ADVERTISEMENT

ಪಕ್ಷ ಬಿಟ್ಟವರಿಗೆ ಪಶ್ಚಾತಾಪ ಕಾದಿದೆ: ಅನಂತ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 8:14 IST
Last Updated 3 ಡಿಸೆಂಬರ್ 2012, 8:14 IST

ಶಿವಮೊಗ್ಗ: `ಪಕ್ಷ ಬಿಟ್ಟು ಹೋದವರು ಮುಂದೆ ಪಶ್ಚಾತಾಪ ಪಡುವುದು ನಿಶ್ಚಿತ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸತ್ ಸದಸ್ಯ ಅನಂತಕುಮಾರ್, ಯಡಿಯೂರಪ್ಪ ಕುರಿತು ಪ್ರತಿಕ್ರಿಯಿಸಿದರು.

ನಗರದ ಹೆಲಿಪ್ಯಾಡ್‌ನಲ್ಲಿ ಭಾನುವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜತೆಗಾರರು ಬಿಟ್ಟು ಹೋದಾಗ ನೋವಾಗುತ್ತದೆ. 40ವರ್ಷ  ಸಂಘರ್ಷಗಳನ್ನು ಹಂಚಿಕೊಂಡಿದ್ದೇವೆ. ಅವರು ಏಕೆ ಪಕ್ಷ ಬಿಟ್ಟು ಹೋಗಿದ್ದಾರೆ ಎಂಬುದು ಅವರಿಗೇ ಗೊತ್ತು. ಮುಂದೊಂದು ದಿನ ಅವರು ಪಶ್ಚಾತಾಪ ಪಡುತ್ತಾರೆ ಎಂದರು.

ಪಕ್ಷದಿಂದ ಹೊರಹೋಗಲು ಯಡಿಯೂರಪ್ಪ ತಮ್ಮನ್ನೇ ಗುರಿ ಮಾಡಿದ್ದರಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ, `ಅದನ್ನು ಮುಂದೆ ಜನ ಹೇಳುತ್ತಾರೆ. ತಾವು ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ' ಎಂದಷ್ಟೇ ಅನಂತ್‌ಕುಮಾರ್ ಪ್ರತಿಕ್ರಿಯಿಸಿದರು.

ಬಿಜೆಪಿ ಸಾಮೂಹಿಕ ನಾಯಕತ್ವ, ಕಾರ್ಯಕರ್ತರ ಆಧಾರಿತ ಪಕ್ಷ. ಇಡೀ ದೇಶದಲ್ಲಿ ಇಂದು ಕಾಂಗ್ರೆಸ್ ಬೇಡ, ಬಿಜೆಪಿ ಬೇಕು ಎಂಬ ವಾತಾವರಣವಿದೆ. ಅದೇ ರೀತಿ ರಾಜ್ಯದಲ್ಲೂ ಬಿಜೆಪಿಯ ಉತ್ತಮ ಆಡಳಿತದಿಂದಾಗಿ ಜನ ಮತ್ತೊಮ್ಮೆ ಬಿಜೆಪಿಗೆ ಬಹುಮತ ನೀಡಲು ತೀರ್ಮಾನಿಸಿದ್ದಾರೆ ಎಂದರು.

ನಂತರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲೆಗಳ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಕಾಂಗ್ರೆಸ್‌ವೊಂದೇ ನೇರ ಎದುರಾಳಿ. ಪ್ರಾದೇಶಿಕ ಪಕ್ಷಗಳು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಎ, ಬಿ, ಸಿ ಟೀಮ್‌ಗಳಾಗಿ ಪರಿವರ್ತನೆಯಾಗುತ್ತವೆ ಎಂದು ಮಾರ್ಮಿಕವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.