ADVERTISEMENT

ಪಾದ ಒತ್ತಿ ಹಿಡಿದಾಗ ಬರುವ ರಸವೇ ಪಾದರಸ..

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 10:00 IST
Last Updated 5 ಜನವರಿ 2012, 10:00 IST

ಶಿವಮೊಗ್ಗ: ಪಾದರಸ ಎಂದರೆ ಯಾವುದು..?  `ಪಾದವನ್ನು ಒತ್ತಿ ಹಿಡಿದಾಗ ಬರುವ ರಸವೇ ಪಾದರಸ..~
ಮೂಲವಸ್ತು ಎಂದರೆ ಯಾವುದು..? `ಮನೆಯ ಮೂಲೆಯಲ್ಲಿರುವ ಕಸಪರಿಕೆ, ಪಾತ್ರೆಪಗಡಗಳೆ ಮೂಲವಸ್ತುಗಳು..~

-ಇಂತಹ ರಸವತ್ತಾದ ನಗೆಹನಿಗಳು ತೇಲಿಬಂದದ್ದು ಇಂದುಮತಿ ಸಾಲಿಮಠ ಅವರಿಂದ.
ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಿ.ಎಚ್. ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸಿದರು.
ಇಂದಿನ ಕೆಲವು ಮಕ್ಕಳು ಓದುವಿಕೆಯಲ್ಲಿ ಹಿಂದೆ ಇದ್ದರೂ ಇತರೆ ವಿಷಯಗಳಲ್ಲಿ ಭಾರಿ ಪಂಟರಿರುತ್ತಾರೆ ಎನ್ನುವುದಕ್ಕೆ ಉದಾಹರಣೆ ಸಹಿತ ಹೇಳಿದರು.

ವಿದ್ಯಾರ್ಥಿ ಜೀವನ ಕೇವಲ ಓದುವಿಕೆಯೊಂದೇ ಆಗದೇ, ಹಾಸ್ಯ ಪ್ರವೃತ್ತಿ ಸಹ ಬೆಳೆಸಿಕೊಳ್ಳಬೇಕು. ಬದುಕುವುದಕ್ಕೆ ನೂರಾರು ದಾರಿಗಳುಂಟು. ಒಂದು ದಾರಿಯಲ್ಲಿ ಯಶಸ್ಸು ಸಿಗದಿದ್ದರೆ ಮತ್ತೊಂದು ದಾರಿಯತ್ತ ಸಾಗುವುದು ಬದುಕುವ ಲಕ್ಷಣ ಎಂದರು.

ಜೀವನ ಒಂದು ಅಮೂಲ್ಯ ಪುಸ್ತಕವಿದ್ದಂತೆ. ಅದರಲ್ಲಿ ಒಂದೆರಡು ಪುಟಗಳು ಹಾಳಾದರೆ ಕಿತ್ತು ಬಿಸಾಕಿ ಮುಂದೆ ಓದಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಮಾತನಾಡಿ, ಚಪ್ಪಾಳೆ ತಟ್ಟುವುದು ಸುಲಭ. ಆದರೆ, ಚಪ್ಪಾಳೆ ಗಿಟ್ಟಿಸುವುದಕ್ಕೆ ಪ್ರತಿಯೊಂದು ಕಾರ್ಯದಲ್ಲಿ ಶ್ರಮ, ಶ್ರದ್ಧೆ, ಆಸಕ್ತಿ ಇರಬೇಕು ಎಂದರು.

ಖಾಸಗಿ ಶಾಲೆಗಳಲ್ಲಿ ಡೊನೆಷನ್ ನೀಡಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗಿಂತ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತಂದಿರುವುದು ಶ್ಲಾಘನೀಯ ಎಂದ ಅವರು, ವಿದ್ಯಾರ್ಥಿಗಳು ಈಗಿನಿಂದಲೇ ಹೆಚ್ಚು ಶ್ರಮವಹಿಸಿ ಉತ್ತಮ ಅಂಕ ಪಡೆದು ಪಾಸಾದರೆ ಮಾತ್ರ, ಮುಂದಿನ ಜೀವನವೆಂಬ ಪರೀಕ್ಷೆಯಲ್ಲಿ ಪಾಸಾಗುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪರಮಶಿವಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ಮಧುಸೂದನ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಕಮಲಾಕರ, ಸರ್ಕಾರಿ ಪ್ರೌಢಶಾಲೆ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಬಿ.ಎನ್. ತಿಮ್ಮಪ್ಪಯ್ಯ, ರಂಗಾಯಣ ಶಿವಮೊಗ್ಗ ನಿರ್ದೇಶಕ ಹೊ.ನಾ. ಸತ್ಯ, ಸ.ಪ.ಪೂ ಕಾಲೇಜು ಪ್ರಾಚಾರ್ಯೆ ಎಸ್.ಆರ್. ಮಾಡ್ಯಾಳ್ ಮತ್ತಿತರರು ಉಪಸ್ಥಿತರಿದ್ದರು.

ನಕ್ಕು ನಲಿದ ಈಶ್ವರಪ್ಪ
ಇತ್ತೀಚಿನ ರಾಜಕೀಯ ಜಂಜಾಟಗಳಿಂದ ರೋಸಿಹೋಗಿ, ಕಾರ್ಯಕ್ರಮಗಳಲ್ಲಿ ಸದಾ ಗಂಭೀರ ವದನರಾಗಿರುತ್ತಿದ್ದ ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಬುಧವಾರ ವಾಗ್ಮಿ ಇಂದುಮತಿ ಸಾಲಿಮಠ ಅವರ ನಗೆ ಚಟಾಕಿಗಳಿಗೆ ಮನಸ್ಫೂರ್ತಿಯಾಗಿ ನಕ್ಕು ಹಗುರಾದರು.

ಇಂದುಮತಿ ಸಾಲಿಮಠ ಅವರ ಬತ್ತಳಿಕೆಯಿಂದ ಪ್ರಯೋಗಿಸುತ್ತಿದ್ದ ಪ್ರತಿಯೊಂದು ನಗೆಚಟಾಕಿಗೂ ಈಶ್ವರಪ್ಪ ಚಪ್ಪಾಳೆ ತಟ್ಟಿ, ಸಂಭ್ರಮಿಸಿದರಲ್ಲದೇ, ಅವರ ನಗೆಭಾಷಣ ಮುಗಿಯುವವರೆಗೂ ವೇದಿಕೆಯಲ್ಲಿ ಕುಳಿತು ಸಂಭ್ರಮಪಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT