ ವಿಶ್ವಮಾನವರಾಗಿದ್ದಾರೆ’ ಎಂದು ಲಂಡನ್‌ನಲ್ಲಿ ವಿಶ್ವಗುರು ಬಸವಣ್ಣನ ಪ್ರತಿಮೆ ಸ್ಥಾಪಿಸಲು ಶ್ರಮಿಸಿದ ಇಂಗ್ಲೆಂಡ್‌ನ ಲ್ಯಾಂಬೆತ್ ನಗರದ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಮಹಾಸಭಾ (ಅ.ಭಾ.ವೀ) ನೀಡಲಾದ ‘ಕೆಳದಿ ಶಿವಪ್ಪನಾಯಕ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

‘ಬಸವಣ್ಣನ ವಚನಗಳು, ತತ್ವ ಹಾಗೂ ಆದರ್ಶಗಳನ್ನು ಭಾರತ ದೇಶಕ್ಕಿಂತ ಇಂಗ್ಲೆಂಡ್‌ನಲ್ಲಿ ಪರಿಣಾಮಕಾರಿಯಾಗಿ ಅನುಸರಿಸಲಾಗುತ್ತಿದೆ. ಆ ದೇಶದ ಆಡಳಿತದಲ್ಲಿ ಎಲ್ಲವೂ ಪಾರದರ್ಶಕವಾಗಿದೆ. ಅಲ್ಲಿ ಬಸವಣ್ಣನ ಚಿಂತನೆಗಳನ್ನು ಪಾಲಿಸಲಾಗುತ್ತಿದೆ. ಹಾಗಾಗಿ ಬಸವಣ್ಣನ ಜಾಗತಿಕ ಮಟ್ಟದಲ್ಲಿ ನಾಯಕರಾಗಿದ್ದಾರೆ’ ಎಂದರು.

‘ಲಂಡನ್‌ನಲ್ಲಿ ಜನಪ್ರತಿನಿಧಿಗಳೇ ಪ್ರಜೆಗಳ ಸೇವಕರಾಗಿದ್ದರೆ, ಭಾರತದಲ್ಲಿ ಪ್ರಜೆಗಳನ್ನೇ ಸೇವಕರ ರೀತಿ ನಡೆಸಿಕೊಳ್ಳಲಾಗುತ್ತದೆ. ಇಂಗ್ಲೆಂಡ್ ದೇಶದಲ್ಲಿ ಬಸವಣ್ಣನ ತತ್ವ ಹಾಗೂ ಆದರ್ಶಕ್ಕೆ ಗೌರವ ಕೊಟ್ಟು ಪರಿಪಾಲಿಸಲಾಗುತ್ತಿದೆ. ಆದರೆ, ಭಾರತದಲ್ಲಿ ಅವರ ಆದರ್ಶದ ಪಾಲನೆ ಕಡಿಮೆಯಾಗಿದೆ. ಬಸವಣ್ಣ ಜನಿಸಿದ ನಾಡಿನಲ್ಲಿ ದಲಿತರಮೇಲೆ ಹಲ್ಲೆಯಾಗುತ್ತಿರುವುದು ಖಂಡನೀಯ’ ಎಂದು ವಿಷಾದ ವ್ಯಕ್ತಪಡಿಸಿದರು.

ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ‘ಬಸವಣ್ಣನ ತತ್ವಗಳನ್ನು ಪಾಲಿಸಿದಲ್ಲಿ ಜೀವನಕ್ಕೆ ಒಂದು ಅರ್ಥ ಸಿಗುತ್ತದೆ. ಕೆಲವರು ಘೋಷಣೆ ಮಾಡುತ್ತಾರಷ್ಟೆ. ಆದರೆ, ಯಾವುದೇ ಆದರ್ಶಗಳನ್ನು ಪಾಲಿಸುತ್ತಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದರು.

ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸಿದ್ದ ಬಸವಣ್ಣ, ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ನೀರಜ್ ಪಾಟೀಲ್ ಅವರು ವಿದೇಶದಲ್ಲಿ ಬಸವಣ್ಣನ ಪ್ರತಿಮೆ ಸ್ಥಾಪಿಸುವಲ್ಲಿ ಅಪಾರವಾದ ಶ್ರಮಹಾಕಿದ್ದಾರೆ. ಅವರ ಸಾಧನೆಯ ಫಲವಾಗಿ ಪ್ರಶಸ್ತಿ ನೀಡಲಾಗುತ್ತಿದೆ’ ಎಂದರು.

