ADVERTISEMENT

ನೀತಿ ಸಂಹಿತೆ ಉಲ್ಲಂಘಿಸಿದರೆ ಮೊಕದ್ದಮೆ ದಾಖಲು

ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಲೋಕೇಶ್

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 11:00 IST
Last Updated 27 ಮಾರ್ಚ್ 2018, 11:00 IST

ಶಿವಮೊಗ್ಗ: ಚುನಾವಣೆ ಘೋಷಣೆಯಾದ ಕ್ಷಣದಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಲಿದ್ದು, ನೀತಿ ಸಂಹಿತೆ ಉಲ್ಲಂಘಿಸುವ ಪ್ರಕರಣಗಳಲ್ಲಿ ನಿರ್ದಾಕ್ಷಿಣ್ಯವಾಗಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಲೋಕೇಶ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಆಯೋಜಿಸ ಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಚುನಾವಣೆ ಘೋಷಣೆಯಾದ ತಕ್ಷಣ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಎಲ್ಲಾ ಪ್ರಚಾರ ಸಾಮಗ್ರಿ ತೆರವುಗೊಳಿಸಬೇಕು. ಇದೇ ರೀತಿ ಖಾಸಗಿ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕಾಣುವಂತಹ ಪಕ್ಷಗಳ ಗುರುತುಗಳನ್ನು ಅಳಿಸಿ ಹಾಕಬೇಕು. ಇಲ್ಲದಿದ್ದರೆ ಅದರ ವೆಚ್ಚವನ್ನು ಆಯಾ ಪಕ್ಷದ ಅಭ್ಯರ್ಥಿಯ ಖಾತೆಗೆ ಸೇರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ಆನ್‌ಲೈನ್ ಅರ್ಜಿ: ಈ ಬಾರಿ ಚುನಾವಣಾ ಆಯೋಗ ಪ್ರಚಾರ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದೆ. ಇದಕ್ಕಾಗಿ ಸುಗಮ ಹಾಗೂ ಸುವಿಧಾ ಎಂಬ ಹೆಸರಿನಲ್ಲಿ ಎರಡು ಆ್ಯಪ್‌ಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಕಡ್ಡಾಯವಾಗಿ ಇದರ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಪ್ರಥಮವಾಗಿ ಅರ್ಜಿ ಸಲ್ಲಿಸುವವರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಚುನಾವಣಾ ವೆಚ್ಚ ಸಲ್ಲಿಕೆ: ಈ ಬಾರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗೆ ಖರ್ಚಿನ ಗರಿಷ್ಠ ಮಿತಿಯನ್ನು ಚುನಾವಣಾ ಆಯೋಗ ₹ 28 ಲಕ್ಷ ನಿಗದಿಪಡಿಸಿದೆ. ಪ್ರಚಾರ ಕಾರ್ಯದಲ್ಲಿ ಬಳಸುವ ಪ್ರತಿಯೊಂದು ಸಾಮಗ್ರಿಗಳಿಗೆ ದರ ನಿಗದಿಪಡಿಸಲಾಗಿದ್ದು, ಪ್ರತಿಯೊಂದು ಖರ್ಚಿನ ಲೆಕ್ಕವನ್ನು ನೀಡಬೇಕು ಎಂದು ಹೇಳಿದರು.

ಸುದ್ದಿಗಾಗಿ ಕಾಸು: ಮತದಾರರ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಅಭ್ಯರ್ಥಿ ಅಥವಾ ಪಕ್ಷಗಳ ಪರವಾಗಿ ಸುದ್ದಿಯನ್ನು ಪ್ರಕಟಿಸುವುದು, ಸುದ್ದಿ ರೂಪದಲ್ಲಿ ಜಾಹೀರಾತು ಪ್ರಕಟಿಸುವುದು ಇತ್ಯಾದಿಗಳನ್ನು ಪರಿಶೀಲಿಸಲು ಜಿಲ್ಲಾ ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಟಿ.ವಿ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಅಂತಹ ಪ್ರಕರಣಗಳನ್ನು ಪರಿಶೀಲಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುದ್ರಕರಿಗೆ ಸೂಚನೆ: ಯಾವುದೇ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸುವ ಪೂರ್ವದಲ್ಲಿ ಸಮಿತಿಗೆ ಅರ್ಜಿ  ಸಲ್ಲಿಸಿ ಅನುಮೋದನೆಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆದಿರಬೇಕು. ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾತ್ರವಲ್ಲದೆ ಸೋಷಿಯಲ್ ಮೀಡಿಯಾಗಳಲ್ಲಿ ಇನ್ನೊಂದು ಪಕ್ಷದ ಅಭ್ಯರ್ಥಿಯನ್ನು ವೈಯಕ್ತಿಕವಾಗಿ ಅವಹೇಳನ ಮಾಡುವ, ಸಾಮಾಜಿಕ ಸಾಮರಸ್ಯ ಕೆಡಿಸುವ ಪೋಸ್ಟ್‌ಗಳನ್ನು ಹಾಕಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಹುಲ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.