ಶಿವಮೊಗ್ಗ: ಬೋರ್‌ವೆಲ್ ಇದೆ, ಆದರೆ ನೀರಿಲ್ಲ. ಮನೆ ಎದುರೇ ವಿದ್ಯುತ್ ತಂತಿ ಹಾದು ಹೋಗಿದೆ. ಆದರೆ, ಇವರ ಮನೆ ಬೆಳಗುತ್ತಿಲ್ಲ. ಮನೆ ಅಂಗಳವೇ ರಾಷ್ಟ್ರೀಯ ಹೆದ್ದಾರಿ, ಆದರೆ, ಬಸ್ಸು ನಿಲ್ಲುವುದಿಲ್ಲ. ರಸ್ತೆ, ಚರಂಡಿ ಇಲ್ಲವೇ ಇಲ್ಲ.
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಶಿವಮೊಗ್ಗ ನಗರದಿಂದ ಕೇವಲ 10 ಕಿ.ಮೀ. ದೂರದ ಊರೆಂಬ 20 ಮುರುಕಲು ಜೋಪಡಿಗಳ ವೀರಗಾರನ ಬೈರನಕೊಪ್ಪದ ಕಥೆ-ವ್ಯಥೆ ಇದು.ಡಾಂಬರ್ ಫ್ಯಾಕ್ಟರಿ ಈ ಊರಿಗೆ ಇರುವ ಹಳೆಯ ಹೆಸರು. 50ರಿಂದ 60 ಜನಸಂಖ್ಯೆ ಇರುವ ಈ ಊರಿಗೆ ಯಾವುದೇ ನಾಗರಿಕ ಸೌಲಭ್ಯಗಳಿಲ್ಲ. ಕಳೆದ ಹದಿನೈದು ವರ್ಷಗಳಿಂದ ಇದೇ ಜಾಗದಲ್ಲಿ ವಾಸಿಸುತ್ತಿರುವ ಈ ನಿವಾಸಿಗಳ ರೋದನೆ ಯಾವ ಜನಪ್ರತಿನಿಧಿಗಳಿಗೂ ಇನ್ನೂ ತಟ್ಟಿಲ್ಲ.
ಆಯನೂರು ಗ್ರಾಮ ಪಂಚಾಯ್ತಿ ಯ ಗ್ರಾಮ ಠಾಣಾ ಜಾಗದಲ್ಲಿರುವ ಈ ಊರಿನಲ್ಲಿ ಲಂಬಾಣಿ, ದೀವರು, ಲಿಂಗಾಯತರು, ಭೋವಿ ಜನಾಂಗದ ಜನ ಹೆಚ್ಚಿನವರಿದ್ದಾರೆ. ಎಲ್ಲರದ್ದು ಕೂಲಿ ಕೆಲಸ.
ಕರೆಂಟ್ ಇಲ್ಲದಿರುವುದರಿಂದ ಬಹುತೇಕ ಮಕ್ಕಳು ಓದುವುದನ್ನೇ ನಿಲ್ಲಿಸಿವೆ. ಇನ್ನು ಕೆಲವರು ಆಯನೂರು, ಸಿರಿಗೆರೆ, ಶಿಕಾರಿಪುರದಲ್ಲಿ ಮಕ್ಕಳನ್ನು ಓದಲು ಬಿಟ್ಟಿದ್ದಾರೆ. ರಾತ್ರಿ ಆಗುತ್ತಿದ್ದಂತೆ ಇಲ್ಲಿ ಗಾಡಾಂಧಕಾರ ಕವಿಯುತ್ತದೆ. ಮನೆ ಅಂಗಳದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರಿಂದ ವಾಹನಗಳು ಆಪಘಾತವಾಗಿ ಯಾವಾಗ ಮನೆ ನುಗ್ಗುತ್ತವೆಯೋ ಎಂಬ ಭಯ ಈ ನಿವಾಸಿಗಳದ್ದು.
