ADVERTISEMENT

ಪೇಜಾವರ ಶ್ರೀಗಳಿಗೆ ಕಾಗೋಡು ಸವಾಲು

​ಪ್ರಜಾವಾಣಿ ವಾರ್ತೆ
Published 26 ಜನವರಿ 2011, 18:30 IST
Last Updated 26 ಜನವರಿ 2011, 18:30 IST
ಪೇಜಾವರ ಶ್ರೀಗಳಿಗೆ ಕಾಗೋಡು ಸವಾಲು
ಪೇಜಾವರ ಶ್ರೀಗಳಿಗೆ ಕಾಗೋಡು ಸವಾಲು   

ಶಿವಮೊಗ್ಗ: ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ದಲಿತರ ಕೇರಿಗಳಲ್ಲೇ ಊಟ ಮಾಡಿ, ಮಲಗಬೇಕು. ಆಗ ಮಾತ್ರ ಸ್ವಾಮೀಜಿ ಪಾದಯಾತ್ರೆ ಸಾರ್ಥಕವಾಗುತ್ತದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸವಾಲು ಹಾಕಿದರು.

ನಗರದ ಕರ್ನಾಟಕ ಸಂಘದಲ್ಲಿ ಗಣರಾಜೋತ್ಸವ ಅಂಗವಾಗಿ ಎನ್‌ಎಸ್‌ಯುಐ ಬುಧವಾರ ಹಮ್ಮಿಕೊಂಡಿದ್ದ ನಿರ್ಗತಿಕರಿಗೆ-ಭಿಕ್ಷುಕರಿಗೆ ಉಚಿತ ಕಂಬಳಿ ಹಾಗೂ ಹೊದಿಕೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮೀಜಿ, ದಲಿತರ ಕೇರಿಗಳಲ್ಲಿ ಪಾದಯಾತ್ರೆ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ, ಕೇವಲ ಪಾದಯಾತ್ರೆಯಿಂದ ಪ್ರಯೋಜನವಾಗುವುದಿಲ್ಲ. ಈ ನಿಟ್ಟಿನಲ್ಲಿ ಅವರು ಜಾತ್ಯತೀತ ಸಮಾಜ ನಿರ್ಮಾಣ ಮಾಡುವ ಸಕಾರಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬೇಕು. ಇದಕ್ಕೆ ದಲಿತರ ಕೇರಿಗಳಲ್ಲಿಯೇ ಊಟ ಮಾಡಿ, ಮಲಗುವ ನಿರ್ಧಾರವನ್ನು ಕೈಗೊಳ್ಳಬೇಕು. ಈ ರೀತಿಯ ಕಾರ್ಯಕ್ರಮಗಳಿಗೆ ತಮ್ಮ ಸಹಕಾರವೂ ಇದೆ ಎಂದು ಹೇಳಿದರು.

ಸಮಾಜದ ಅಶಕ್ತರು, ಭಿಕ್ಷುಕರು, ನಿರ್ಗತಿಕರಿಗೆ ಕಂಬಳಿ-ಹೊದಿಕೆ ನೀಡುವ ಎನ್‌ಎಸ್‌ಯುಐ ಸಂಘಟನೆಯ ಕಾರ್ಯ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಈ ರೀತಿಯ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಈ ವರ್ಗಗಳಿಗೆ ಸರ್ಕಾರದಿಂದ ದೊರಕಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದು ಸಲಹೆ ಮಾಡಿದರು.

ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಬಂಗಾರೇಶ್, ಕಾಂಗ್ರೆ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ದೇವೇಂದ್ರಪ್ಪ, ಶಮೀಮ್‌ಬಾನು, ಎನ್‌ಎಸ್‌ಯುಐ ಜಿಲ್ಲಾ ಘಟಕದ ಅಧ್ಯಕ್ಷ ಮಧುಸೂಧನ್, ರವಿಕುಮಾರ್, ಎನ್. ರಮೇಶ್, ರಮೇಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.