ADVERTISEMENT

ಪಶುವೈದ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 10:46 IST
Last Updated 25 ಜೂನ್ 2013, 10:46 IST

ತೀರ್ಥಹಳ್ಳಿ: ತಾಲ್ಲೂಕಿನ ಪಶುವೈದ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಲಭ್ಯ ಇರುವ ಸಿಬ್ಬಂದಿಯಿಂದ  ಸಮರ್ಪಕ ಸೇವೆ ರೈತರಿಗೆ ಸಿಗುತ್ತಿಲ್ಲ. ಇದರಿಂದಾಗಿ ಮಳೆಗಾಲದಲ್ಲಿ ಕಾಡುವ ರೋಗಗಳಿಂದ ಜಾನುವಾರುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿಮಾರ್ಣವಾಗಿದೆ.

ಸಿಬ್ಬಂದಿ ಕೊರತೆಯಿಂದಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳವ  ಕಾಲು ಬಾಯಿ ಜ್ವರ, ಕೊಕ್ಕರೆ ರೋಗ, ಗಳಲೆ, ತಂಡಿ ರೋಗಗಳಿಗೆ ಮುಂಜಾಗ್ರತಾ ಕ್ರಮವಾಗಿ ಹಾಕಬೇಕಾದ ಲಸಿಕೆ ಚಿಕಿತ್ಸೆ ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದಾಗಿ ಅವನತಿಯ ಹಾದಿ ತುಳಿದ ವಿಶಿಷ್ಟ ತಳಿ `ಮಲೆನಾಡು ಗಿಡ್ಡ' ತಳಿಗಳು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿವೆ.

ತಾಲ್ಲೂಕಿನಲ್ಲಿ ಒಟ್ಟು 62 ಸಿಬ್ಬಂದಿ ಕೊರತೆ ಇದ್ದು,  6 ಪಶುವೈದ್ಯರು ಹಾಗೂ ಇತರೆ ಸಿಬ್ಬಂದಿ ಪೈಕಿ 56 ಹುದ್ದೆಗಳು ಖಾಲಿ ಇವೆ. ತೀರ್ಥಹಳ್ಳಿ ಪಶು ಆಸ್ಪತ್ರೆ, ಸಂಚಾರಿ ಪಶು ಚಿಕಿತ್ಸಾಲಯ ತೀರ್ಥಹಳ್ಳಿ, ಸಾಲೂರು, ಆರಗ, ಗುಡ್ಡೇಕೊಪ್ಪ, ಯೋಗಿಮಳಲಿ, ಬಾವಿಕೈಸರು, ಕೋಣಂದೂರು, ಅರಳಸುರಳಿ, ತಳಲೆ, ಗುತ್ತಿಯಡೇಹಳ್ಳಿ, ಕನ್ನಂಗಿ, ತೂದೂರು ಮಾಳೂರು ಗಬಡಿ, ಮಂಡಗದ್ದೆ, ಮರೇಹಳ್ಳಿ ಬಿಸಿಲುಮನೆ, ಮೇಗರವಳ್ಳಿ, ನಾಲೂರು, ಕಲ್ಮನೆ, ಆರೇಹಳ್ಳಿ, ಆಗುಂಬೆ, ಕುಡುಮಲ್ಲಿಗೆ, ದೇವಂಗಿ, ಕಟ್ಟೆಹಕ್ಕಲು, ಹೆದ್ದೂರು, ಹಾರೋಗೊಳಿಗೆ ಹಾಗೂ ಬಸವಾನಿಯ ಪ್ರಾಥಮಿಕ ಪಶು ಚಿಕಿತ್ಸಾಲಯದಲ್ಲಿ ನೆಪಮಾತ್ರದ ಕೆಲಸಗಳು ನಡೆಯುತ್ತಿವೆ.

ಇವುಗಳಲ್ಲಿ ಕೆಲವು ಕೇಂದ್ರಗಳ ಬಾಗಿಲನ್ನು ತೆರೆಯುವುದೂ ಕೂಡ ಸಾಧ್ಯವಾಗುತ್ತಿಲ್ಲ. ಜಾನುವಾರುಗಳಿಗೆ ರೋಗ ತಗುಲಿದರೆ ಅವು ಇರುವ ಸ್ಥಳಕ್ಕೆ ವೈದ್ಯರು ಹೋಗ ಬೇಕಾಗಿರುವುದರಿಂದ ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಹಾಜರಿರುವುದು ಕಷ್ಟ ಸಾಧ್ಯದ ಕೆಲಸವಾಗಿದೆ.

ಸಹಾಯಕ  ನಿರ್ದೇಶಕರ 1 ಹುದ್ದೆ, 20 ಪಶುವೈದ್ಯಾಧಿಕಾರಿಗಳು, 1 ಜಾನುವಾರು ಅಧಿಕಾರಿಗಳು, 18 ಹಿರಿಯ ಪಶುವೈದ್ಯಕೀಯ ಪರೀಕ್ಷಕರು, 19 ಪಶುವೈದ್ಯಕೀಯ ಪರೀಕ್ಷಕರು, 16 ಪಶುವೈದ್ಯಕೀಯ ಸಹಾಯಕರು 1 ವಾಹನ ಚಾಲಕರು ಹಾಗೂ 59 ಡಿ ದರ್ಜೆಯ ನೌಕರರ ಹುದ್ದೆಗಳು ಮಂಜೂರಾಗಿವೆ. ಜಾನುವಾರು ಆಸ್ಪತ್ರೆಗೆ ಹೋದರೆ ವೈದ್ಯರು ಸಿಗುತ್ತಿಲ್ಲ. ಊರಿನಲ್ಲಿಯೇ ಆಸ್ಪತ್ರೆ ಇದ್ದರೂ ಅದರ ಉಪಯೋಗಕ್ಕೆ ಬಾರದಂತಾಗಿದೆ. ಜಾನುವಾರುಗಳಿಗೆ ಕಾಯಿಲೆ ಬಂದರೆ ಅವುಗಳಿಗೆ ಚಿಕಿತ್ಸೆ ಕೊಡಿಸಲು ಆಗುತ್ತಿಲ್ಲ ಎನ್ನುತ್ತಾರೆ ರೈತ ಜಯರಾಜ್.

ಮಂಜೂರಾದ ಹುದ್ದೆಗಳಿಗೆ ಸಿಬ್ಬಂದಿ ನೇಮಕವಾಗದೇ ಇರುವುದು ಸಮಸ್ಯೆಯನ್ನು ಹೆಚ್ಚಿಸಿದೆ.
ದೇಸಿ ಜಾನುವಾರು ತಳಿಯ ಉಳಿವು, ಹೈನುಗಾರಿಕೆಗೆ ನೀಡಬೇಕಾಗಿರುವ ಉತ್ತೇಜನ ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.