ADVERTISEMENT

ಪಟ್ಟಣ ಪಂಚಾಯ್ತಿ ಆದಾಯ ವೃದ್ಧಿಸಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 8:20 IST
Last Updated 18 ಅಕ್ಟೋಬರ್ 2012, 8:20 IST

ಸೊರಬ: ಪಟ್ಟಣ ಪಂಚಾಯ್ತಿಯನ್ನು ಪುರಸಭೆ ಮಾಡಲು ಆದಾಯ ವೃದ್ಧಿಸಬೇಕು. ಇಲ್ಲದಿದ್ದರೆ ಆರ್ಥಿಕ ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ಬರಬಹುದು ಎಂದು ಶಾಸಕ ಎಚ್. ಹಾಲಪ್ಪ ತಿಳಿಸಿದರು.

ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಸರ್ವೇ ನಂ.: 113ರ ನಿವಾಸಿಗಳಿಗೆ ತಾತ್ಕಾಲಿಕ ನಿರಾಕ್ಷೇಪಣಾ ಪತ್ರ ವಿತರಿಸಿ ಅವರು ಮಾತನಾಡಿದರು.

ರಸ್ತೆ ವಿಸ್ತರಣೆಗೆ ಅನುದಾನ ಲಭ್ಯವಿದ್ದು, ಈ ಹಿಂದೆ ನೀಡಿದ ಪರಿಹಾರವನ್ನೇ ನಂತರದ ವಿಸ್ತರಣೆಯಲ್ಲಿ ಮನೆ ಕಳೆದುಕೊಳ್ಳುವವರಿಗೆ ನೀಡ ಲಾಗುವುದು. ಅದಕ್ಕೆ ಸಹಕರಿಸದಿದ್ದರೆ ಬೇರೆ ಕಾಮಗಾರಿಗಳಿಗೆ ಅನುದಾನ ಬಳಸಿಕೊಳ್ಳಬೇಕಾಗುವುದು ಅನಿ ವಾರ್ಯ ಆಗುತ್ತದೆ.

ಆಂಜನೇಯ ದೇವಸ್ಥಾನದಿಂದ ರಂಗನಾಥ ದೇವಾಲಯದವರೆಗೆ ಮುಂದಿನ ಹಂತದ ರಸ್ತೆ ವಿಸ್ತರಣೆಗೆ ನಿವೇಶನ ಮಾಲೀಕರ ಸಭೆ ಕರೆದು ಚರ್ಚಿಸಲು ಸಭೆ ಕರೆಯುವಂತೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗೆ ತಿಳಿಸಿದರು. 

ವಾಣಿಜ್ಯ ಸಂಕೀರ್ಣದಲ್ಲಿ ಹರಾಜಾಗದೇ ಉಳಿದಿರುವ ಮಳಿಗೆಗಳನ್ನು ಬಹಿರಂಗ ಹರಾಜು ಮಾಡುವಂತೆ ತಿಳಿಸಿದರು.  ಬಗರ್‌ಹುಕುಂನಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡುವಂತೆ ತಾವು ಶಾಸನ ಸಭೆಯಲ್ಲಿ ರಾಜ್ಯಪಾಲರನ್ನು ಒತ್ತಾಯಿಸುವುದಾಗಿ ತಿಳಿಸಿದರು.

ಮುಖ್ಯಾಧಿಕಾರಿ ಜಿ.ಟಿ. ವೀರೇಶ್ ಕುಮಾರ್ ಮಾತನಾಡಿ, ಈಗ ನೀಡುತ್ತಿರುವ ನಿರಾಪೇಕ್ಷಣ ಪತ್ರ ವಾಸದ ಮನೆಗೆ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ನೀಡಲು ನೀಡಲಾಗಿದೆ. ಅದನ್ನು ಬಿಟ್ಟು ಸದರಿ ಸ್ವತ್ತಿನ ಯಾವುದೇ ಹಕ್ಕು ಭಾದ್ಯತೆ ಹೊಂದಲು ಅವಕಾಶ ಇರುವುದಿಲ್ಲ ಎಂದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ವಿಜಯಾ ಮಹಾಲಿಂಗಪ್ಪ, ಉಪಾಧ್ಯಕ್ಷ ಪ್ರಶಾಂತ ಮೇಸ್ತ್ರಿ, ಸದಸ್ಯರಾದ ಮಹೇಶಗೌಳಿ, ಗೌರಮ್ಮ ಭಂಡಾರಿ, ದಿನಕರಭಟ್ ಭಾವೆ, ಜಿ. ಕೆರಿಯಪ್ಪ, ರೇವಣಪ್ಪ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.