ADVERTISEMENT

ಧರ್ಮದ ತಕ್ಕಡಿ ಮೇಲಿರಲಿ: ರಾಘವೇಶ್ವರ ಶ್ರೀ

ಹವ್ಯಕ ಮಹಾ ಮಂಡಲ ಮಂಡಲೋತ್ಸವ: ಅಡಿಕೆ ತುಲಾಭಾರ ಸೇವೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 10:45 IST
Last Updated 24 ಏಪ್ರಿಲ್ 2013, 10:45 IST
ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ಹವ್ಯಕ ಮಹಾ ಮಂಡಲದ ವತಿಯಿಂದ ಮಂಗಳವಾರ ಅಡಿಕೆ ತುಲಾಬಾರ ಸೇವೆ ನಡೆಯಿತು.
ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಗೆ ಹವ್ಯಕ ಮಹಾ ಮಂಡಲದ ವತಿಯಿಂದ ಮಂಗಳವಾರ ಅಡಿಕೆ ತುಲಾಬಾರ ಸೇವೆ ನಡೆಯಿತು.   

ಹೊಸನಗರ:  ಎಂದೆಂದಿಗೂ ಕೂಡ ಧರ್ಮದ ತಕ್ಕಡಿಯೇ ಮೇಲಿರಬೇಕು ಹೊರತು, ಸಂಪತ್ತಿನ ತಕ್ಕಡಿ ಅಲ್ಲ ಎಂದು ರಾಮಚಂದ್ರಾಪುರ ಮಠದ  ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಸಮೀಪದ ರಾಮಚಂದ್ರಾಪುರ ಮಠದಲ್ಲಿ ಮಂಗಳವಾರ ಹವ್ಯಕ ಮಹಾ ಮಂಡಲ ಮಂಡಲೋತ್ಸವದ ಅಂಗವಾಗಿ ಏರ್ಪಡಿಸಿದ್ದ ಅಡಿಕೆ ತುಲಾಭಾರ ಸೇವೆ ಹಾಗೂ ಹಸ್ತಿದಂತ ಸಿಂಹಾಸನದಲ್ಲಿ ಕಿರೀಟಧಾರಣೆಯ ನಂತರ ಅವರು ಆಶೀರ್ವಚನ ನೀಡಿದರು.

ಅಡಿಕೆಯಲ್ಲಿ ಬೆಳೆಗಾರ ಎಂದೂ ಕೂಡ ಕೇವಲ ಹಣದ ವಿಷಯವನ್ನು ಮಾತ್ರ ಗಮನಿಸದೆ ಜೀವನದ ಅಮೂಲ್ಯ ಆಸ್ತಿ ಎಂದು ಭಾವಿಸುತ್ತಾನೆ. ಹಾಗಾಗಿ, ಅಡಿಕೆಯಲ್ಲಿ ಭಕ್ತಿಯ ಭಾವ ಅಡಗಿದೆ. ಶಿಷ್ಯರು ಕೇವಲ ಅಡಿಕೆ ದರ ಹೆಚ್ಚಾಗುವುದಷ್ಟನ್ನು ಮಾತ್ರ ಆಸೆ ಪಡದೆ ತಮ್ಮ ಜೀವನ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಬೇಕಾದ ಸಂಸ್ಕಾರದತ್ತ ಗಮನಹರಿಸಬೇಕು ಎಂದರು.  

ಶ್ರಿಮಂತಿಕೆಯ ಮೂಲಕ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಸಾಗುತ್ತಿದೆ. ಹೀಗಿರುವುದರಿಂದಲೇ ಜೀವನ ದುಃಖಮಯವಾಗಿದೆ. ನಿಜವಾಗಿಯೂ ಧರ್ಮದ ತಳಹದಿಯ ಮೇಲೆ ಬದುಕು ನಿರ್ಮಿತವಾದರೆ ಸಂತೋಷ ಹೊರತು ಬೇರಿಲ್ಲ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಹವ್ಯಕ ಮಹಾ ಮಂಡಲದ ಕೈಪಿಡಿ, ಸ್ವಸ್ಥಜೀವನ ಪದ್ಧತಿ ಪುಸ್ತಕ ಮತ್ತು ಸಾಂಪ್ರದಾಯಿಕ ಹಾಡುಗಳ ಸಿ.ಡಿ.ಗಳನ್ನು ಲೋಕಾರ್ಪಣೆ ಹಾಗೂ ರ‌್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕೂಡ ಮಾಡಲಾಯಿತು.

ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್. ಹೆಗಡೆ, ಹೊರನಾಡು ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಯಿಸ್, ಆಡಳಿತ ನಿರ್ವಾಹಣಾಧಿಕಾರಿ ಕೆ.ಜಿ. ಭಟ್ ಮತ್ತು ಮಂಡಲ ಪದಾಧಿಕಾರಿಗಳು ಹಾಗೂ ರಾಮಚಂದ್ರಾಪುರ ಮಂಡಲ ಅಧ್ಯಕ್ಷ ಗಣಪತಿ ಜಟ್ಟಿಮನೆ ಹಾಜರಿದ್ದರು.

ಜಡ್ಡು ರಾಮಚಂದ್ರಭಟ್ ವರದಿ ವಾಚಿಸಿದರು. ವಿದ್ವಾನ್ ಜಗದೀಶ್ ಶರ್ಮ ಮತ್ತು ಪ್ರಮೋದ್ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ಪ್ರಸಾದ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.