ಈ ಊರಿನ ರಸ್ತೆ ಎದುರಗಡೆಯೇ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ಅವರ ಮನೆ ಮತ್ತು ಫಾರಂಹೌಸ್ ಇವೆ. ಅವರ ಮನೆಯಲ್ಲೇ ಬಹಳಷ್ಟು ಜನ ಕೂಲಿ ಕೆಲಸ ಮಾಡುತ್ತಾರೆ. ಇವರ ಮನವಿಗೆ ಆಯನೂರು ಅವರಿಂದ ಭರವಸೆ ಸಿಗುತ್ತಲೇ ಇದೆ. ಆದರೆ, ಮೂಲಸೌಕರ್ಯ ಸಿಕ್ಕಿಲ್ಲ.
ಇಡೀ ಊರಿಗೆ ಆಯನೂರು ಅವರ ಫಾರಂಹೌಸ್‌ನ ಬಾವಿಯೇ ನೀರಿನ ಮೂಲ. ಕುಡಿಯುವುದರಿಂದ ಅಡುಗೆ, ಸ್ನಾನಕ್ಕೆ ಇಡೀ ಊರಿನ ಜನ ಈ ಬಾವಿ ನೀರನ್ನೇ ಆಶ್ರಯಿಸಿದ್ದಾರೆ. ಆಯನೂರು ಮಂಜುನಾಥ ನೀರಿನ ವಿಚಾರದಲ್ಲಿ ಧಾರಾಳತನ ಮೆರೆದಿದ್ದಾರೆ.
ಸಾಲದ್ದಕ್ಕೆ ಈ ಊರಿನಲ್ಲಿ ಮಿನಿ ಅಂಗನವಾಡಿ ಇದೆ. 15 ಮಕ್ಕಳು ಇದ್ದಾರೆ. ಆದರೆ, ಸೌಲಭ್ಯಗಳನ್ನು ಒದಗಿಸಿಲ್ಲ. ಈ ನಿವಾಸಿಗಳಿಗೆ ಗುರುತಿನ ಚೀಟಿ ಇದೆ. ಪಡಿತರ ಚೀಟಿಯೂ ಇದೆ. ಪ್ರತಿ ಚುನಾವಣೆ ಬಂದಾಗಲೂ ಅಭ್ಯರ್ಥಿಗಳಿಂದ ಭರವಸೆಗಳ ಮಹಾಪೂರ ಹರಿದು ಬರುತ್ತದೆ. ಗೆದ್ದು ಹೋದ ನಂತರ ಈ ಜನರ ಸಮಸ್ಯೆಗಳು ನೆನಪಿಗೆ ಬರುತ್ತಿಲ್ಲ.
`ಇದು, ಕೆರೆ ಅಂಗಳದ ಜಾಗ. ನಮಗೆ ಖಾತೆ ಮಾಡಿಕೊಟ್ಟಿಲ್ಲ. ಹಾಗಾಗಿ, ಕಂದಾಯ ಕಟ್ಟಿಸಿಕೊಳ್ಳುತ್ತಿಲ್ಲ. ನಮಗೆ ಇಲ್ಲೇ ಜಾಗ ಕೊಡಿ ಎಂದು ಕೇಳುತ್ತಿಲ್ಲ. ಬೇರೆ ಜಾಗ ತೋರಿಸಿದರೂ ಸಾಕು; ಅಲ್ಲಿಗೆ ಹೋಗುತ್ತೇವೆ~ ಎನ್ನುತ್ತಾರೆ ಚಂದ್ರನಾಯ್ಕ.
`ಮಳೆಗಾಲದಲ್ಲಿ ಇಡೀ ಊರಿಗೇ ನೀರು ಆವರಿಸಿಕೊಳ್ಳುತ್ತದೆ. ಕರೆಂಟ್ ಇಲ್ಲದಿರುವುದರಿಂದ ಹಾವು ಸೇರಿದಂತೆ ಹುಳು-ಹುಪ್ಪಟೆಗಳು ಮನೆ ಒಳಗೆ ಸೇರಿಕೊಳ್ಳುತ್ತವೆ. ಇಲ್ಲಿ ಬದುಕು ಕಷ್ಟವಾಗಿದೆ~ ಎಂಬ ದುಃಖಿಸುತ್ತಾರೆ ಶಂಕರಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.