ADVERTISEMENT

ನಿಫಾ ವೈರಾಣು ವಿರುದ್ಧ ಮುನ್ನೆಚ್ಚರಿಕೆ ಅಸ್ತ್ರ

ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್

​ಪ್ರಜಾವಾಣಿ ವಾರ್ತೆ
Published 25 ಮೇ 2018, 3:57 IST
Last Updated 25 ಮೇ 2018, 3:57 IST

ಶಿವಮೊಗ್ಗ: ಬಾವಲಿಗಳ ಮೂಲಕ ಹರಡುವ ನಿಫಾ ವೈರಾಣು ಜಿಲ್ಲೆಯಲ್ಲಿ ವ್ಯಾಪಿಸದಂತೆ ತುರ್ತು ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.

ನಿಫಾ ವೈರಾಣು ತಡೆಗೆ ಕುರಿತು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ನೆರೆಯ ಕೇರಳದಲ್ಲಿ ಕಾಣಿಸಿ ಕೊಂಡಿರುವ ಈ ರೋಗದ ಶಂಕಿತ ಲಕ್ಷಣಗಳು ಮಂಗಳೂರಿನಲ್ಲೂ ಪತ್ತೆ ಯಾಗಿವೆ. ಶಿವಮೊಗ್ಗ ಜಿಲ್ಲೆಯು ನೆರೆಯ ಉಡುಪಿ ಹಾಗೂ ಮಂಗಳೂರಿನೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಪ್ರತಿ ನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ. ಹಾಗಾಗಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ರೋಗದ ಕುರಿತು ಜನರು ಭಯ ಪಡುವ ಅಗತ್ಯವಿಲ್ಲ. ಆದರೆ, ರೋಗ ಹರಡದಂತೆ ಎಲ್ಲಾ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಆರೋಗ್ಯ ಇಲಾಖೆ, ಪಶುಸಂಗೋಪನಾ ಇಲಾಖೆ, ಸ್ಥಳೀಯ ಆಡಳಿತ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಆಶಾ ಕಾರ್ಯಕರ್ತೆಯರು, ಸ್ವಸಹಾಯ ಗುಂಪಿನ ಸದಸ್ಯರು ಗ್ರಾಮೀಣ ಮಟ್ಟದಲ್ಲಿ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ಪ್ರಥಮ ಹಂತದಲ್ಲಿ ರೋಗ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ವ್ಯಾಪಕವಾಗಿ ಕೈಗೊಳ್ಳಬೇಕು. ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳ ಸಭೆ ಕರೆದು ಮಾಹಿತಿ ನೀಡಬೇಕು. ಕೇರಳದಿಂದ ಹೆಚ್ಚಿನ ಸಂಖ್ಯೆಯಲ್ಲಿ ಶುಂಠಿ ಬೆಳೆಯಲು ವಲಸೆ ಬರುವ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಬೇಕು. ಇದೇ ರೀತಿ ಬಾವ ಲಿಗಳು ಹೆಚ್ಚಾಗಿ ಕಂಡು ಬರುವ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಬೀಡಾಡಿ ಹಂದಿಗಳ ತೆರವಿಗೆ ಸೂಚನೆ: ಪ್ರಥಮ ಬಾರಿಗೆ 1999ರಲ್ಲಿ ಮಲೇಷ್ಯಾ, ಸಿಂಗಾಪುರ ದೇಶಗಳಲ್ಲಿ ಹಂದಿಗಳಲ್ಲಿ ಈ ವೈರಾಣು ಪತ್ತೆಯಾಗಿ ತ್ತು. ಹಂದಿಗಳ ಮೂಲಕ ಈ ವೈರಾಣು ಹರಡುವ ಸಾಧ್ಯತೆ ಹೆಚ್ಚು. ಹಾಗಾಗಿ, ಬೀಡಾಡಿ ಹಂದಿ ತೆರವುಗೊಳಿಸುವ ಕಾರ್ಯಾಚರಣೆ ತ್ವರಿತಗೊಳಿಸಬೇಕು. ಈ ಕುರಿತು ನಗರ ಸ್ಥಳೀಯ ಸಂಸ್ಥೆಗಳು ಸೂಕ್ತ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿ ಷ್ಠಾಧಿಕಾರಿ ಮುತ್ತುರಾಜ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಘುನಂದನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಧಿಕಾರಿ ಡಾ.ವೆಂಕಟೇಶ್ ಇದ್ದರು.

ರೋಗದ ಲಕ್ಷಣಗಳು

ನಿಫಾ ವೈರಾಣು ಬಾಧಿತರಿಗೆ ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ ಪ್ರಥಮ ಹಂತದಲ್ಲಿ ಕಾಣಿಸಿಕೊಳ್ಳುವುದು. ಬಳಿಕ ಪ್ರಜ್ಞಾಹೀನರಾಗುವರು. ಅತಿಯಾದ ಜ್ವರ ಮೆದುಳಿಗೆ ವ್ಯಾಪಿಸುವುದು, ಮಾತು ತೊದಲುವಿಕೆ ಹಾಗೂ ಅಪಸ್ವರದ ಲಕ್ಷಣಗಳು ಕಾಣಿಸಿಕೊಳ್ಳುವುದು. ಸರಿಯಾದ ಚಿಕಿತ್ಸೆ ಲಭಿಸದಿದ್ದಲ್ಲಿ ಸಾವು ಸಂಭವಿಸಬಹುದು. ಸೋಂಕಿತ ದಿನದಿಂದ 4ರಿಂದ 18 ದಿನಗಳಲ್ಲಿ ನಿಫಾ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

‘ಮಾಹಿತಿ ನೀಡಿ’

ನಿಫಾ ವೈರಾಣು ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣ ಮಾಹಿತಿ ನೀಡುವಂತೆ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಮೆಗ್ಗಾನ್ ಆಸ್ಪತ್ರೆ ಯಲ್ಲಿ ಈಗಾಗಲೇ ಪ್ರತ್ಯೇಕ ವಾರ್ಡ್‌ ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.