ADVERTISEMENT

‘ನಿಷ್ಠಾವಂತನಿಗೆ ಜವಾಬ್ದಾರಿ’

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 13:21 IST
Last Updated 18 ಜೂನ್ 2018, 13:21 IST

ಶಿವಮೊಗ್ಗ: ‘36 ವರ್ಷ ಪಕ್ಷದ ವಿವಿಧ ಹಂತಗಳಲ್ಲಿ ಯಾವುದೇ ಅಧಿಕಾರ ಪಡೆಯದೆ ಕೆಲಸ ಮಾಡಿದ್ದೇನೆ. ಪಕ್ಷ ಇದನ್ನು ಗಮನಿಸಿ ಈಗ ಈ ಜವಾಬ್ದಾರಿ ನೀಡಿದೆ’ ಎಂದು ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ ಭಂಡಾರಿ ತಿಳಿಸಿದರು.

‘ಪಕ್ಷದ ಹೈಕಮಾಂಡ್‌ ಮನವಿ ಮೇರೆಗೆ ಬಹಳಷ್ಟು ಕಾಲ ಉತ್ತರ ಭಾರತದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ. 1984ರ ನಂತರ ಶಿವಮೊಗ್ಗ ಕ್ಷೇತ್ರದ ಯಾವುದೇ ಚುನಾವಣೆ ನಡೆದರೂ ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೆ’ ಎಂದು ಅವರು ಸೋಮವಾರ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

‘2004ರಲ್ಲಿ ಆರ್‌ವಿಕೆ ಯೋಜನೆಯಡಿ ಕಂಪ್ಯೂಟರ್‌ ಆಪರೇಟರ್‌ ನೇಮಕಕ್ಕೆ ಸೋನಿಯಾ ಗಾಂಧಿ ಅವರಿಗೆ ಪ್ರಸ್ತಾವ ಸಲ್ಲಿಸಿದ್ದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿ ₨6ಸಾವಿರ ಕೋಟಿ ಅನುದಾನ ನೀಡಿತ್ತು. ಹಾಗೆಯೇ, ಆಧಾರ್‌ ಯೋಜನೆಯನ್ನು ಮೊಟ್ಟಮೊದಲಿಗೆ ರೂಪಿಸಿದ್ದೇ ತಾವು. ಅಲ್ಲದೇ, ಜಿಲ್ಲೆಗೆ ಸಾಯಿ ಯೋಜನೆ ತರಲು ಬಹಳಷ್ಟು ಪ್ರಯತ್ನ ಮಾಡಲಾಯಿತು. ಆಗಿನ ರಾಜ್ಯ ಸರ್ಕಾರ ಸಾಯಿ ಅವರಿಗೆ ಜಾಗ ನೀಡದಿರುವುದರಿಂದ ಯೋಜನೆ ಸ್ಥಗಿತಗೊಂಡಿತು’ ಎಂದು ದೂರಿದರು.

ತಲೆಕೆಡಿಸಿಕೊಂಡಿಲ್ಲ
‘ನನ್ನ ಎದುರಾಳಿ ಯಾರು ಎಂಬ ಬಗ್ಗೆ ತಲೆಕೆಡಿಸಿಕೊಂಡಿಲ್ಲ. 126 ವರ್ಷ ಇತಿಹಾಸ ಇರುವ ಪಕ್ಷದ ಅಭ್ಯರ್ಥಿ ನಾನು ಅಷ್ಟೇ’ ಎಂದು ಮಂಜುನಾಥ ಭಂಡಾರಿ ಪ್ರತಿಕ್ರಿಯಿಸಿದರು.

ಕುಮಾರ್‌ ಬಂಗಾರಪ್ಪ ಅವರ ಅಸಮಾಧಾನ ಪಕ್ಷದ ಗೆಲುವಿಗೆ ಅಡ್ಡಿಯಾಗುತ್ತದೆಯೇ? ಎಂಬ ಪ್ರಶ್ನೆಗೆ,  ‘ಪಕ್ಷದ ಮುಖಂಡರು ಅವರೊಂದಿಗೆ ಮಾತನಾಡಿ ಬಿಕ್ಕಟ್ಟು ಪರಿಹಾರ ಮಾಡುತ್ತಾರೆ’. ಎಂದರು.

‘ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ. ಸಮುದಾಯ ಪ್ರಕಾರ ಮತ ಕೇಳುವುದಿಲ್ಲ. ಎಲ್ಲಾ ಜಾತಿ, ಜನಾಂಗದಲ್ಲೂ ಕಾಂಗ್ರೆಸ್‌ ಬೆಂಬಲಿಸುವವರಿದ್ದಾರೆ’ ಎಂದು ಸೂಚ್ಯವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT