ADVERTISEMENT

ಪಂಚಾಯ್ತಿ ವಿಧೇಯಕ ರದ್ದತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 11:05 IST
Last Updated 15 ಜೂನ್ 2013, 11:05 IST

ಶಿವಮೊಗ್ಗ: ಸಭೆ ನಡೆಸದ ಗ್ರಾಮ ಪಂಚಾಯ್ತಿ ಸದಸ್ಯರನ್ನು ಅನರ್ಹಗೊಳಿಸುವ ಸರ್ಕಾರದ ವಿಧೇಯಕ  ಜನವಿರೋಧಿಯಾಗಿದ್ದು, ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ತಕ್ಷಣವೇ ಪಂಚಾಯತ್ ರಾಜ್ ಕಾಯ್ದೆಗೆ ತಂದಿರುವ ಈ ತಿದ್ದುಪಡಿ ರದ್ದುಪಡಿಸಬೇಕು ಎಂದು ಬಿಜೆಪಿ  ಒತ್ತಾಯಿಸಿದೆ.

ಸೂಕ್ತ ಸಮಯದಲ್ಲಿ ಸಾಮಾನ್ಯ ಸಭೆ ಹಾಗೂ ವಾರ್ಡ್ ಸಭೆ ನಡೆಸದ ಗ್ರಾ.ಪಂ. ಅಧ್ಯಕ್ಷ, ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಅಧಿಕಾರ ಅಧಿಕಾರಿಗಳಿಗೆ ನೀಡಿದ್ದು ಸರಿಯಲ್ಲ. ಇದು ವಿಕೇಂದ್ರೀಕರಣ ವ್ಯವಸ್ಥೆಗೆ ಮಾರಕವಾಗಿದೆ ಎಂದು ಬಿಜೆಪಿ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯರೂ ಆದ ಆಯನೂರು ಮಂಜುನಾಥ ಟೀಕಿಸಿದರು.

ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿ ವಿರೋಧಪಕ್ಷಗಳ ಆಕ್ಷೇಪದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ಪಡೆದುಕೊಂಡಿದ್ದಾರೆ. ಆದರೆ, ವಿಧಾನ ಪರಿಷತ್‌ನಲ್ಲಿ ವಿಧೇಯಕ ಮಂಡನೆ ಮಾಡಿಲ್ಲ. ತರಾತುರಿಯಲ್ಲಿ ಅಧಿವೇಶನ ಮುಕ್ತಾಯಗೊಳಿಸಿದ್ದಾರೆ. ಅಲ್ಲದೇ, ವಿಧೇಯಕವನ್ನು ವಿಧಾನ ಪರಿಷತ್‌ಗೆ ತರದೇ ಅವಮಾನ ಮಾಡಿದ್ದಾರೆ ಎಂದು ದೂರಿದರು.

ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿಗಳಲ್ಲಿ ಕಾಲಮಿತಿ ಒಳಗೆ ಸಭೆ ನಡೆಸದಿದ್ದರೆ ಅಲ್ಲಿನ ಸದಸ್ಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆದರೆ, ಗ್ರಾ.ಪಂ. ಸದಸ್ಯರಿಗೆ ಮಾತ್ರ ಅನರ್ಹತೆಯ ಶಿಕ್ಷೆ ಏಕೆ ಎಂದು ಅವರು ಪ್ರಶ್ನಿಸಿದರು.

ಮಂಡನೆ ಸಂದರ್ಭದಲ್ಲಿ ವಿಧಾನಸಭಾ ಅಧ್ಯಕ್ಷರೇ ಇದನ್ನು ನೋಡಿಕೊಂಡು ತನ್ನಿ ಎಂದು ಸಲಹೆ ಮಾಡಿದರು. ಒಟ್ಟಾರೆ ಇದೊಂದು ರಾಜಕೀಯ ದುಷ್ಟ ಆಲೋಚನೆಯಾಗಿದೆ. ಪೂರ್ವ ತಯಾರಿಯಿಲ್ಲದೆ ಈ ತಿದ್ದುಪಡಿ ಮಂಡಿಸಲಾಗಿದೆ. ಈ ಸಂಬಂಧ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯ್ತಿ ಸದಸ್ಯರ ಸಮಾವೇಶ ಕರೆದು, ಪ್ರತಿಭಟನೆ ನಡೆಸಲಾಗುವುದು ಎಂದರು.

ಅಕ್ಕಿ ವಿತರಣೆಯಲ್ಲಿ ಮಾರ್ಪಾಡು ಸರಿ ಅಲ್ಲ:ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಪಿಎಲ್ ಪಡಿತರ ಚೀಟಿದಾರರಿಗೆ ಈ ಹಿಂದಿದ್ದ ಯೂನಿಟ್ ಪದ್ಧತಿ ರದ್ದುಪಡಿಸಿ ಎಲ್ಲ ಬಿಪಿಎಲ್ ಕುಟುಂಬಗಳಿಗೆ ತಲಾ 30 ಕೆ.ಜಿ. ಅಕ್ಕಿ ವಿತರಣೆ ಮಾಡುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದ್ದರು. ಆದರೆ, ಇದೀಗ ಸಚಿವ ಸಂಪುಟ ಸಭೆಯಲ್ಲಿ ಒಬ್ಬರಿಗೆ 10 ಕೆ.ಜಿ. ಅಕ್ಕಿ ನೀಡುವ ಯೂನಿಟ್ ಪದ್ಧತಿ ಜಾರಿಗೊಳಿಸುವ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎಂದು ಟೀಕಿಸಿದರು.

ಈ ತೀರ್ಮಾನ ವಿಧಾನಸಭೆಗೆ ಮಾಡಿದ ಅವಮಾನ. ಈ ಹಿಂದೆ ನೀಡಿದ್ದ ಭರವಸೆಯಂತೆ ಪ್ರತಿ ಬಿಪಿಎಲ್ ಪಡಿತರದಾರರ ಕುಟುಂಬಗಳಿಗೆ 30 ಕೆ.ಜಿ. ಅಕ್ಕಿ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಡಾ ಮಾಜಿ ಅಧ್ಯಕ್ಷ ಗಿರೀಶ್ ಪಟೇಲ್, ಸೂಡಾ ಮಾಜಿ ಅಧ್ಯಕ್ಷ ಎಸ್.ದತ್ತಾತ್ರಿ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಬಿಜೆಪಿ ರೈತ ಮೋರ್ಚಾದ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಸಿ.ಬಸವರಾಜಪ್ಪ, ಪದಾಧಿಕಾರಿಗಳಾದ ಎನ್.ಜೆ.ರಾಜಶೇಖರ್, ಮಧುಸೂದನ್, ಡಿ.ಎಸ್.ಅರುಣ್, ಶ್ರೀನಾಥ ನಗರಗದ್ದೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.