ADVERTISEMENT

ನಿರಂತರ ಬೆಂಬಲ ಬೆಲೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 7:05 IST
Last Updated 19 ಫೆಬ್ರುವರಿ 2011, 7:05 IST

ಸಾಗರ: ಅಡಿಕೆ ಬೆಲೆಗೆ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರಂತರವಾಗಿ ಬೆಂಬಲ ಬೆಲೆ ನೀಡುವ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಅಡಿಕೆ ಬೆಳೆಗಾರರು ಶುಕ್ರವಾರ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಜಯಂತ್ ಮಾತನಾಡಿ, ಅಡಿಕೆ ಬೆಲೆ ಪದೇಪದೆ ಏರುವ - ಇಳಿಯುವ ಮೂಲಕ ಬೆಳೆಗಾರರು ಅನಿಶ್ಚಿತತೆಯನ್ನು ಎದುರಿಸುವಂತಾಗಿದೆ. ಬೆಳೆಗಾರರಿಗೆ ಈ ಬೆಳವಣಿಗೆ ಶಾಪವಾಗಿ ಪರಿಣಮಿಸಿದೆ ಎಂದರು.

ಗುಟ್ಕಾವನ್ನು ಪ್ಲಾಸ್ಟಿಕ್ ಪ್ಯಾಕೆಟ್ ಮೂಲಕ ಮಾರುಕಟ್ಟೆಗೆ ಬಿಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ ಎನ್ನುವುದನ್ನೇ ನೆಪ ಮಾಡಿಕೊಂಡು ಕೆಲವು ಸ್ಥಾಪಿತ ಹಿತಾಸಕ್ತಿಗಳು ಅಡಿಕೆ ಮಾರುಕಟ್ಟೆಯನ್ನು ಅಲ್ಲೋಲ- ಕಲ್ಲೋಲಗೊಳಿಸುತ್ತಿವೆ ಎಂದು ಹೇಳಿದರು.ಅಡಿಕೆ ಉತ್ಪಾದನಾ ವೆಚ್ಚಕ್ಕೆ ಸಂಬಂಧಪಟ್ಟಂತೆ ಜೋಷಿ ಸಮಿತಿ ನೀಡಿರುವ ವರದಿ ಅತ್ಯಂತ ವೈಜ್ಞಾನಿಕವಾಗಿದೆ. ಈ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಅಡಿಕೆ ಬೆಳೆಗಾರರ ಸಂಕಷ್ಟ ನಿವಾರಣೆಗೆ ನೂರು ಕೋಟಿ ರೂಪಾಯಿ ಆವರ್ತನಿಧಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಅವರು, ಬೆಳೆಗಾರರ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಡಿಕೆ ಮಂಡಳಿ ಸ್ಥಾಪನೆ ಅಗತ್ಯವಿದೆ. ಅದಕ್ಕಾಗಿ ಮುಖ್ಯಮಂತ್ರಿ ಬರಲಿರುವ ಕೃಷಿ ಬಜೆಟ್‌ನಲ್ಲಿ  ನೂರು ಕೋಟಿ ಮೀಸಲಿಡಬೇಕು ಎಂದು ಅವರು ಆಗ್ರಹಿಸಿದರು.

ಆಪ್ಸ್‌ಕೋಸ್ ಅಧ್ಯಕ್ಷ ಆರ್.ಎಸ್. ಗಿರಿ, ಟಿಎಪಿಎಂಸಿಎಸ್ ಅಧ್ಯಕ್ಷ ಎಂ.ಸಿ. ರತ್ನಾಕರಗೌಡ, ಕೃಷಿಕ ಸಮಾಜದ ಕೆ.ಸಿ. ದೇವಪ್ಪ, ಎಪಿಎಂಸಿ ಅಧ್ಯಕ್ಷ ಸಿ.ಜೆ. ಮಂಜಪ್ಪ, ಎಂ. ಹರನಾಥರಾವ್, ಯು.ಎಚ್. ರಾಮಪ್ಪ, ಸಿ. ಗೋಪಾಲಕೃಷ್ಣರಾವ್, ಎಂ.ಜಿ. ದೀನದಯಾಳ್, ಜಗದೀಶ್‌ಗೌಡ, ಕೆ.ಎಸ್. ಸುಬ್ರಾವ್, ಸೀತಾರಾಮ್ ಕಟ್ಟಿನಕೆರೆ, ಟಿ.ಎಸ್. ಚಂದ್ರಶೇಖರ್, ವ.ಶಂ. ರಾಮಚಂದ್ರಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.