ಬಳಿಕ ನೀರಜ್ ಪಾಟೀಲ್‌ ಅವರಿಗೆ ಪ್ರಶಸ್ತಿ, ₹ 10,000 ನಗದು ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಮಾತನಾಡಿ, ಶಿವಮೊಗ್ಗ ಅನೇಕ ಜನ್ಮಪುರುಷರ ನೆಲೆವೀಡು. ಅಲ್ಲಮಪ್ರಭು, ಅಕ್ಕಮಹಾದೇವಿ ಅವರು ಜನ್ಮಿಸಿದ ಸ್ಥಳ. ಈ ಪುಣ್ಯಭೂಮಿಗೆ ಬರಲು ನೀರಜ್ ಪಾಟೀಲ್ ಅವರು ಪುಣ್ಯಮಾಡಿದ್ದಾರೆ ಎಂದರು.

ಶಾಸಕ ಬಿ.ವೈ.ರಾಘವೇಂದ್ರ ಮಾತನಾಡಿದರು. ಕವಲೇದುರ್ಗದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅ.ಭಾ.ವೀ. ಸಮಾಜದ ಅಧ್ಯಕ್ಷ ರುದ್ರಮುನಿ ಎನ್. ಸಜ್ಜನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಬಿ.ಕೆ.ಸಂಗಮೇಶ್ವರ, ಮಹಾಸಭಾದ ರಾಜ್ಯ ಸಮಿತಿ ಸದಸ್ಯ ಡಾ.ಶಿವಪ್ಪ, ಉದ್ಯಮಿ ಬಿ.ಸಿ.ನಂಜುಂಡಶೆಟ್ಟಿ, ವೀರಶೈವ ಸಮಾಜದ ಎನ್.ಜೆ.ರಾಜಶೇಖರ್, ಎಸ್.ಎಸ್.ಜ್ಯೋತಿ ಪ್ರಕಾಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಇದ್ದರು.  ಡಿ.ಬಿ.ಶಂಕರಪ್ಪ, ಎಂ.ನಾಗರಾಜ್, ಆರ್.ಎನ್.ಅರುಂಧತಿ, ವೀರೇಶ್ ಕೊಟಗಿ, ಶಿವಲಿಂಗೇಗೌಡ್ರು, ಎ.ಪರಮೇಶ್ವರಪ್ಪ, ಮಲ್ಲಿಕಾರ್ಜುನ ಹಕ್ರೆ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮ ವಿಳಂಬಕ್ಕೆ ಬೇಸರ
ಸಮಾರಂಭಕ್ಕೆ ಸಂಸತ್ ಸದಸ್ಯ ಯಡಿಯೂರಪ್ಪ ಅವರು ಬಾರದ ಕುರಿತು ಆಯನೂರು ಮಂಜುನಾಥ್ ಹಾಗೂ ನೀರಜ್ ಪಾಟೀಲ್ ನಡುವೆ ಕೆಲ ಕ್ಷಣ ಮಾತಿನ ಚಕಮಕಿ ನಡೆಯಿತು.

‘ಯಡಿಯೂರಪ್ಪ ಅವರು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಗೊತ್ತಿದ್ದರೂ ಒಂದು ಗಂಟೆ ಕಾದು ಕಾರ್ಯಕ್ರಮ ಆರಂಭಿಸಬಾರದಿತ್ತು’ ಎಂದು ಆಯನೂರು ಮಂಜುನಾಥ ತಮ್ಮ ಭಾಷಣದಲ್ಲಿ ಹೇಳಿದರು.

ಆಗ ತಮ್ಮ ಖುರ್ಚಿಯಿಂದ ಎದ್ದ ನೀರಜ್ ಪಾಟೀಲ್, ಯಡಿಯೂರಪ್ಪ ಗೈರು ಹಾಜರಿ ಕುರಿತು ಸ್ಪಷ್ಟನೆ ನೀಡಲು ಧ್ವನಿವರ್ಧಕದ ಬಳಿ ಬಂದರು.
‘ಯಡಿಯೂರಪ್ಪ ಆಗಮಿಸದೆ ಇರುವುದು ತಮಗೇನು ಸಂಕೋಚವಿಲ್ಲ’ ಎಂದು ನೀರಜ್ ಪಾಟೀಲ್ ಸ್ಪಷ್ಟನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT