ADVERTISEMENT

ನಕ್ಸಲ್ ಪ್ಯಾಕೇಜ್: ಬಿಡುಗಡೆಯಾಗದ ಅನುದಾನ

ಪ್ರಕಾಶ ಕುಗ್ವೆ
Published 18 ಅಕ್ಟೋಬರ್ 2011, 6:25 IST
Last Updated 18 ಅಕ್ಟೋಬರ್ 2011, 6:25 IST

ಶಿವಮೊಗ್ಗ: ನಕ್ಸಲ್ ಪ್ಯಾಕೇಜ್‌ನಡಿ ಸರ್ಕಾರ ಜಿಲ್ಲಾ ಪಂಚಾಯ್ತಿಗೆ ಬಿಡುಗಡೆ ಮಾಡುತ್ತಿದ್ದ ಅನುದಾನ ನಿಂತು ಮೂರು ವರ್ಷ ಕಳೆದಿದೆ. ಹೊಸದಾಗಿ ಅನುದಾನ ಕೋರಿ ಜಿಲ್ಲಾ ಪಂಚಾಯ್ತಿ ಕಳುಹಿಸಿದ ಪ್ರಸ್ತಾವಕ್ಕೂ ಸರ್ಕಾರದಿಂದ ಇದುವರೆಗೂ ಯಾವುದೇ ಉತ್ತರ ಬಂದಿಲ್ಲ.

ಜಿಲ್ಲೆಯಲ್ಲಿ ನಕ್ಸಲ್‌ಬಾಧಿತ ಪ್ರದೇಶಗಳೆಂದು 51 ಗ್ರಾಮಗಳನ್ನು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ರಸ್ತೆ, ಕುಡಿಯುವ ನೀರು, ಅಂಗನವಾಡಿ ಕೇಂದ್ರ, ಶಾಲಾ ಕಟ್ಟಡ ದುರಸ್ತಿ, ಕಾಲು ಸಂಕ ಮತ್ತಿತರ ಮೂಲಸೌಲಭ್ಯಗಳನ್ನು ಕಳೆದ ಕೆಲವು ವರ್ಷಗಳಿಂದ ಗ್ರಾಮ ಪಂಚಾಯ್ತಿ ಮೂಲಕ ಜಿಲ್ಲಾ ಪಂಚಾಯ್ತಿ ಕಲ್ಪಿಸಿದೆ.

ನಕ್ಸಲ್ ಪ್ಯಾಕೇಜ್‌ನಡಿ ಪ್ರತಿ ಗ್ರಾ.ಪಂ.ಗೆ ್ಙ 20ಲಕ್ಷದಂತೆ ಈ ಹಿಂದೆ ಪ್ರತಿವರ್ಷವೂ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಈ ನಕ್ಸಲ್ ಪ್ಯಾಕೇಜ್ ನಿಂತಿದೆ. ಬದಲಿಗೆ ಜಿಲ್ಲಾ ಪಂಚಾಯ್ತಿ ಕೈಗೊಳ್ಳುವ ಕಾಮಗಾರಿಗಳ ಕ್ರಿಯಾಯೋಜನೆಯಲ್ಲೇ ನಕ್ಸಲ್‌ಬಾಧಿತ ಪ್ರದೇಶಗಳಿಗೆ ವಿಶೇಷ ಒತ್ತು ನೀಡಲು ನಿರ್ಧರಿಸಿದೆ. ಆದರೆ, ಅನುದಾನ ಕೊಡುವುದನ್ನು ಮರೆತಿದೆ.

ಜಿಲ್ಲಾ ಪಂಚಾಯ್ತಿ, ನಕ್ಸಲ್‌ಬಾಧಿತ ಪ್ರದೇಶಗಳಲ್ಲಿ ದೂರ ಮತ್ತು ಅತಿ ಹಿಂದುಳಿದ ಪ್ರದೇಶಾಭಿವೃದ್ಧಿ ಯೋಜನೆ 2010-11ರ ಅಡಿ ರಸ್ತೆ, ಚರಂಡಿ ಮತ್ತು ಸೇತುವೆ ಸೇರಿ 53,47,000 ರೂ, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಇತರೆ ಸೌಕರ್ಯ ಕಲ್ಪಿಸಲು ್ಙ 13,96,000, ಕುಡಿಯುವ ನೀರು ್ಙ 12,43,600, ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ್ಙ 2,00,00 ಹಾಗೂ ಅಂಗನವಾಡಿ ಕಟ್ಟಡ ನಿರ್ಮಾಣಕ್ಕಾಗಿ ್ಙ 7,00,000  ಒಟ್ಟು ಮೂರು ತಿಂಗಳಿಗೆ ್ಙ 82,86,600 ಕ್ರಿಯಾಯೋಜನೆ ರೂಪಿಸಿ, ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದೆ. ಆದರೆ, ಸರ್ಕಾರ ಇದುವರೆಗೂ ಅನುದಾನ ಬಿಡುಗಡೆ ಮಾಡಿಲ್ಲ.

ಆದರೆ, ಜಿ.ಪಂ., 2010-11ನೇ ಸಾಲಿನ ಇದುವರೆಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಕ್ಸಲ್‌ಬಾಧಿತ 14 ಗ್ರಾ.ಪಂ. ಗಳಲ್ಲಿ 858 ಜನರಿಗೆ 18,925 ಮಾನವ ದಿನಗಳ ಉದ್ಯೋಗ ನೀಡಿದೆ.

ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಈ ಪ್ರದೇಶಗಳ 12 ಜನರಿಗೆ ್ಙ 1.15 ಲಕ್ಷ  ಸಾಲ ನೀಡಿದೆ. ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಗಂಗಾ ಕಲ್ಯಾಣ ಯೋಜನೆಯಡಿ 10 ಫಲಾನುಭವಿಗಳಿಗೆ ತೆರೆದ ಬಾವಿ ಕೊರೆಸಿಕೊಟ್ಟಿದೆ. ವಸತಿರಹಿತರಿಗೆ ಗ್ರಾಮೀಣ ಆಶ್ರಯ, ಇಂದಿರಾ ಅವಾಸ್ ವಸತಿ ಯೋಜನೆಗಳಡಿ ಒಟ್ಟು 1,745 ಮನೆಗಳನ್ನು ನಿರ್ಮಿಸಿಕೊಡಲಾಗಿದೆ.

ನಕ್ಸಲ್‌ಬಾಧಿತ ಹೊಸನಗರ ತಾಲ್ಲೂಕಿನ ಸುಳುಗೋಡು ಗ್ರಾಮ ಪಂಚಾಯ್ತಿಯ ಮೇಲ್ಸುಂಕ, ತುಮರಿಬೈಲಿಗೆ ವಾರಕ್ಕೊಮ್ಮೆ ವೈದ್ಯರು ಭೇಟಿ ನೀಡಿ, ವೈದ್ಯಕೀಯ ತಪಾಸಣೆ ಮಾಡಿ, ಉಚಿತ ಔಷಧ ನೀಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಹಾಗೆಯೇ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖಾ ವತಿಯಿಂದ ನಕ್ಸಲ್‌ಬಾಧಿತ ಪ್ರದೇಶಗಳಲ್ಲಿ ಮೆಟ್ರಿಕ್‌ಪೂರ್ವ ಬಾಲಕಿಯರ ನಿಲಯದಲ್ಲಿ 83, ಬಾಲಕರ ನಿಲಯದಲ್ಲಿ 127, ಮೆಟ್ರಿಕ್ ನಂತರದ ಬಾಲಕಿಯರ ನಿಲಯದಲ್ಲಿ 73 ಹಾಗೂ ಬಾಲಕರ ನಿಲಯದಲ್ಲಿ 55 ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ.
 
ಅಲ್ಲದೇ, ಸುವರ್ಣ ಗ್ರಾಮೋದಯ ಯೋಜನೆಯಲ್ಲಿ ನಿರುದ್ಯೋಗಿ ವಿದ್ಯಾವಂತ ಮತ್ತು ಅವಿದ್ಯಾವಂತ ಯುವಕ- ಯುವತಿಯರಿಗೆ ಅವರ ಆಯ್ಕೆಯ ಉದ್ಯೋಗ ತರಬೇತಿಗಾಗಿ ್ಙ 11.87 ಲಕ್ಷ  ಮೀಸಲಿಡಲಾಗಿದೆ. ಬಾಧಿತ ಪ್ರದೇಶಗಳಲ್ಲಿ ಸ್ವಸಹಾಯ ಗುಂಪುಗಳಿಗೆ ಸುತ್ತುನಿಧಿ ಸಹಾಯ ಹಾಗೂ ತರಬೇತಿ ನೀಡಲು ಜಿ.ಪಂ. ಕ್ರಮ ವಹಿಸಿದೆ.

2009-10ನೇ ಸಾಲಿನಲ್ಲಿ ಎಸ್‌ಜಿಎಸ್‌ವೈ ಕೌಶಲ್ಯ ಯೋಜನೆಯಡಿ ನಕ್ಸಲ್‌ಬಾಧಿತ ಪ್ರದೇಶವಾದ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ 17 ವಿದ್ಯಾರ್ಥಿಗಳಿಗೆ ಬೇಸಿಕ್ ಕಂಪ್ಯೂಟರ್ ತರಬೇತಿ ನೀಡಲಾಗಿದೆ.

ಜಿಲ್ಲಾ ಕೈಗಾರಿಕಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಸಿದ್ಧ ಉಡುಪು ವಿಭಾಗದಿಂದ ಭದ್ರಾವತಿ ತಾಲ್ಲೂಕಿನ ಸಿಂಗನಮನೆ ಗ್ರಾ.ಪಂ. ವ್ಯಾಪ್ತಿಯ 63 ಅಭ್ಯರ್ಥಿಗಳಿಗೆ ಒಂದು ತಿಂಗಳ ಟೈಲರಿಂಗ್ ತರಬೇತಿ ನೀಡಲಾಗಿದೆ. ತೀರ್ಥಹಳ್ಳಿಯಲ್ಲಿ ಪಿಯು ಮುಗಿಸಿದ ವಿದ್ಯಾರ್ಥಿನಿಯರಿಗಾಗಿ ಕಾಲ್‌ಸೆಂಟರ್ ಆರಂಭಿಸಲಾಗಿದೆ ಎನ್ನುತ್ತಾರೆ ಜಿ.ಪಂ. ಉಪ ಕಾರ್ಯದರ್ಶಿ ಹನುಮನರಸಯ್ಯ.

ನಕ್ಸಲ್‌ಬಾಧಿತ ಪ್ರದೇಶಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರ ಈ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದೆ. ಆದರೆ, ಕಾಮಗಾರಿಗಳ ಗುಣಮಟ್ಟದ ಬಗ್ಗೆ ಹಲವು ಆಕ್ಷೇಪಗಳಿವೆ. ಈ ರೀತಿಯ ಆಕ್ಷೇಪಣೆಗಳು ನಕ್ಸಲರಿಂದಲೂ ಕೇಳಿಬಂದಿವೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.