ADVERTISEMENT

ನಾಳೆ ಬೆಂಗಳೂರಿನಲ್ಲಿ ಮಡಿವಾಳ ಸಮಾವೇಶ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 7:05 IST
Last Updated 4 ಜನವರಿ 2014, 7:05 IST

ಶಿವಮೊಗ್ಗ:  ಬೆಂಗಳೂರಿನಲ್ಲಿ ಜ. 5ರಂದು ನಡೆಯಲಿರುವ ರಾಜ್ಯಮಟ್ಟದ ಬೃಹತ್‌ ಮಡಿವಾಳ ಸಮಾವೇಶಕ್ಕೆ ಜಿಲ್ಲೆಯಿಂದ ಸುಮಾರು 4ಸಾವಿರ ಜನ ಭಾಗವಹಿಸಲಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಮಡಿವಾಳ ಸಮಾಜ ಸಂಘದ ಅಧ್ಯಕ್ಷ ಸಿ.ಹುಚ್ಚಪ್ಪ ತಿಳಿಸಿದರು. ಬೆಂಗಳೂರಿನ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯಲಿರುವ ಮಡಿವಾಳ ಜನಾಂಗದ ಜನಜಾಗೃತಿ ಸಮಾವೇಶಕ್ಕೆ ರಾಜ್ಯದ ವಿವಿಧ ಭಾಗಗಳಿಂದ 3ರಿಂದ 5ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ.

  ಜಿಲ್ಲೆಯಿಂದ ಭಾಗವಹಿಸುವವರಿಗೆ 39 ಬಸ್‌ ವ್ಯವಸ್ಥೆ, 1 ಸಾವಿರ ಜನರಿಗೆ ರೈಲಿನ ವ್ಯವಸ್ಥೆ, ವೈಯಕ್ತಿಕ ವಾಹನಗಳಲ್ಲಿ 500 ಜನ ಬೆಂಗಳೂರಿಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ 5ರಂದು ಬೆಳಿಗ್ಗೆ 9.30ಕ್ಕೆ ಉದ್ಘಾಟಿಸುವರು. ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಬೇಕು.

ಕುಲಗುರುಗಳಾದ ಮಡಿವಾಳ ಮಾಚಿದೇವರ ಜಯಂತಿ ನಡೆಸಬೇಕು. ಅವರ ಜನ್ಮ ಸ್ಥಳವಾದ ವಿಜಾಪುರ ಜಿಲ್ಲೆ ಸಿಂದಗಿ ತಾಲ್ಲೂಕು ದೇವರಹಿಪ್ಪರಗಿಯನ್ನು ಅಭಿವೃದ್ಧಿಪಡಿಸಿ, ಜನ್ಮ ಸ್ಥಳ ನಿರ್ವಹಣೆಗೆ ಪ್ರತ್ಯೇಕವಾದ ಮಾಚಿದೇವ ಪ್ರಾಧಿಕಾರ ರಚಿಸಬೇಕು. ಹಾಗೆಯೇ, ಮಡಿವಾಳ ಮಾಚಿದೇವರ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಸಮಾವೇಶದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಈಶ್ವರಪ್ಪ, ಎಸ್‌.ಜಿ.ನಾಗರಾಜ, ಸಂಘಟನಾ ಕಾರ್ಯದರ್ಶಿಗಳಾದ ಎಚ್‌.ವಿ.ತಿಮ್ಮಪ್ಪ, ಕುಮಾರ್, ಚನ್ನಬಸಪ್ಪ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.