ADVERTISEMENT

ನಗರದಲ್ಲಿ ಕಾವೇರಿ ಬಂದ್ ಶಾಂತ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 5:25 IST
Last Updated 7 ಅಕ್ಟೋಬರ್ 2012, 5:25 IST

ಶಿವಮೊಗ್ಗ: `ಕರ್ನಾಟಕ ಬಂದ್~ಗೆ ಶುಕ್ರವಾರ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ ಉಳಿದಂತೆ ಬಂದ್ ಶಾಂತಿಯುತವಾಗಿತ್ತು.

ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಆಟೋ, ಟ್ಯಾಕ್ಸಿಗಳು ವಿರಳವಾಗಿದ್ದವು. ಅಂಗಡಿ-ಮುಂಗಟ್ಟು ಸಂಪೂರ್ಣ ಮುಚ್ಚಿದ್ದವು. ರೈಲು ಸಂಚಾರ ಎಂದಿನಂತೆ ಅಬಾಧಿತವಾಗಿತ್ತು.

ಬ್ಯಾಂಕ್‌ಗಳು, ಹೋಟೆಲ್, ಖಾಸಗಿ ಕಚೇರಿಗಳು, ಚಿತ್ರಮಂದಿರ, ಪೆಟ್ರೋಲ್ ಬಂಕ್‌ಗಳು, ಚಲನಚಿತ್ರ ಮಂದಿರ, ಶಾಲಾ-ಕಾಲೇಜುಗಳು ಬಾಗಿಲು ಮುಚ್ಚಿದ್ದವು. ಗಾಂಧಿನಗರದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಚೇರಿಯ ಹೊರ ಬಾಗಿಲು ಹಾಕಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿ ಬಾಗಿಲನ್ನು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಬಲವಂತಾಗಿ  ಮುಚ್ಚಿಸಿದರು.

ಮೆಡಿಕಲ್ ಶಾಪ್ ಅಂಗಡಿಗಳು, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಅಂಚೆ ಕಚೇರಿ ಬಾಗಿಲು ತೆರೆದಿತ್ತು. ಕೆಲವೆಡೆ ಸರ್ಕಾರಿ ಕಚೇರಿಗಳು ತೆರೆದಿದ್ದರೂ ಸಾರ್ವಜನಿಕರ ಓಡಾಟ ಇರಲಿಲ್ಲ.ಖಾಸಗಿ ಬಸ್ ನಿಲ್ದಾಣ ಸಮೀಪ ಆಟೋವೊಂದರ ಮೇಲೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಕಲ್ಲು ತೂರಿದ ಘಟನೆ ನಡೆಯಿತು. ನಗರದ ಕೆಲ ರಸ್ತೆಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿದ್ದು ಕಂಡುಬಂತು.

ಬಂದ್ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪೊಲೀಸ್ ಇಲಾಖೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು.ವಿವಿಧ ಪ್ರಗತಿಪರ, ಕನ್ನಡ ಪರ ಹಾಗೂ ನಾಗರಿಕ ಸಂಘಟನೆಗಳು ಸಂಯುಕ್ತವಾಗಿ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೈಕ್‌ನಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿದವು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ನಗರದ ಮುಖ್ಯ ರೈಲು ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು. ರೈತ ಸಂಘದ ಮುಖಂಡರಾದ ಕಡಿದಾಳು ಶಾಮಣ್ಣ, ಎಚ್.ಆರ್. ಬಸವರಾಜಪ್ಪ, ವಿವಿಧ ಸಂಘಟನೆಗಳ ಮುಖಂಡರಾದ ಕಲ್ಲೂರು ಮೇಘರಾಜ್, ಕೆ.ವಿ. ವಸಂತ್‌ಕುಮಾರ್, ಅಶೋಕ್ ಯಾದವ್, ಪಡುವಳ್ಳಿ ಹರ್ಷೇಂದ್ರಕುಮಾರ್, ನಾಗರಾಜ್ ಅಂಬರ್‌ಕರ್ ಭಾಗವಹಿಸಿದ್ದರು.

ಜೆಡಿಎಸ್ ಕೂಡ ಗಾಂಧಿನಗರದ ತನ್ನ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತು. ಪದಾಧಿಕಾರಿಗಳಾದ ಗಾಜನೂರು ಗಣೇಶ್, ಎಚ್.ವಿ. ಮಹೇಶ್ವರಪ್ಪ, ಮಂಜುನಾಥ್, ಪ್ರವೀಣ್, ಶ್ರೀನಿವಾಸ್ ನೇತೃತ್ವ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.