ADVERTISEMENT

ಪಡಿತರ ಕಾರ್ಡ್ ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 8:20 IST
Last Updated 13 ಏಪ್ರಿಲ್ 2012, 8:20 IST

ಭದ್ರಾವತಿ: ಪಡಿತರ ಚೀಟಿ ಇಲ್ಲದೆ ಭಾಗ್ಯಲಕ್ಷ್ಮೀ ಬಾಂಡ್ ನೀಡುವುದಿಲ್ಲ ಎನ್ನುತ್ತಾರೆ ಸಿಡಿಪಿಒ. ಹಾಗಾಗಿ, ಕೂಡಲೇ ಅಧಿಕೃತ ಕಾರ್ಡ್ ನೀಡಿ. ಇಲ್ಲವೇ ಈ ಸಮಸ್ಯೆ ಬಗೆಹರಿಸಿ ಎಂದು ಸದಸ್ಯ ಗಿರೀಶ್ ಎತ್ತಿದ ಪ್ರಶ್ನೆ  ಗುರುವಾರ ಜರುಗಿದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಹಲವು ತಿರುವುಗಳಿಗೆ ದಾರಿಯಾಯಿತು.

ಪಡಿತರ ಇಲಾಖೆ ಅಧಿಕಾರಿ ಧರ್ಮಪಾಲನ್ ಕಾರ್ಡ್ ವಿತರಣೆ ಕುರಿತಂತೆ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಪ್ರಶ್ನೆ ಹಾಕಿದ ಗಿರೀಶ್, ತಾತ್ಕಾಲಿಕ ಪಡಿತರ ಚೀಟಿಯನ್ನು ಸಿಡಿಪಿಒ ಕಚೇರಿ ಪರಿಗಣಿಸುತ್ತಿಲ್ಲ ಬೇಕಾದರೆ ಅವರನ್ನೇ ಕೇಳಿ ಎಂದು ಸಭೆಯಲ್ಲಿದ್ದ ಅಧಿಕಾರಿಯತ್ತ ಬೆರಳು ತೋರಿದರು.

ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಧರ್ಮಪಾಲನ್ `ನಾವು ನೀಡುವ ಪಡಿತರ ಚೀಟಿ ಆಹಾರಕ್ಕೆ ಮಾತ್ರ ಸೀಮಿತ. ಇದರಲ್ಲಿ ಗೊಂದಲವಿಲ್ಲ~ ಎಂದು ಹಾರಿಕೆ ಉತ್ತರ ನೀಡಲು ಮುಂದಾದರು. ಈ ಹಂತದಲ್ಲಿ ಸದಸ್ಯರಾದ ಶ್ರೀನಿವಾಸ್, ನಂಜುಂಡೇಗೌಡ, ದೇವೇಂದ್ರನಾಯ್ಕ, ಹಾಗಾದರೆ ಭಾಗ್ಯಲಕ್ಷ್ಮೀ ಬಾಂಡ್‌ಗೆ ಬೇಕು ಅನ್ನುವ ಬೇಡಿಕೆಗೆ ಸ್ಪಷ್ಟ ಉತ್ತರ ನೀಡಿ ಎಂದು ಆಗ್ರಹಿಸಿದರು.

ಸಿಡಿಪಿಒ ಚಂದ್ರಪ್ಪ, ಈ ಬಾಂಡ್‌ಗೆ ರೇಷನ್‌ಕಾರ್ಡ್ ಕಡ್ಡಾಯ, ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ. ಅದು ಇಲ್ಲದೆ ಇದ್ದರೆ ಬಾಂಡ್ ನೋಂದಣಿ ಸಾಧ್ಯವಿಲ್ಲ ಎಂದರು. ಇದಕ್ಕೆ ಧರ್ಮಪಾಲ್ ತಾತ್ಕಾಲಿಕ ಚೀಟಿಗೆ ದೃಢೀಕೃತ ಮಾಡುತ್ತೇವೆ ಬಳಸಿಕೊಳ್ಳಿ ಎಂದು ಮಾಡಿದ ಮನವಿಗೆ, ಮೇಲಧಿಕಾರಿಗಳ ಆದೇಶದಂತೆ ಕಾರ್ಡ್ ಕಡ್ಡಾಯ ಎಂದು ಚಂದ್ರಪ್ಪ ಪ್ರತಿಪಾದಿಸಿದರು.

ಸರ್ಕಾರದ ವ್ಯವಸ್ಥೆಯಲ್ಲಿ ಆಗಿರುವ ಲೋಪ ಕುರಿತಂತೆ ಜಿಲ್ಲಾ ಪಂಚಾಯ್ತಿ ಹಾಗೂ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ಪಡೆಯಿರಿ ಎಂದು ಸದಸ್ಯರು ಆಗ್ರಹಿಸಿದರು. ಇದಕ್ಕೆ ಎರಡೂ ಇಲಾಖೆ ಅಧಿಕಾರಿಗಳು ಸ್ಪಂದಿಸುವ ಭರವಸೆ ವ್ಯಕ್ತಪಡಿಸಿದರು.

ನಾಲೆಯ ಮಣ್ಣು ಹಾಗೂ ಬೋರ್ಡಸ್ ಕಾನೂನುಬಾಹಿರ ಸಾಗಣೆ ನಡೆದಿದೆ ಎಂದು ಸದಸ್ಯ ಶ್ರೀನಿವಾಸ್, ಕಾಲುವೆ ಮೋರಿ ದುರಸ್ತಿಯಾಗಿಲ್ಲ ಎಂದು ದೇವೇಂದ್ರ ನಾಯ್ಕ, ನಾಲೆಗಳಿಗೆ ಮೆಟ್ಲಿಂಗ್ ಮಾಡದ ಕಾರಣ ಜಾನುವಾರುಗಳು ನೀರು ಕುಡಿಯಲು ಪರದಾಡುವ ಸ್ಥಿತಿ ಎಂದು ಪಾರ್ವತಿಬಾಯಿ, ಗೌರಮ್ಮ ಎಂಜಿನಿಯರ್ ಪುಲ್ಲಯ್ಯ ಅವರ ಗಮನ ಸೆಳೆದರು.

ವೆುಸ್ಕಾಂ ಅಧಿಕಾರಿಗಳು ವಿದ್ಯುತ್ ಕಂಬ, ವಿದ್ಯುತ್ ಪರಿವರ್ತಕ, ತಂತಿ ಭದ್ರತೆ ಮಾಡಿಲ್ಲ ಎಂದು ದೇವೇಂದ್ರ ನಾಯ್ಕ ಅವರ ಪ್ರಶ್ನೆಗೆ, ಅಧಿಕಾರಿ ಚನ್ನಬಸಪ್ಪ ವಿವರಣೆ ನೀಡಲು ಮುಂದಾಗುವ ಜತೆಗೆ, ಕುಡಿಯುವ ನೀರು ವಿತರಣೆಗೆ 10 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಿರುವುದಾಗಿ ಹೇಳಿದರು.

ಗ್ಯಾಸ್ ವಿತರಣೆ ಮಾಲೀಕರು ಹೊಸ ಸಂಪರ್ಕಕ್ಕೆ ಹತ್ತಾರು ವಸ್ತು ಖರೀದಿ ಮಾಡುವಂತೆ ಒತ್ತಾಯಿಸುತ್ತಾರೆ ಇದಕ್ಕೆ ನಿಮ್ಮ ಇಲಾಖೆ ಕಡಿವಾಣ ಹಾಕಲು ಅಧಿಕಾರ ಇಲ್ಲವೇ? ಎಂದು ಉಪಾಧ್ಯಕ್ಷ ಶಾಂತಕುಮಾರ್ ಪಡಿತರ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಅವರು, ಈ ಕುರಿತು ವಾರದಲ್ಲಿ ಎಲ್ಲಾ ಗ್ಯಾಸ್ ವಿತರಣೆ ಮಾಲೀಕರ ಸಭೆ ಕರೆದು ಚರ್ಚೆ ಮಾಡಿ ವರದಿ ನೀಡುವುದಾಗಿ  ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಸಭೆಗೆ ಬಾರದ ವಿವಿಧ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಹಾಗೂ ಭದ್ರಾ ಎಡನಾಲೆ ಕಾಮಗಾರಿ ಪ್ರಶ್ನೆಗೆ ಉತ್ತರಿಸಲು ಮಲೇಬೆನ್ನೂರು ಭಾಗದ ಎಂಜಿನಿಯರ್‌ಗೆ ಸಭಾ ತಿಳಿವಳಿಕೆ ನೀಡುವಂತೆ ಸದಸ್ಯರು ಒತ್ತಾಯಿಸಿದರು.

ತಾ.ಪಂ ಅಧ್ಯಕ್ಷ ಆರ್. ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯ ನಿರ್ವಹಣಾಧಿಕಾರಿ ಎಂ. ಮಲ್ಲೇಶಪ್ಪ, ಉಪಾಧ್ಯಕ್ಷ ಶಾಂತಕುಮಾರ್ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಸೋಮಶೇಖರ್, ಕೃಷಿ ಇಲಾಖೆಯ ಬಸವರಾಜ್, ತೋಟಗಾರಿಕೆ ಕಾಂತರಾಜ್, ಮೀನುಗಾರಿಕೆ ಇಲಾಖೆ ರಾಘವೇಂದ್ರ ಸಭೆಯಲ್ಲಿ ಹಾಜರಿದ್ದು, ಇಲಾಖೆಯ ಪ್ರಶ್ನೆಗಳಿಗೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.